Advertisement

ಬೆಳ್ಳಂದೂರು ಹಾದಿ ಹಿಡಿದ ದುಬಾಸಿಪಾಳ್ಯ ಕೆರೆ

12:20 PM Dec 09, 2018 | |

ಕೆಂಗೇರಿ: ಸಮೀಪದ ಉಲ್ಲಾಳ ವಾರ್ಡ್‌ ವ್ಯಾಪ್ತಿಯ ದುಬಾಸಿಪಾಳ್ಯದ ಕೆರೆಗೆ ಸುತ್ತಮುತ್ತಲ ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರನ್ನು ಬಿಡಿಎ ಹರಿಬಿಟ್ಟಿದ್ದು, ಕೆರೆ ಸುತ್ತ ವಾಸಿಸುವ ಜನರಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ ಎಂದು ಜ್ಞಾನಭಾರತಿ ಮೊದಲನೇ ಹಂತದ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ ಸ್ಥಳೀಯ ನಾಗರಿಕರು ಬಿಬಿಎಂಪಿ ಹಾಗೂ ಜಲಮಂಡಳಿಗೆ ಹಲವಾರು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸ್ಥಳಿಯ ಬಿಬಿಎಂಪಿ ಸದಸ್ಯರಿಗೆ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಕಾಡುತ್ತಿದೆ ನೊರೆ ಭೀತಿ: ಕೊಳಚೆ ನೀರು ಕೆರೆ ಸೇರುತ್ತಿರುವ ಪರಿಣಾಮ ನೀರು ಕಲುಷಿತಗೊಂಡಿದ್ದು, ಕೆರೆಯಿಂದ ಹೊರಗೆ ಹರಿದು ಹೋಗುತ್ತಿರುವ ನೀರು ನೊರೆಯಿಂದ ಕೂಡಿರುತ್ತದೆ. ಈ ಮೂಲಕ ದುಬಾಸಿಪಾಳ್ಯ ಕೆರೆ ಮತ್ತೂಂದು ಬೆಳ್ಳಂದೂರು ಕೆರೆಯಾಗುವ ಆತಂಕ ಸೃಷ್ಟಿಯಾಗಿದೆ. 

ಕಲುಷಿತ ಕೆರೆ ನೀರಲ್ಲಿ ಸೊಳ್ಳೆಗಳ ಸಂತತಿ ವೃದ್ಧಿಸಿದ್ದು, ಅಕ್ಕಪಕ್ಕದ ಬಡಾವಣೆಗಳ ನಾಗರಿಕರ ಮೇಲೆ ದಾಳಿ ಮಾಡುತ್ತಿವೆ. ಪರಿಣಾಮ, ಚಿಕೂನ್‌ ಗುನ್ಯ, ಡೆಂಘೀ, ಎಚ್‌1-ಎನ್‌1 ತೀರಿಯ ಮಾರಕ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ.

ಹಲವು ಮಕ್ಕಳಲ್ಲಿ ಚರ್ಮ ರೋಗ, ಕೆಮ್ಮು, ತೀವ್ರ ಜ್ವರದ ರೀತಿಯ ನಾನಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕೆರೆ ಸುತ್ತ ದುರ್ವಾಸನೆ ಹರಡಿದ್ದು, ಬೆಳಗ್ಗೆ ಅಥವಾ ಸಂಜೆ ವಾಯು ವಿಹಾರ ಮಾಡುವವರಿಗೆ ಕಿರಿಕಿರಿಯಾಗುತ್ತಿದೆ ಎಂದು ಹಿರಿಯ ನಾಗರಿಕರು ಬೇಸರ ವ್ಯಕ್ತಪಡಿದ್ದಾರೆ.

Advertisement

ಐದು ಕೋಟಿ ರೂ. ವೆಚ್ಚದಲ್ಲಿ ದುಬಾಸಿಪಾಳ್ಯ ಕೆರೆ ಅಬಿವೃದ್ಧಿ ಮಾಡೊದ ನಂತರ, ಜ್ಞಾನಭಾರತಿ ಬಡಾವಣೆಯ ಎಲ್ಲಾ ಒಳಚರಂಡಿ ಕೊಳಚೆ ನೀರನ್ನು ಬಿಡಿಎ ಕೆರೆಗೆ ಹರಿಸುತ್ತಿದೆ. ಬಿಡಿಎ ಮತ್ತು ಜಲಮಂಡಳಿಯ ಬೇಜವಾಬ್ದಾರಿಯಿಂದ ಸಮಸ್ಯೆ ಉಲ್ಬಣಿಸುತ್ತಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದೇನೆ. ಆದರೆ ಯಾರೂ ಕ್ರಮ ಕೈಗೊಂಡಿಲ್ಲ.
-ಶಾರದಾ ಮುನಿರಾಜು, ಉಲ್ಲಾಳ ವಾರ್ಡ್‌ ಪಾಲಿಕೆ ಸದಸ್ಯೆ

ಕೊಳಚೆ ನೀರಿನಿಂದ ತುಂಬಾ ದುರ್ವಾಸನೆ ಬರುತ್ತಿದ್ದು, ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಜತೆಗೆ ಸೊಳ್ಳೆಗಳ ಕಾಟವೂ ವಿಪರೀತ. ಮಕ್ಕಳು ಆಟವಾಡುವುದಿರಲಿ, ಬಡಾವಣೆಯಲ್ಲಿ ಓಡಾಡುವುದೂ ಕಷ್ಟವಾಗಿದೆ. ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರೆ ಕಾಟಾಚಾರಕ್ಕೆ ಪರಿಶೀಲನೆ ನಡೆಸುತ್ತಾರೆ. ಆದರೆ, ಸಮಸ್ಯೆ ಪರಿಹರಿಸಿಲ್ಲ.
-ಹರೀಶ್‌, ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next