ಮುಂಬಯಿ: ಅರಬ್ ಸಂಯುಕ್ತ ಸಂಸ್ಥಾನದ ದುಬಾೖಯ ಆಲ್ ನಸಾರ್ ಲೀಸರ್ ಲ್ಯಾಂಡ್ ಐಸ್‌ರಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ ನ. 23 ಮತ್ತು ನ. 24 ರಂದು ಎರಡು ದಿನಗಳಲ್ಲಿ ಎನ್‌ಎಂಸಿ ಸಮೂಹ ಸಂಸ್ಥೆಯ ಸ್ಥಾಪಕ ಮತ್ತು ಕಾರ್ಯಾಧ್ಯಕ್ಷ ಡಾ| ಬಿ. ಆರ್. ಶೆಟ್ಟಿ ಅವರ ಘನಾಧ್ಯಕ್ಷತೆಯಲ್ಲಿ ನಡೆಸಲುದ್ದೇಶಿಸಿದ ವಿದೇಶದ ಪ್ರಪ್ರಥಮ ವಿಶ್ವ ತುಳು ಸಮ್ಮೇಳನ ಉದ್ಘಾಟಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ವಿಶ್ವ ತುಳುವರೆ ಪರ್ಬ ಸಮಿತಿಯ ಗೌರವಾಧ್ಯಕ್ಷ, ಪದ್ಮಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಧರ್ಮಪತ್ನಿ ಹೇಮಾವತಿ ಹೆಗ್ಗಡೆ ಅವರನ್ನೊಳಗೊಂಡು ಸಾಂಪ್ರದಾಯಿಕವಾಗಿ ಆಹ್ವಾನ ನೀಡಲಾಯಿತು.
ಜು. 23 ರಂದು ಬೆಳಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿನ ಕಚೇರಿಯಲ್ಲಿ ಡಾ| ವೀರೇಂದ್ರ ಹೆಗ್ಗಡೆ ಅವನ್ನು ಭೇಟಿಗೈದ ಸಮ್ಮೇಳನ ಸಲಹಾ ಸಮಿತಿಯ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅವರು ಸಮ್ಮೇಳನದ ಪ್ರಸ್ತಾವನೆಗೈದು ಸಮ್ಮೇಳನ ಉದ್ಘಾಟಿಸುವಂತೆ ಆಮಂತ್ರಣವನ್ನಿತ್ತು ಭಕ್ತಿಪೂರ್ವಕವಾಗಿ ಆಹ್ವಾನಿಸಿದರು. ಡಾ| ಹೆಗ್ಗಡೆ ಅವರು ಸಾಗರೋತ್ತರ ತುಳುವರ ಸಂಯೋಜನೆಯಲ್ಲಿ ಜರಗುವ ವಿಶ್ವ ತುಳು ಸಮ್ಮೇಳನ ತಯಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಉಪಯುಕ್ತ ಸಲಹೆ ಸೂಚನೆ ನೀಡಿದರು.
ಕೊಲ್ಲಿ ರಾಷ್ಟ್ರದಲ್ಲಿನ ತುಳುವರು, ಅಖೀಲಭಾರತ ತುಳು ಒಕ್ಕೂಟ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಸಾಗರೋತ್ತರ ತುಳುವರ ಸಹಯೋಗದೊಂದಿಗೆ ಆಯೋಜಿಸಲಾಗುವ ವಿಶ್ವ ತುಳು ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಡಾ| ವೀರೆಂದ್ರ ಹೆಗ್ಗಡೆ, ಗೌರವ ಅತಿಥಿಗಳಾಗಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಮತ್ತು ಮುಸ್ಲಿಂ ಧಾರ್ಮಿಕ ಮುಂದಾಳುಗಳು ಮತ್ತು ಕರ್ನಾಟಕ ಹಾಗೂ ಕರಾವಳಿ, ತುಳುನಾಡಿನ ನೂರಾರು ಗಣ್ಯರು ಭಾಗವಹಿಸಲಿದ್ದಾರೆ. ಇದೇ ಶುಭಾವಸರದಲ್ಲಿ ವಿಶ್ವ ತುಳು ಸಮ್ಮೇಳನದ ವಿಶೇಷ ಸ್ಮರಣಸಂಚಿಕೆ ಬಿಡುಗಡೆ ಗೊಳಿಸಲಾಗುವುದು ಎಂದು ಸರ್ವೋತ್ತಮ ಶೆಟ್ಟಿ ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕರ ರಾಜ್ಯ ತುಳು ಅಕಾಡೆಮಿಯ ಅಧ್ಯಕ್ಷ ಎ. ಸಿ. ಭಂಡಾರಿ, ಅಖೀಲಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ್ ಶೆಟ್ಟಿ, ಎಸ್. ಕೆ. ಶ್ರೀಯಾನ್ ಅವರು ಉಪಸ್ಥಿತರಿದ್ದರು.