Advertisement

ದುಬೈ ತೀಯಾ ಸಮಾಜ: ಶಾಲೆಗೆ ಕಂಪ್ಯೂಟರ್‌ ಕೊಡುಗೆ

12:14 PM Jul 22, 2018 | |

ಮುಂಬಯಿ: ತೀಯಾ ಸಮಾಜ ಯುಎಇ ಇದರ ವತಿಯಿಂದ ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರದ ಸಂಚಾಲಕತ್ವದ  ಕನಿಲ ಆಂಗ್ಲ ಮಾಧ್ಯಮಿಕ ಶಾಲೆಗೆ ಸುಮಾರು ಹತ್ತು ಕಂಪ್ಯೂಟರ್‌ ಹಾಗೂ ಅದಕ್ಕೆ ಬೇಕಾದ ಪೀಠೊಪಕರಣ ಹಾಗೂ ಇತರ ವಸ್ತುಗಳನ್ನು ಜು. 16 ರಂದು ಜರಗಿದ ಸಮಾರಂಭದಲ್ಲಿ ನೀಡಲಾಯಿತು.

Advertisement

ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ತೀಯಾ ಸಮಾಜ ಯುಎಇ ಇದರ  ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಮಚಂದ್ರ ಬಂಗೇರ ಮರೋಳಿ ಅವರು ವಿವಿಧ ಸೌಲಭ್ಯಗಳಿಗೆ ಚಾಲನೆ ನೀಡಿದರು. ತೀಯಾ ಸಮಾಜ ಯುಎಇ ಇದರ ಅಧ್ಯಕ್ಷ ಮನೀಷ್‌ ಕರ್ಕೇರ, ಪ್ರಧಾನ ಕಾರ್ಯದರ್ಶಿ ಅಮರ್‌ ಉಮೇಶ್‌ ನಂತೂರು ಹಾಗೂ ಕಾರ್ಯನಿರ್ವಾಹಕ ಸಮಿತಿಯ ಇತರ ಸದಸ್ಯರ ನೇತೃತ್ವದಲ್ಲಿ ತವರೂರಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಈ ರೀತಿಯ ನೆರವನ್ನು ನೀಡಲಾಯಿತು.

ಸುಮಾರು ಹದಿನೈದು ವರ್ಷಗಳ ಹಿಂದೆ ದುಬೈಯ ಜನಪ್ರಿಯ ಸಂಘಟಕ ದಿ| ಉಮೇಶ ನಂತೂರರ ನೇತೃತ್ವದಲ್ಲಿ, ಸಮಾಜ ಸೇವಕಿ ಶ್ರೀಮತಿ ಬಿಸಾಜಾಕ್ಷಿಯವರ ಸಹಾಯದಿಂದ, ಮುಂಬಯಿಯ ಸಮಾಜ ಸೇವಕ, ಪತ್ರಕರ್ತ ಈಶ್ವರ ಎಂ. ಐಲ್‌ ಇವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ತೀಯಾ ಸಮಾಜ ದುಬೈ ಇದೀಗ ತವರೂರಲ್ಲಿ ನೆಲೆಸಿರುವ ಸಮಾಜದ ಸ್ಥಾಪಕ ಉಪಾಧ್ಯಕ್ಷರುಗಳಾದ ಸದಾಶಿವ ಬಿ. ಎಂ., ಯೋಗೇಶ್‌ ಉಳ್ಳಾಲ…, ಸ್ಥಾಪಕ ಕೋಶಾಧಿಕಾರಿ ನಾಗೇಶ್‌ ಸುವರ್ಣ ಮತ್ತಿತರ ನೇತೃತ್ವದಲ್ಲಿ ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಸಂಘಟನ ಸ್ಥಾಪನೆಯಾದ ಕೆಲವೇ ಸಮಯದಲ್ಲಿ ಮುಂಬಯಿಯ ಉದ್ಯಮಿ ಕುಮಾರ್‌ ಬಂಗೇರರ ಪ್ರೊತ್ಸಾಹದೊಂದಿಗೆ ದಾನಿಗಳ ಸಹಾಯದಿಂದ ಊರಲ್ಲಿ ಶೈಕ್ಷಣಿಕ ನೆರವನ್ನು ನೀಡಲು ಸೂಕ್ತ ಮೊತ್ತವನ್ನು ಠೇವಣಿಯಾಗಿಟ್ಟು ಕಳೆದ ಹಲವಾರು ವರ್ಷಗಳಿಂದ ಮಂಗಳೂರು, ಮಂಜೇಶ್ವರ ಪರಿಸರಗಳಲ್ಲಿ ಉತ್ತಮ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸುತ್ತಾ ಬರುತ್ತಿದೆ. ಮುಂದಿನ ವರ್ಷದ ಆದಿಯಲ್ಲಿ ತೀಯಾ ಸಮಾಜ ಯುಎಇ ತನ್ನ ಹದಿನೈದನೆಯ ಹುಟ್ಟು ಹಬ್ಬವನ್ನು ಅದ್ದೂರಿಯಿಂದ ಆಚರಿಸಲಿದೆ ಎಂದು ಇದೇ ಸಂದರ್ಭದಲ್ಲಿ  ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next