Advertisement

ರಾಯರ ಚಿಂತೆ ಬಹೂರಾನಿಯ ದುಬೈ ನೆಕ್ಲೇಸ್

04:30 PM Aug 28, 2017 | Sharanya Alva |

ಬಹಳ ಜನಕ್ಕೆ ತಿಳಿದಿಲ್ಲ. ನಮ್ಮ ಗುರುಗುಂಟಿರಾಯರು ಒಮ್ಮೊಮ್ಮೆ ಭಾವುಕರಾಗುವುದೂ ಇದೆ. ಅವರು ಯಾವತ್ತೂ
ರೇಗಾಡಿಕೊಂಡು ಅವಾಜ್‌ ಹಾಕುತ್ತಾ ತಿರುಗಾಡುತ್ತಾರೆ ಎಂಬ ಕಲ್ಪನೆ ಹಲವರಿಗಿದೆ. ಆದರೆ ಅದು ಸರಿಯಲ್ಲ. ಒಮ್ಮೊಮ್ಮೆ ಬಹಳ ಭಾವುಕರಾಗಿ ಮನಮಿಡಿಯುವಂತಹ ಕ್ಷಣಗಳೂ ಇಲ್ಲದಿಲ್ಲ. ಮುಖ್ಯವಾಗಿ ರಾಯರಿಗೆ ಮೃದುಭಾವ ಇರುವುದು ಸೊಸೆಯ ಮೇಲೆ, ಅದು ಬಿಟ್ಟರೆ ಮೊಮ್ಮಗನ ಮೇಲೆ. ಮಗನ ಮೇಲಂತೂ ಇಲ್ಲವೇ ಇಲ್ಲ ಅನ್ನಬಹುದು. ಅವನೊಬ್ಬ ಯೂಸ್ಲೆಸ್‌ ಎನ್ನುವ ಸಿಡುಕುತನವನ್ನು ಇದೇ ಕಾಕು ಅಂಕಣದಲ್ಲಿ ಬಹಳಷ್ಟು ಬಾರಿ ಕಾರಿಕೊಂಡಿರುವುದನ್ನು ನೀವೆಲ್ಲಾ ನೋಡಿರಬಹುದು.

Advertisement

ಆದರೆ ಸೊಸೆಯ ಬಗ್ಗೆ ಹಾಗಲ್ಲ. ಮನೆಯಲ್ಲೂ ಕೆಲಸ ಮಾಡುತ್ತಾಳೆ, ಆಫೀಸಿಗೂ ಹೋಗಿ ದುಡಿಯುತ್ತಾಳೆ, ಮೊಮ್ಮಗನನ್ನೂ ನೋಡಿಕೊಳ್ಳುತ್ತಾಳೆ, ತನ್ನನ್ನೂ ಆರೈಕೆ ಮಾಡುತ್ತಾಳೆ, ಅಲ್ಲದೆ ಮಗರಾಯನ ಕಾಟವನ್ನು ಸೈಲೆಂಟಾಗಿ ಸಹಿಸಿಕೊಳ್ಳುತ್ತಾಳೆ. ಎಲ್ಲಕ್ಕಿಂತ ಯಾವುದೇ ವ್ಯವಹಾರವನ್ನು ಜಾಣ್ಮೆಯಿಂದ ನಿಭಾಯಿಸುತ್ತಾಳೆ. ಇದನ್ನೆಲ್ಲಾ ಆಲೋಚಿಸುತ್ತಾ ಕೂತರೆ ರಾಯರಿಗೆ ಒಮ್ಮೊಮ್ಮೆ ಸೊಸೆಯ ಮೇಲೆ ಮಮತೆ ಉಕ್ಕಿ ಹರಿಯುತ್ತದೆ. ತನಗಾಗಿ ಅಂತ ವಿಶೇಷವಾಗಿ ನಾಲ್ಕು ಬಳೆಯನ್ನೂ ಮಾಡಿಸಿಕೊಳ್ಳದೆ ಒಂದು ಆರ್ಡಿನರಿ ಚೈನ್‌ ಹಾಕುತ್ತಾ ತಿರುಗಾಡುವ ಸೊಸೆಗೆ ತಮ್ಮ ಪಿಂಚಣಿ ದುಡ್ಡಿನಿಂದಲೇ ಒಂದು ನೆಕ್ಲೇಸ್‌ ಉಡುಗರೆ ಕೊಡಬೇಕೆಂದು ರಾಯರು ಹಲವು ಬಾರಿ ಅಂದುಕೊಂಡದ್ದು ಉಂಟು. ಅದಕ್ಕೆ ಸರಿಯಾಗಿ ದೀಪಾವಳಿ ರಜೆಗೆ ಅಂತ ಮಂಗಳೂರಿನಲ್ಲಿರುವ ತಮ್ಮ ಅಕ್ಕನ ಮಗ ದುಬೈಗೆ ಫ್ಯಾಮಿಲಿ ಜತೆ ಹೋಗಿ ಬರುವ ಸಮಾಚಾರ ರಾಯರ ಕಿವಿಗೆ ಬಿತ್ತು. ಸರಿ, ಇದೇ ಸರಿಯಾದ ಸಂದರ್ಭ ಅಂತ ತನ್ನ ಬಹೂರಾನಿಗೆ ಒಂದು ನೆಕ್ಲೆಸ್‌ ತರಲು ಅಕ್ಕನ ಮಗನಲ್ಲಿ ಹೇಳಿದರೆ ಹೇಗೆ ಎನ್ನುವ ವಿಚಾರ ರಾಯರನ್ನು ಆವರಿಸಿಕೊಂಡಿತು. ದುಬೈನ ಗೋಲ್ಡ್ ಸೂಕ್‌ಗೆ ಹೋದರೆ ಅಲ್ಲಿ ಸಿಗದ ಚಿನ್ನಾಭರಣ ಇಲ್ಲ, ಅದೂ ಅತಿ ಕಡಿಮೆ ಬೆಲೆಗೆ. ನಾಲ್ಕು ಪವನಿನಲ್ಲಿ ಒಂದು ಒಳ್ಳೆಯ ನೆಕ್ಲೇಸ್‌ ಸಿಗಬಹುದೇನೋ? ಜತೆಗೆ ಒಂದೆರಡು ಗೋಲ್ಡ್ ಕಾಯಿನ್ ಕೂಡ ತರಿಸಿದರೆ ಹೇಗೆ? ಎಂದು ರಾಯರು ಅದಕ್ಕಾಗುವ ವೆಚ್ಚದ ಲೆಕ್ಕ ಹಾಕತೊಡಗಿದರು.

ದುಬೈಯಲ್ಲಿ ಚಿನ್ನದ ಬೆಲೆ ಕಡಿಮೆಯೇನೋ ಹೌದು ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಾಗ ಕಸ್ಟಮ್ಸ್…ನವರು ಡ್ನೂಟೀ-ಗೀಟೀ ಅಂತ ಎಷ್ಟು ಚಾರ್ಚ್‌ ಹಾಕಬಹುದು? ಅಥವಾ ಚಿನ್ನ-ಗಿನ್ನ ತರುವುದಕ್ಕೇ ನಿರ್ಬಂಧವೇನಾದರು ಇದೆಯೇ? -ಸೊಸೆಯ ನೆಕ್ಲೇಸ್‌ ಚಿಂತೆಯಲ್ಲಿ ರಾಯರ ಮಂಡೆ ನಿಧಾನವಾಗಿ ಬೆಚ್ಚಗಾಗತೊಡಗಿತು.

***
ಒಬ್ಟಾತ ಪಯಾಣಿಕ ಭಾರತಕ್ಕೆ ಬಂದಿಳಿಯುವಾಗ ತನ್ನೊಡನೆ ಏನೆಲ್ಲಾ ವಸ್ತುಗಳನ್ನು ತರಬಹುದು -ತರಬಾರದು? ತರಬಹುದಾದ ವಸ್ತುಗಳು ಯಾವ ಮಿತಿಯೊಳಗೆ ಕರಮುಕ್ತ ವಾಗಿರುತ್ತವೆ? ಮಿತಿ ಮೀರಿದರೆ ಅವಕ್ಕೆ ಎಷ್ಟು ತೆರಿಗೆ ತೆರಬೇಕು? ಇತ್ಯಾದಿ ವಿಚಾರಗಳನ್ನು ಸ್ಪಷ್ಟಪಡಿಸುವ ಕಾನೂನೇ ಬ್ಯಾಗೇಜ್‌ ರೂಲ್ಸ್ ಇದು ಬಿಸಿನೆಸ್‌ ನೆಲೆಯಲ್ಲಿ ಮಾಡುವ ಆಮದು ಕಾನೂನಿಗಿಂತ ಭಿನ್ನ. ಇದು ಪ್ರಯಾಣಿಕರು ಬರುವಾಗ ತಮ್ಮ ಜತೆ ತರುವ ವಸ್ತುಗಳಿಗೆ ಮಾತ್ರ ಪ್ರತ್ಯೇಕವಾಗಿ ಅನ್ವಯವಾಗುವ ಕಾನೂನು. ಯಾವುದಾದರೂ ಒಂದು ವಸ್ತುವನ್ನು ತೆಗೆದುಕೊಂಡರೆ ಅದಕ್ಕೆ ವಾಣಿಜ್ಯ ನೆಲೆಯ ಆಮದು ಕಾನೂನು ಮತ್ತು ವೈಯಕ್ತಿಕ ನೆಲೆಯ ಬ್ಯಾಗೇಜ್‌ ಕಾನೂನು ಬೇರೆಬೇರೆಯಾಗಿರಬಹುದು. ಈ ಬ್ಯಾಗೇಜ್‌ ಕಾನೂನಿನಲ್ಲಿ
ವೈಯಕ್ತಿಕ ವಸ್ತುಗಳು, ಸಿಗರೆಟ್‌, ಮದ್ಯ, ಲ್ಯಾಪಾrಪ್‌ನಂಥ ಹತ್ತು ಹಲವು ವಸ್ತುಗಳ ಬಗ್ಗೆ ಕಾನೂನುಗಳು ಇವೆಯಲ್ಲದೆ ಚಿನ್ನದ ಬಗ್ಗೆಯೂ ಸ್ಪಷ್ಟವಾದ ಕಾನೂನು ಇದೆ. ಸದ್ಯಕ್ಕೆ ಭಾರತದಲ್ಲಿ ಬ್ಯಾಗೇಜ್‌ ರೂಲ್ಸ್ 2016 ಚಾಲ್ತಿಯಲ್ಲಿದೆ.

ಚಿನ್ನದ ಬ್ಯಾಗೇಜ್‌ ರೂಲ್ಸ್: ಪ್ರಯಾಣಿಕ ತಾನು ಭಾರತಕ್ಕೆ ಬಂದಿಳಿಯುವಾಗ ತನ್ನೊಡನೆ ತರಬಹುದಾದ ಚಿನ್ನಕ್ಕೆ ನಿರ್ದಿಷ್ಟ ಬ್ಯಾಗೇಜ್‌ ರೂಲ್ಸ್ ಅನ್ವಯವಾಗುತ್ತದೆ. ಈ ರೂಲ್ಸ್ ಪ್ರಯಾಣಿಕ ವಿದೇಶದಲ್ಲಿ ಎಷ್ಟು ಸಮಯ ಕಳೆದಿರುತ್ತಾನೆ ಎನ್ನುವುದನ್ನು ಹೊಂದಿಕೊಂಡಿರುತ್ತದೆ ಹಾಗೂ ಈ ರೂಲ್ಸ್ ಚಿನ್ನಕ್ಕೆ ಬೇರೆ ಮತ್ತು ಚಿನ್ನಾಭರಣಗಳಿಗೆ ಬೇರೆ ಇರುತ್ತವೆ. ಅವು ಈ ಕೆಳಗಿನಂತಿವೆ:

Advertisement

1. ಕನಿಷ್ಠ 6 ತಿಂಗಳು: ಕನಿಷ್ಠ 6 ತಿಂಗಳುಗಳ ಕಾಲ ಭಾರತದಿಂದ ಹೊರಗೆ ವಾಸ ಮಾಡಿ ವಾಪಾಸಾಗುವ ಭಾರತೀಯ ಪಾಸ್‌ ಪೋರ್ಟ್‌ ಹೊಂದಿರುವ ಪ್ರಯಾಣಿಕನಿಗೆ ತನ್ನ ಜತೆ 1 ಕೆಜಿಯವರೆಗೆ ಚಿನ್ನ ತರುವ ಅನುಮತಿ ಇದೆ. ಇದು ಚಿನ್ನದ ನಾಣ್ಯ, ಬಿಸ್ಕೆಟ್‌, ಅಥವಾ ಚಿನ್ನಾಭರಣವಾಗಿರಬಹುದು. ಯಾವುದೇ ರೂಪದಲ್ಲಿದ್ದರೂ ಕ್ಯಾರಟ್‌ ಪ್ರಮಾಣದಲ್ಲಿದ್ದರೂ 1 ಕಿಲೋ ಚಿನ್ನವನ್ನು ಬ್ಯಾಗೇಜ್‌ ರೂಲ್ಸ… ಅಡಿಯಲ್ಲಿ ತನ್ನೊಡನೆ ತರಲು ಸಾಧ್ಯ. ಅನುಮತಿಯೇನೋ ಇದೆ ಆದರೆ ಇಲ್ಲಿ ಎರಡು ಮುಖ್ಯ ಷರತ್ತುಗಳಿವೆ. ಮೊದಲನೆಯ ಷರತ್ತು ಏನೆಂದರೆ ಇಲ್ಲಿ ಪ್ರಯಾಣಿಕ ಕನಿಷ್ಠ 6 ತಿಂಗಳುಗಳ ಕಾಲ ಪರದೇಶದಲ್ಲಿ ವಾಸವಾಗಿದ್ದಿರಬೇಕು. (ಆ 6 ತಿಂಗಳುಗಳಲ್ಲಿ ನಡು ನಡುವೆ ಕೆಲ ಬಾರಿ ಭಾರತಕ್ಕೆ “ಶಾರ್ಟ್‌ ವಿಸಿಟ್‌’ ನೀಡಿದ್ದರೂ ಅಭ್ಯಂತರವಿಲ್ಲ. ಅಂತಹ ಶಾರ್ಟ್‌ ವಿಸಿಟ್‌ ಅವಧಿ ಒಟ್ಟಾರೆ 30 ದಿನ ಮೀರಿರಬಾರದು ಅಷ್ಟೆ) ಆದರೆ ಕನಿಷ್ಠ 6 ತಿಂಗಳ ಅವಧಿ ಹೊರಗೆ ವಾಸವಾಗಿಲ್ಲದೆ ಇದ್ದವರು, ಅಂದರೆ ಒಂದೆರಡು ವಾರಕ್ಕೆ ಒಂದೆರಡು ದಿನಗಳಿಗೆ ಪರದೇಶಕ್ಕೆ ಹೋದವರಿಗೆ ಈ ಕಾನೂನು ಅನ್ವಯಿಸುವುದಿಲ್ಲ. ಇದನ್ನು ಅರಿಯದೆ ನಮ್ಮಲ್ಲಿಂದ ದುಬೈಗೆ ಒಂದೆರಡು ವಾರಕ್ಕೆ/ದಿನಗಳ ಮಟ್ಟಿಗೆ ಹೋಗಿ ಬರುವವರೆಲ್ಲಾ ನಗ ನಾಣ್ಯಗಳ ಗಂಟು ಕಟ್ಟಿಕೊಂಡು ಬಂದು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಕೈಯಲ್ಲಿ ಕಷ್ಟ ಅನುಭವಿಸುತ್ತಾರೆ.

ಎರಡನೆಯ ಷರತ್ತು ಏನೆಂದರೆ ಈ ಚಿನ್ನ/ಚಿನ್ನಾಭರಣಕ್ಕೆ ಸೀಮಾ ಶುಲ್ಕ (ಕಸ್ಟಮ್ಸ್ ಡ್ನೂಟಿ) ಕಟ್ಟಬೇಕು. ಇದು “ಫ್ರೀ ಇಂಪೋರ್ಟ್‌’ ಅಲ್ಲವೇ ಅಲ್ಲ. ಇದಕ್ಕೆ ಚಿನ್ನದ ಮೌಲ್ಯದ ಮೇಲೆ 10% ಡ್ನೂಟಿ ಕಟ್ಟಬೇಕು. 3% ಸೆಸ್‌ ಸಹಿತ ಇದು 10.3% ಮತ್ತು ಈ ಶುಲ್ಕವನ್ನು ವಿದೇಶೀ ಕರೆನ್ಸಿಯಲ್ಲಿಯೇ ಪಾವತಿಸಬೇಕು. ಭಾರತೀಯ ರೂಪಾಯಿಯಲ್ಲಿ ಪಾವತಿ ಮಾಡಲು ಬರುವುದಿಲ್ಲ. ಹಾಗಾಗಿ 6 ತಿಂಗಳು ಮೀರಿ ವಿದೇಶದಲ್ಲಿ ವಾಸವಾಗಿದ್ದು ಭಾರತಕ್ಕೆ ಬರುತ್ತಿರುವ ಭಾರತೀಯ ಪಾನ್ಪೋರ್ಟ್‌/ಪಿಐಒ ಕಾರ್ಡ್‌
ಹೊಂದಿರುವ ಪ್ರಯಾಣಿಕರು ಡ್ನೂಟೀ ಕಟ್ಟಲು ಸಾಕಷ್ಟು ವಿದೇಶಿ ಕರೆನ್ಸಿಯನ್ನು ಜತೆಗೆ ತರಬೇಕು. ಈ 1 ಕೆಜಿಯೂ ಕರಮುಕ್ತವೆಂಬ ತಪ್ಪು ಕಲ್ಪನೆಯಿಂದ ಅಥವಾ ಭಾರತೀಯ ರುಪಾಯಿಯಲ್ಲಿ ಕರ ಕಟ್ಟುವೆನೆಂಬ ತಪ್ಪು ಭಾವನೆಯಿಂದ ತೊಂದರೆಗೊಳಗಾಗುವವರ ಸಂಖ್ಯೆ ಸಣ್ಣದೇನಲ್ಲ. 

ಕಸ್ಟಮ್ಸ್ ಡ್ಯೂಟಿಯ ಬಗ್ಗೆ ಮಾತನಾಡುವಾಗ ಯಾವ ಮೌಲ್ಯದ ಮೇಲೆ ಡ್ಯೂಟಿ ವಿಧಿಸಲಾಗುತ್ತದೆ ಎನ್ನುವ ಸ್ಪಷ್ಟತೆಯೂ ಬೇಕು. ಅಂದರೆ ಚಿನ್ನದ ಮೌಲ್ಯವನ್ನು ನೀವು ಪರದೇಶದ ಅಂಗಡಿಯಲ್ಲಿ ನೀಡಿದ ಬೆಲೆ ಮತ್ತು ಅದರ ರಶೀದಿಯನ್ನು ಆಧರಿಸಿ ಯಾವತ್ತೂ ಲೆಕ್ಕ ಹಾಕಲಾಗುವುದಿಲ್ಲ. ಕಸ್ಟಮ್ಸ್ ಇಲಾಖೆಯವರ ಕೈಯಲ್ಲಿ ಅವರದ್ದೇ ಆದ ಸರಕಾರಿ ನಿಗದಿತ ಆಂತರಿಕ ಬೆಲೆಪಟ್ಟಿ ಇರುತ್ತದೆ. ನಿಮ್ಮ ಚಿನ್ನದ ಮೇಲೆ ಹಾಕುವ ಸೀಮಾ ಶುಲ್ಕ ಆ ದರಪಟ್ಟಿಯನ್ನೇ ಅನುಸರಿಸಿರುತ್ತದೆ.

ಇದು ಭಾರತೀಯ ಕಾನೂನು. ಇದನ್ನ ಅರಿಯದೆ ವಿನಾಕಾರಣ ಕಸ್ಟಮ್ಸ್ ಅಧಿಕಾರಿಗಳ ಮೇಲೆ ಎಗರಾಡುವುದು ಸಭ್ಯರ ಲಕ್ಷಣವಲ್ಲ. ಇಲ್ಲಿ ಇನ್ನೊಂದು ಮುಖ್ಯ ವಿಚಾರವೇನೆಂದರೆ ಒಬ್ಟಾತ ಅರ್ಹ ಪ್ರಯಾಣಿಕ ಈ ರೀತಿ ಚಿನ್ನ ಆಮದಿಗೆ ಹೊರಟರೆ ಅದನ್ನು ತನ್ನ ಕೈಯಲ್ಲಿಯೇ ತರಬೇಕೆಂಬ ಕಡ್ಡಾಯವೇನಿಲ್ಲ. ತಾನು ಭಾರತಕ್ಕೆ ಬಂದಿಳಿದು 15 ದಿನಗಳ ಒಳಗಾಗಿ   Unaccompanied baggage ರೂಪದಲ್ಲಿಯೂ ಆಮದು ಮಾಡಿಕೊಳ್ಳಬಹುದು. ಪರ್ಯಾಯವಾಗಿ, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಅಥವಾ ಮಿನರಲ್ಸ್‌ ಆ್ಯಂಡ್‌ ಮೆಟಲ್ಸ್‌ ಟ್ರೇಡಿಂಗ್‌ ಕಾರ್ಪೊರೇಶನ್‌ (ಎಂಎಂಟಿಸಿ)ಯವರ ಗೋದಾಮಿನಿಂದ ಖರೀದಿ ಕೂಡ ಮಾಡಬಹುದು.

2. ಕನಿಷ್ಠ 1 ವರ್ಷ: ಕನಿಷ್ಠ 1 ವರ್ಷ ಹೊರಗೆ ವಾಸ ಮಾಡಿ ಬರುವ ಭಾರತೀಯರಿಗೆ (ನಿವಾಸಿ/ಅನಿವಾಸಿ/ಪಿಐಒ) ಈ
ಮೇಲಿನ ಸವಲತ್ತುಗಳಲ್ಲದೆ ಇನ್ನೂ ಒಂದು ವಿಶೇಷ ಸವಲತ್ತು ನೀಡಲಾಗಿದೆ. ಅದೇನೆಂದರೆ ಕರಮುಕ್ತ ಚಿನ್ನಾಭರಣಗಳ
ಆಮದು. ಅಂದರೆ ಕನಿಷ್ಠ 1 ವರ್ಷ ಪರದೇಶದಲ್ಲಿದ್ದು ಇಲ್ಲಿಗೆ ಬರುವ ಪ್ರಯಾಣಿಕರಿಗೆ ಕೇವಲ ಚಿನ್ನಾಭರಣಗಳ ಮೇಲೆ ಯಾವುದೇ ಶುಲ್ಕವಿಲ್ಲದೆ ಒಳತರಬಹುದು. ಇದಕ್ಕೆ ಯಾವುದೇ ಶುಲ್ಕವಿಲ್ಲದಿದ್ದರೂ ಓರ್ವ ಗಂಡಸಿಗೆ 10 ಗ್ರಾಮ್‌ ಅಥವಾ ರೂ 50,000 ಮೌಲ್ಯದ ಆಭರಣ ಹಾಗೂ ಓರ್ವ ಮಹಿಳೆಗೆ 20 ಗ್ರಾಮ್‌ ಅಥವಾ ರೂ. 1,00,000 ಮೌಲ್ಯದ ಆಭರಣದ ಮಿತಿಯನ್ನು ಹೇರಲಾಗಿದೆ. ಆಭರಣದಲ್ಲಿ ಚಿನ್ನ ಮಾತ್ರವೇ ಈ ಕರಮುಕ್ತ ಆಮದಿಗೆ ಅರ್ಹವಾಗುತ್ತದೆ. ಬೆಲೆಬಾಳುವ ಕಲ್ಲುಗಳಿಗೆ ಆಮದು ಶುಲ್ಕ ಪ್ರತ್ಯೇಕವಾಗಿ ನೀಡಬೇಕಾಗುತ್ತದೆ. ಅಲ್ಲದೆ ಇಲ್ಲಿ ಆಭರಣವೆಂದರೆ ಆಭರಣ ಮಾತ್ರ; ಚಿನ್ನದ ನಾಣ್ಯ/ಬಿಸ್ಕೆಟ್‌ ಆಭರಣವೆಂದು
ಪರಿಗಣಿಸಲಾಗುವುದಿಲ್ಲ.

3. ಇತರರು: ಮೇಲೆ ಹೇಳಿದ ಕನಿಷ್ಠ ಅವಧಿಯನ್ನು ಹೊರಗೆ ವಾಸ ಮಾಡದೆ ಕೇವಲ ಪ್ರಯಾಣಿಕರಂತೆ ಹೋಗಿ
ಬರುವ ಪ್ರಯಾಣಿಕರಿಗೆ ಚಿನ್ನ/ಚಿನ್ನಾಭರಣಗಳನ್ನು ತರುವ ಯಾವುದೇ ರಿಯಾಯಿತಿಯುಳ್ಳ ಬ್ಯಾಗೇಜ್‌ ಸೌಲಭ್ಯ
ಇರುವುದಿಲ್ಲ. ಒಂದು ವೇಳೆ ತಂದರೆ ಅಂತಹ ಆಮದಿನ ಮೇಲೆ 36.05% (35%+3% ಸೆಸ್‌)ಸೀಮಾ ಶುಲ್ಕ ನೀಡಬೇಕಾಗುತ್ತದೆ. 

ಹಾಗಾದ ಕಾರಣ ಶೂನ್ಯ ಶುಲ್ಕದ ಚಿನ್ನಾಭರಣ ಹಾಗೂ 10% ಶುಲ್ಕದ ಚಿನ್ನದ ಬಗ್ಗೆ ಇರುವ ಷರತ್ತುಗಳನ್ನು ಸರಿಯಾಗಿ ಅಧ್ಯಯನ ಮಾಡಿಕೊಂಡೇ ಮುಂದುವರಿಯಬೇಕು. ಸರಿಯಾದ ಮಾಹಿತಿ ಹೊಂದಿರುವುದರಿಂದ ವಿಮಾನ ನಿಲ್ದಾಣದಲ್ಲಿ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಬಹುದು.

ಗ್ರೀನ್‌/ರೆಡ್‌ ಚ್ಯಾನಲ್: ಆಮದು ಶುಲ್ಕ ಲಾಗೂ ಆಗುವಂತಹ ಯಾವುದೇ ಸಾಮಗ್ರಿ ಇದ್ದಲ್ಲಿ ಅಂತಹ ಪ್ರಯಾಣಿಕರು ರೆಡ್‌
ಚ್ಯಾನೆಲ್‌ನಲ್ಲಿಯೇ ಬಂದು ಅವನ್ನು ಕಸ್ಟಮ್ಸ ಅಧಿಕಾರಿಗಳ ಎದುರು ಘೋಷಿಸಬೇಕಾಗುತ್ತದೆ. ಇದು ಕಾನೂನು. ಕರಾರ್ಹ
ವಸ್ತುವನ್ನು ಇಟ್ಟಿಕೊಂಡೂ ಗ್ರೀನ್‌ ಚ್ಯಾನಲ್‌ನಲ್ಲಿ ಬಂದು ಸಿಕ್ಕಿ ಬಿದ್ದಲ್ಲಿ ನಿಮ್ಮನ್ನು ಅಪರಾಧಿಯೆಂದು ಪರಿಗಣಿಸಲಾಗುತ್ತದೆ.
ಹಾಗೂ ನೀವು ಕರ ಮತ್ತು ಅದರ ಮೇಲೆ ದಂಡ ಕೊಡಲು ಸಿದ್ಧರಾಗಬೇಕು. ದೊಡ್ಡ ಪ್ರಮಾಣದಲ್ಲಿ ಚಿನ್ನ ಹೊಂದಿದ್ದರೆ ಸ್ಮಗ್ಲಿಂಗ್‌ ಅಪರಾಧದ ಅಡಿಯಲ್ಲಿ ಬಂಧನವೂ ಆಗಬಹುದು. ಈ ಕಸ್ಟಮ್ಸ್ ಕಾನೂನು ಎನ್ನುವುದು ಒಂದು ರೀತಿ ಧರ್ಮಶಾಸ್ತ್ರವಿದ್ದಂತೆ. ನಿಮ್ಮ ಸದುದ್ದೇಶ ಮನದಲ್ಲಿ ಇದ್ದಿತ್ತು ಎಂದರೆ ಸಾಲದು, ನಡವಳಿಕೆಯಲ್ಲೂ ಕಾಣಿಸಿಕೊಳ್ಳಬೇಕು.

ವಿದೇಶಿ ವಿನಿಮಯ: ನೀವು ಕಟ್ಟಬೇಕಾದ ಸುಂಕ ವಿದೇಶಿ ಕರೆನ್ಸಿಯಲ್ಲಿ ನೀಡಬೇಕಾಗುತ್ತದೆ. ಇದು ಕಾನೂನು. ಹಾಗಾಗಿ
ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಯೇ ನಿಮ್ಮ ಪ್ರಯಾಣ ಆರಂಭಿಸಬೇಕು. ಸಾಕಷ್ಟು ಕರೆನ್ಸಿ ಇಲ್ಲದಿದ್ದಲ್ಲಿ ಕಸ್ಟಮ್ಸ… ನವರು ನಿಮ್ಮ ಚಿನ್ನವನ್ನು ತಮ್ಮ ಕಸ್ಟಡಿಯಲ್ಲಿಟ್ಟು ಆ ಮೇಲೆ ಕಟ್ಟಿ ಬಿಡಿಸಿಕೊಳ್ಳಲು ಹೇಳಬಹುದು ಅಥವಾ ನೀವು ವಾಪಸು ಹೋಗುವಾಗ ನಿಮಗೆ ಹಿಂದಿರುಗಿಸುವ ಸೂಚನೆ ನೀಡಬಹುದು. ಒಟ್ಟಾರೆ ವಿದೇಶಿ ಕರೆನ್ಸಿಯಿಲ್ಲದೆ ನಿಮ್ಮ ಚಿನ್ನ ಭಾರತದೊಳಕ್ಕೆ ಪ್ರವೇಶಿಸುವಂತಿಲ್ಲ.

ನಿಮ್ಮದೇ ಆಭರಣ: ನೀವು ಭಾರತದಿಂದ ಪರದೇಶಕ್ಕೆ ಹೋಗುವಾಗಲೇ ಧರಿಸಿದ್ದ ಆಭರಣವನ್ನು ಮತ್ತೆ ಮರಳಿ
ಭಾರತಕ್ಕೆ ಬರುವಾಗ ಯಾವ ಲೆಕ್ಕದಲ್ಲಿ ತರುವುದು? ಅದನ್ನೂ ಹಿಡಿದು ಕಸ್ಟಮ್ಸ್ನವರು ಕಷ್ಟ ಕೊಟ್ಟರೆ ಏನು ಗತಿ ಎನ್ನುವುದು ಕೆಲವರ ಪ್ರಶ್ನೆ. ಚಿಕ್ಕಪುಟ್ಟ ಪ್ರಮಾಣದಲ್ಲಿ ಧರಿಸಿಕೊಂಡಿರುವ ಆಭರಣವಾದರೆ ಗೊಂದಲವಾಗುವುದಿಲ್ಲ. (ಉದಾ: ಒಂದು ರಿಂಗ್‌, ಒಂದು ಚೈನ್‌, ಒಂದು ಟಿಕ್ಕಿ) ಆದರೆ ತುಸು ದೊಡ್ಡ ಪ್ರಮಾಣದಲ್ಲಿ ಆಭರಣವನ್ನು ಭಾ ರತದಿಂದ ಹೊರಕ್ಕೆ ಕೊಂಡೊಯ್ಯುವಾಗ ಕಸ್ಟಮ್ಸ್ ಅಧಿಕಾರಿಗಳಿಗೆ ಅದನ್ನು ತೋರಿಸಿ ಒಂದು ಎಕ್ಸ್ಫೋರ್ಟ್ ಸರ್ಟಿಫಿಕೇಟ್ ಮಾಡಿಸಿಕೊಂಡರೆ ಅದನ್ನು ಮರಳಿ ತರುವಾಗ ದಾಖಲೆಯಾಗಿ ತೋರಿಸಬಹುದು. ಈ ಮೂಲಕ ಅನಗತ್ಯ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.

*ಜಯದೇವ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next