Advertisement

Dubai Green Planet: ವಿಶ್ವದ ಗಮನ ಸೆಳೆಯುವ ದುಬೈ ಗ್ರೀನ್‌ ಪ್ಲಾನೆಟ್‌ ಬೇಸಗೆ ಶಿಬಿರಾನುಭವ

04:18 PM Aug 31, 2024 | Team Udayavani |

ಅರಬ್‌ ಸಂಯುಕ್ತ ಸಂಸ್ಥಾನ ಮರುಭೂಮಿಯಲ್ಲಿ ಅರಳಿರುವ ಸುಂದರ ಆಕರ್ಷಕ ಗಗನಚುಂಬಿ ಕಟ್ಟಡಗಳ ಅತ್ಯಾಧುನಿಕತೆಯ ಜತೆಯಲ್ಲಿ ಪಾರಂಪರಿಕ ವಾಸ್ತು ಶಿಲ್ಪಗಳನ್ನು ಉಳಿಸಿಕೊಂಡಿರುವ ನಗರವಾಗಿದೆ. ಜೂನ್‌ ತಿಂಗಳಿನಿಂದ ಬಿಸಿಲಿನ ಬೇಗೆ ಪ್ರಾರಂಭವಾಗಿ, ಜುಲೈ, ಆಗಸ್ಟ್‌ ತಿಂಗಳಿನಲ್ಲಿ ಪ್ರಕರತೆ ಹೆಚ್ಚಾಗಿ ಸೆಪ್ಟಂಬರ್‌ ಅನಂತರ ಕಡಿಮೆಯಾಗಿ ಉತ್ತಮ ಹವೆಯನ್ನು ಹೊಂದಿರುವ ನಾಡು ಯುನೈಟೆಡ್‌ ಅರಬ್‌ ಎಮಿರೇಟ್ಸ್‌.

Advertisement

ಶೈಕ್ಷಣಿಕವಾಗಿ ಜುಲೈ, ಆಗಸ್ಟ್‌ ತಿಂಗಳು ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಹೆಚ್ಚಿನ ಅನಿವಾಸಿ ಪ್ರಜೆಗಳು ತಮ್ಮ ದೇಶಗಳಿಗೆ ಹೋಗಿ ರಜೆಯನ್ನು ಅನುಭವಿಸಿ ಬರುತ್ತಾರೆ. ಇಲ್ಲಿಯೆ ಉಳಿದಿರುವ ಮಕ್ಕಳಿಗೆ ಬೇರೆ ಬೇರೆ ರೀತಿಯ ಬೇಸಗೆ ಶಿಬಿರಗಳು ಹಲವು ಕಡೆಗಳಲ್ಲಿ ಕಾರ್ಯೋನ್ಮುಖವಾಗಿರುತ್ತವೆ. ದುಬೈಯ ಹೃದಯ ಭಾಗದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಸಿಟಿ ವಾಕ್‌ನ ಬಳಿಯಲ್ಲಿ ನಿರ್ಮಾಣವಾಗಿರುವ ಹಚ್ಚ ಹಸುರಿನ ಮಳೆಕಾಡು ನೈಸರ್ಗಿಕವಾಗಿ ಬೆಳೆಸಿರುವ ಸ್ಥಳ ಗ್ರೀನ್‌ ಪ್ಲಾನೆಟ್‌ ಮೂರು ಸಾವಿರಕ್ಕಿಂತಲೂ ಹೆಚ್ಚು ಪ್ರಭೇದಗಳಿರುವ ಸಸ್ಯ, ಮರಗಿಡಗಳು ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳನ್ನು ಸಂರಕ್ಷಿಸಲಾಗಿದೆ.

ಒಳಾಂಗಣ ನಿರ್ಮಾಣದ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ವಿಶೇಷವಾಗಿ ನಿರ್ಮಿಸಲಾಗಿರುವ ಗ್ರೀನ್‌ ಪ್ಲಾನೆಟ್‌ ಸರ್ವ ಋತುವಿನಲ್ಲಿಯೂ ಒಂದೇ ರೀತಿಯ ತಾಪಮಾನದೊಂದಿಗೆ ಇರುವಂತೆ ನಿರ್ಮಿಸಲಾಗಿದೆ. ಜೂನ್‌ ತಿಂಗಳಿನಿಂದ ಅಕ್ಟೋಬರ್‌ ತಿಂಗಳಿನವರೆಗೆ ವಿಶೇಷ ಶಿಬಿರದ ವ್ಯವಸ್ಥೆ ಇರುತ್ತದೆ. ದಿನಗಳಿಗೆ ಅನುಗುಣವಾಗಿ ಶಿಬಿರದ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ಉಳಿದುಕೊಳ್ಳಬಹುದು, ಊಟ ತಿಂಡಿ, ಶೌಚಾಲಯ, ಸ್ನಾನ, ವ್ಯವಸ್ಥೆ ರಾತ್ರಿ ಉಳಿದುಕೊಳ್ಳಲು ಶಿಬಿರ ಡೇರೆ, ಟೆಂಟ್‌ಗಳಲ್ಲಿ ಮೂರು ಅಥವಾ ನಾಲ್ಕು ಮಂದಿಗೆ ವ್ಯವಸ್ಥೆ, ಫ್ಯಾನ್‌ ಏರ್‌ ಬೆಡ್‌ ನೀಡುತ್ತಾರೆ.

ದಿನಪೂರ್ತಿ ಹಸುರು ಕಾಡಿನಲ್ಲಿ ಸುತ್ತಾಡಿಕೊಂಡು ಪ್ರಾಣಿ-ಪಕ್ಷಿಗಳನ್ನು, ಕರಕುಶಲ ವಸ್ತುಗಳು ವೀಕ್ಷಣೆ ಮಾಡಿಕೊಂಡು ಸಂವಾದಾತ್ಮಕ ಆಟಗಳಲ್ಲಿ ಕಳೆಯಬಹುದಾಗಿದೆ. ಪ್ರಕೃತಿ ಪ್ರೇರಿತ ಮೋಜಿನ ಆಟಗಳಲ್ಲಿ ತೊಡಗಿರುವ ಪ್ರಾಣಿ-ಪಕ್ಷಿಗಳು ಆಶ್ಚರ್ಯಕರ ರೀತಿಯಲ್ಲಿ ಕುಣಿದು ಕುಪ್ಪಳಿಸುವ ದೃಶ್ಯ ಸೊಬಗು, ವಿವಿಧ ವಯೋಮಿತಿಯ ಮಕ್ಕಳು ಮತ್ತು ಪೋಷಕರು, ಶಿಬಿರಾರ್ಥಿಗಳು ಸಂತೋಷ ಪಡುತ್ತಾರೆ. ಹತ್ತಿರ ಹೋಗಲು ಮತ್ತು ಕೈಯಿಂದ ಮುಟ್ಟಲು ಭಯಪಡುವ ಹಾವುಗಳನ್ನು ಕೈಯಲ್ಲಿ ಹಿಡಿದುಕೊಂಡು ಧೈರ್ಯದಿಂದ ಆಶ್ಚರ್ಯ ಚಕಿತರಾಗುವ ಮಕ್ಕಳು, ಅಂಗೈಯಲ್ಲಿ ಪಕ್ಷಿಗಳನ್ನು ಕೂರಿಸಿಕೊಂಡು ಕಾಳು ತಿನ್ನಿಸಿ ಸಂಭ್ರಮಿಸುತ್ತಾರೆ. ರಾತ್ರಿಯ ವೇಳೆಯಲ್ಲಿ ಮಕ್ಕಳು ಹೆಡ್‌ಲೈಟ್‌ ಟಾರ್ಚ್‌ ತಲೆಗೆ ಸಿಕ್ಕಿಸಿಕೊಂಡು ಪ್ರಾಣಿಗಳನ್ನು ವೀಕ್ಷಣೆ ಮಾಡುತ್ತಾರೆ. ಹೆಡ್‌ಲೈಟ್‌ ಕೆಂಪು ಬಣ್ಣದಲ್ಲಿ ಇರುವುದರಿಂದ ಪ್ರಾಣಿಗಳಿಗೆ ಪ್ರಕರ ಬೆಳಕು ಇಲ್ಲದೆ ತೊಂದರೆಯಾಗುವುದಿಲ್ಲ.

Advertisement

ದುಬೈಯಲ್ಲಿ ಹಲವು ಕಡೆಗಳಲ್ಲಿ ಸಫಾರಿ, ವನ್ಯಜೀವಿ ಕೇಂದ್ರಗಳಿದೆ. ಗ್ರೀನ್‌ ಪ್ಲಾನೆಟ್‌ನಲ್ಲಿ ಹೆಚ್ಚಿನ ಪ್ರಾಣಿಗಳು ಅಳಿಲು, ಕೋತಿಗಳು, ಜೇಡಗಳು, ಮುಳ್ಳು ಹಂದಿಗಳು ಹಾಗೂ ಇನ್ನಿತರ ಪ್ರಾಣಿಗಳಿಗಾಗಿ ನಾಲ್ಕು ಅಂತಸ್ತಿನ ಹವಾನಿಯಂತ್ರಿತ ಒಳಾಂಗಣ ಮೃಗಾಲಯವಿದೆ. ಕೆಲವು ಪ್ರಾಣಿಗಳನ್ನು ಮುಟ್ಟದಿರುವಂತೆ ಸೂಚನ ಫ‌ಲಕಗಳು ಇದೆ. ಅಲ್ಲಿ ಪ್ರಾಣಿಗಳು ತಮ್ಮ ತಮ್ಮ ಮರಿಗಳೊಂದಿಗೆ ಮುದ್ದಾಡುವ ದೃಶ್ಯಗಳು ಮಕ್ಕಳ ಮನ ಸೆಳೆಯುತ್ತದೆ. ಬೆಳಗಿನ ಸಮಯದಲ್ಲಿ ಪ್ರಾಣಿ ಪಕ್ಷಿಗಳಿಗೆ ಆಡಳಿತ ವರ್ಗದವರು ನೀಡಿರುವ ಅಹಾರವನ್ನು ಮಕ್ಕಳು ತಿನ್ನಿಸಬಹುದಾಗಿದೆ.

ತಮ್ಮ ವಾಹನಗಳಲ್ಲಿ ಬರುವವರು ಪಾರ್ಕ್‌ ಮಾಡಿದ ಅನಂತರ ಜತೆಗೆ ತಂದಿರುವ ವಸ್ತುಗಳನ್ನು ವಾಹನದಲ್ಲಿಯೆ ಬಿಟ್ಟು ಬರಬೇಕು ಯಾವುದೇ ಅಹಾರ ಪದಾರ್ಥಗಳನ್ನು ಒಳಗೆ ತರುವಂತಿಲ್ಲ. ವಿಮಾನ ನಿಲ್ದಾಣದ ಪ್ರವೇಶ ರೀತಿಯಲ್ಲಿ ತಪಾಸಣೆ ಇಲ್ಲಿಯೂ ಸಹ ಇರುತ್ತದೆ. ಶಿಬಿರದಲ್ಲಿ ಭಾಗವಹಿಸುವವರಿಗೆ ಶಿಬಿರಗಳಲ್ಲಿ ಇರುವಂತೆ ಸಣ್ಣಸಣ್ಣ ಶಿಬಿರದ ಡೇರೆ, ಟೆಂಟ್‌ ಇರುತ್ತದೆ. ಮೂರು ಮಂದಿಗೆ ರಾತ್ರಿ ತಂಗುವಷ್ಟು ದೊಡ್ಡದಾಗಿರುತ್ತದೆ. ಫ್ಯಾನ್‌ ಮತ್ತು ಏರ್‌ ಬೆಡ್‌ ನೀಡಲಾಗುತ್ತದೆ. ಹೊರಾಂಗಣದಲ್ಲಿ ರಾತ್ರಿ ಕಳೆಯುವ ಅನುಭವ ವಿಶೇಷ ಅನುಭವ ನೀಡುತ್ತದೆ. ಅದರಲ್ಲಿಯೂ ಮಕ್ಕಳು ಪ್ರಕೃತಿಯ ಮಡಿಲಿನಲ್ಲಿ ದಿನ ರಾತ್ರಿ ಕಳೆಯುದನ್ನು ಸಂಭ್ರಮಿಸುತ್ತಾರೆ.

ರಾತ್ರಿಯ ವೇಳೆಯಲ್ಲಿ ಮನರಂಜನೆಗಾಗಿ ಪ್ರಾಣಿ-ಪಕ್ಷಿಗಳ ಬಗ್ಗೆ ಚಲನಚಿತ್ರ ವೀಕ್ಷಿಸುವ ವ್ಯವಸ್ಥೆ ಇರುತ್ತದೆ. ಶಿಬಿರದಲ್ಲಿ ಎಲ್ಲ ಕಡೆಗಳಲ್ಲಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಸೆಕ್ಯೂರಿಟಿಗಳು ತಿರುಗಾಡಿ ಕೊಂಡಿರುತ್ತಾರೆ. ಗ್ರೀನ್‌ ಪ್ಲಾನೆಟ್‌ ಬೇಸಗೆ ಶಿಬಿರಾನುಭವ ಮಕ್ಕಳಿಗೆ ಮತ್ತು ಪೋಷಕರಿಗೆ ತಮ್ಮ ತಮ್ಮ ದಿನ ನಿತ್ಯದ ದಿನಚರಿಯಿಂದ ಬೇರೆಯ ರೀತಿಯಲ್ಲಿ ಪ್ರಕೃತಿಯ ಮಡಿಲಿನಲ್ಲಿ ವಿಶೇಷ ಅನುಭವ ನೀಡುತ್ತದೆ. ಹಲವಾರು ಗಿನ್ನೆಸ್‌ ದಾಖಲೆಗಳನ್ನು ಸೃಷ್ಟಿಸಿರುವ ಅರಬ್ಬರ ಕಲಾತ್ಮಕ ದೃಷ್ಟಿಗೆ ಗ್ರೀನ್‌ ಪ್ಲಾನೆಟ್‌ ವಿಶ್ವದ ಗಮನ ಸೆಳೆಯುತ್ತಿದೆ.

*ಬಿ.ಕೆ.ಗಣೇಶ್‌ ರೈ, ದುಬೈ

Advertisement

Udayavani is now on Telegram. Click here to join our channel and stay updated with the latest news.

Next