Advertisement

ದುಬಾೖ ಟೆನಿಸ್‌ ಚಾಂಪಿಯನ್‌ಶಿಪ್‌:ಡಿಮಿಟ್ರೋವ್‌ಗೆ ಮೊದಲ ಸುತ್ತಿನ ಸೋಲು

06:05 AM Mar 01, 2018 | |

ದುಬಾೖ: ಅಗ್ರ ಶ್ರೇಯಾಂಕದ ಬಲ್ಗೇರಿಯನ್‌ ಆಟಗಾರ ಗ್ರಿಗರ್‌ ಡಿಮಿಟ್ರೋವ್‌ ದುಬಾೖ ಟೆನಿಸ್‌ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ. ಮಂಗಳವಾರ ರಾತ್ರಿ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಟ್ಯುನೀಶಿಯಾದ 117ನೇ ರ್‍ಯಾಂಕಿಂಗ್‌ನ ಮಾಲೆಕ್‌ ಜಾಕಿರಿ 4-6, 7-5, 6-4 ಅಂತರದಿಂದ ಡಿಮಿಟ್ರೋವ್‌ ಆಟ ಮುಗಿಸಿದರು.

Advertisement

ಮಾಲೆಕ್‌ ಜಾಕಿರಿ ವಿಶ್ವದ ಟಾಪ್‌-10 ಆಟಗಾರನ ವಿರುದ್ಧ ಸಾಧಿಸಿದ ಮೊದಲ ಜಯ ಇದಾಗಿದೆ. ಸದ್ಯ ಡಿಮಿಟ್ರೋವ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ವೈಲ್ಡ್‌ಕಾರ್ಡ್‌ ಮೂಲಕ ಪ್ರವೇಶ ಪಡೆದ ಜಾಕಿರಿ ಕಳೆದ 6 ವರ್ಷಗಳಿಂದ ದುಬಾೖ ಟೂರ್ನಿಯಲ್ಲಿ ಆಡುತ್ತಲೇ ಇದ್ದಾರೆ. 2014ರಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದು ಇವರ ಅತ್ಯುತ್ತಮ ಸಾಧನೆ.

ದಿನದ ಇನ್ನೊಂದು ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಫ್ರಾನ್ಸ್‌ನ ಲುಕಾಸ್‌ ಪೌಲಿ ಲಾತ್ವಿಯಾದ ಎರ್ನೆಸ್ಟ್‌ ಗುಲ್ಬಿಸ್‌ ವಿರುದ್ಧ 6-4, 6-4 ಅಂತರದ ಜಯ ಸಾಧಿಸಿದರು. ಸರ್ಬಿಯಾದ ಫಿಲಿಪ್‌ ಕ್ರಾಜಿನೋವಿಕ್‌ ಇಟೆಲಿಯ ಥಾಮಸ್‌ ಫ್ಯಾಬಿಯಾನೊ ಅವರನ್ನು 0-6, 6-2, 6-2 ಅಂತರದಿಂದ ಹಿಮ್ಮೆಟ್ಟಿಸಿದರು.

ಮಾರ್ಸೆಲಿ ಟೆನಿಸ್‌ ಚಾಂಪಿಯನ್‌ ಕರೆನ್‌ ಕಶನೋವ್‌ 7-6 (7-1), 7-6 (7-0) ಅಂತರದಿಂದ ಡೆನ್ನಿಸ್‌ ಇಸ್ತೋಮಿನ್‌ಗೆ ಸೋಲುಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next