ಬೆಂಗಳೂರು: ದುಬೈನ ಕರೆನ್ಸಿ ದಿರ್ಹಾಮ್ ಅನ್ನು ಅರ್ಧ ಬೆಲೆಗೆ ಕೊಡುವುದಾಗಿ ಉದ್ಯಮಿಗಳಿಗೆ ನಂಬಿಸಿ ಕಲರ್ ಜೆರಾಕ್ಸ್ ಪೇಪರ್ ಕೊಟ್ಟು ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಮೂಲದ ಇಮ್ರಾನ್ ಶೇಖ್ (35) ಬಂಧಿತ. ಆರೋಪಿಯಿಂದ ದುಬೈನ ಒಂದು ಅಸಲಿ ದಿರ್ಹಮ್‌ಗಳು ಹಾಗೂ ನೂರಕ್ಕೂ ಹೆಚ್ಚು ನಕಲಿ ದಿರ್ಹಾಮ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಪತ್ನಿ ರುಕ್ಸಾನಾ ಎಂಬಾಕೆ ತಲೆಮರೆಸಿಕೊಂಡಿದ್ದು, ಆಕೆಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ಆರೋಪಿಗಳು ಇಲ್ಲಿಯೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ವಿವಿಧ ಮಾರ್ಗಗಳ ಮೂಲಕ ವಿದೇಶ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಉದ್ಯಮಿಗಳನ್ನು ಪರಿಚಯಿಸಿಕೊಳ್ಳುತ್ತಿದ್ದರು. ಬಳಿಕ ಫೋನ್ ಮೂಲಕವೇ ಸಂಪರ್ಕಿಸಿ, “ತಮ್ಮ ಬಳಿ ಸಾಕಷ್ಟು ಯುಎಇ ದಿರ್ಹಾಮ್ ಇದೆ. ಆದರೆ, ಎಲ್ಲವನ್ನೂ ಎಕ್ಸ್‌ಚೇಂಜ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ನಿರ್ಧರಿಸಿದ್ದೇವೆ’ ಎನ್ನುತ್ತಿದ್ದರು.
ಅಸಲಿ ನೋಟಿ ವಾಟ್ಸ್‌ಆ್ಯಪ್: “ದುಬೈನ 1 ದಿರ್ಹಾಮ್‌ಗೆ ಭಾರತೀಯ ಮೌಲ್ಯದ ಪ್ರಕಾರ 22 ಸಾವಿರ ರೂ. ಇದೆ. ಆದರೆ, ತಾವು 12 ಸಾವಿರ ರೂ.ಗೆ ಬದಲಾವಣೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ನಂಬಿಸುತ್ತಿದ್ದರು. ಮೊದಲಿಗೆ ಒಂದು ಅಸಲಿ ದಿರ್ಹಾಮ್ ಅನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿ ವಿಶ್ವಾಸ ಗಳಿಸುತ್ತಿದ್ದರು.
ಕಲರ್ ಜೆರಾಕ್ಸ್ ಪೇಪರ್ ಕೊಟ್ಟು ಪರಾರಿ: ಅದನ್ನು ನಂಬಿದ ಕೆಲ ಉದ್ಯಮಿಗಳು ಲಕ್ಷಾಂತರ ರೂ. ಜತೆಗೆ ಆರೋಪಿಯನ್ನು ಭೇಟಿಯಾಗುತ್ತಿದ್ದರು. ಬಳಿಕ ಹಣ ಪಡೆಯುತ್ತಿದ್ದ ದಂಪತಿ ಕಲರ್ ಜೆರಾಕ್ಸ್ ದಿರ್ಹಾಮ್ ಗಳನ್ನು ಉದ್ಯಮಿಗಳಿಗೆ ಕೊಟ್ಟು ಪರಾರಿಯಾಗುತ್ತಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು, ಎರಡು ತಿಂಗಳ ಕಾರ್ಯಾಚರಣೆ ನಡೆಸಿ ಆರೋಪಿ ಇಮ್ರಾನ್ ಶೇಕ್ ನನ್ನು ಬಂಧಿಸಿ, ಆತನಿಂದ ಸುಮಾರು ನೂರಕ್ಕೂ ಹೆಚ್ಚು ನಕಲಿ ಯುಎಇ ದಿರ್ಹಾಮ್ಸ್ ವಶಕ್ಕೆ ಪಡೆದಿದ್ದಾರೆ. ಆತನ ಪತ್ನಿ ರುಕ್ಸಾನಾ ನಾಪತ್ತೆಯಾಗಿದ್ದು, ಆಕೆಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಈ ಸಂಬಂಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಾರಿಯಾಗಿರುವ ಮಹಿಳೆಗೆ ಬಲೆ: ಈ ಕುರಿತು ಮಾಹಿತಿ ನೀಡಿದ ಸಿಸಿಬಿ ಡಿಸಿಪಿ ಶ್ರೀನಿವಾಸಗೌಡ, ದುಬೈನ ದಿರ್ಹಾಮ್ ಅನ್ನು ಕಡಿಮೆ ಬೆಲೆಗೆ ಬದಲಾವಣೆ ಮಾಡಿಕೊಳ್ಳುತ್ತಿದ್ದೇವೆ ಎಂದು ನಂಬಿಸಿ ವಂಚಿಸಿದ ಪ್ರಕರಣದಲ್ಲಿ ಓರ್ವನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಹಿಳೆ ಪರಾರಿಯಾಗಿದ್ದಾರೆ. ಆಕೆಗಾಗಿ ಶೋಧ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.