ಇಲ್ಲಿ 2007ರಲ್ಲಿ ಆರಂಭವಾದ ಶ್ರೀ ವರಮಹಾಲಕ್ಷ್ಮೀ ಸಮಿತಿಯ ಆಶ್ರಯದಲ್ಲಿ ಆ.26ರಂದು ದುಬೈನ ವುಡ್‌ಲೆಮ್ ಪಾರ್ಕ್ ಸ್ಕೂಲ್ ಸಭಾಂಗಣದಲ್ಲಿ ದುಬೈ ಸೇರಿದಂತೆ ಇನ್ನಿತರ ಎಮಿರೇಟ್ಸ್‌ಗಳಿಂದ ಆಗಮಿಸಿದ ಸುಮಂಗಲೆಯರು ಶ್ರೀ ವರಮಹಾಲಕ್ಷ್ಮೀ ಪೂಜೆಯನ್ನು ಅತ್ಯಂತ ಭಕ್ತಿ ಭಾವದಿಂದ ಆಚರಿಸಿದರು.
ಲಕ್ಷ್ಮೀ ದೇವಿಗೆ ದೀಪ ಬೆಳಗಿ, ಸುಮಂಗಲೆಯರು ಲಲಿತಾ ಸಹಸ್ರನಾಮ, ಪಠಣ, ಭಜನೆ ಸಂಕೀರ್ತನೆಯನ್ನು ಹಾಡಿದರು. ಪುರೋಹಿತರಾದ ರಘುಭಟ್ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ಗುರು ಗಣಪತಿ ಪೂಜೆ, ಕಲೊ³àಕ್ತ ಪೂಜೆ ಹಾಗೂ ಕುಂಕುಮಾರ್ಚನೆ ಪೂಜೆಯಲ್ಲಿ ಎಲ್ಲರೂ ಪಾಲ್ಗೊಂಡರು. ಸುಮಂಗಲೆಯರು ನೃತ್ಯ ಭಜನೆಯನ್ನು ನಡೆಸಿಕೊಟ್ಟರು. ದೇವಿಗೆ ಆರತಿಯ ಜತೆಗೆ ಸುಮಂಗಲಿ ಆರಾಧನೆ, ಬ್ರಾಹ್ಮಣ ಆರಾಧನೆ ಹಾಗೂ ಕನ್ನಿಕಾ ಆರಾಧನೆಯನ್ನು ನಡೆಸಲಾಯಿತು.
ಕುಟುಂಬ ಸಮೇತರಾಗಿ ನೂರಾರು ಸಂಖ್ಯೆಯಲ್ಲಿ ಪೂಜೆಯಲ್ಲಿ ಎಲ್ಲರೂ ಭಕ್ತಿಭಾವದಿಂದ ಪಾಲ್ಗೊಂಡರು. ಮಕ್ಕಳನ್ನು ಸೇರಿದಂತೆ ಎಲ್ಲರೂ ಸ್ವಯಂ ಸೇವಕರಾಗಿ ಪೂಜಾ ಕೈಂಕರ್ಯಗಳಲ್ಲಿ ತೊಡಗಿಕೊಂಡರು.
ಶ್ರೀರಾಜ ರಾಜೇಶ್ವರಿ ಭಜನಾ ತಂಡದವರು ಸುಶ್ರಾವ್ಯವಾಗಿ ಹಾಡಿ ಭಜನ ಸೇವೆಯನ್ನು ನಡೆಸಿಕೊಟ್ಟರು. ಪೂಜಾ ಮಂಟಪವನ್ನು ರಾಜೇಶ್ ಕುತ್ತಾರ್ ಅವರು ಸೊಗಸಾಗಿ ನಿರ್ಮಿಸಿದ್ದರು.
ಪೂಜೆಯ ಅಂಗವಾಗಿ ವಿವಿಧ ವಯೋಮಿತಿಯ ಮಕ್ಕಳಿಗೆ ಪುರಾಣ ಕಥೆಯನ್ನು ಆಧರಿಸಿದ ಪಾತ್ರಗಳ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಜತೆಗೆ ದೇವರ ನಾಮ ಪಠಣ ಸ್ಪರ್ಧೆ, ಗೀತಗಾಯನ ಸ್ಪರ್ಧೆ, ರಾಮಾಯಣ ಹಾಗೂ ಮಹಾಭಾರತದ ಕುರಿತು ರಸಪ್ರಶ್ನೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ನೀಡಲಾಯಿತು.
ವರಮಹಾಲಕ್ಷ್ಮೀ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.
ವರದಿ – ಬಿ. ಕೆ. ಗಣೇಶ್ ರೈ, ದುಬೈ