ದುಬೈ: ಕೋವಿಡ್ 19 ಕಾಟದಿಂದ ದುಬೈ ಸಂಪೂರ್ಣ ಲಾಕ್ ಡೌನ್ ಮೊರೆಹೋಗಿದೆ. ಇಲ್ಲಿ ಲಾಕ್ ಡೌನ್ ಪರಿಸ್ಥಿತಿ ಎಷ್ಟು ಕಟ್ಟುನಿಟ್ಟಾಗಿದೆ ಎಂದರೆ ಯಾರೊಬ್ಬರೂ ಮನೆಯಿಂದ ಹೊರಗೇ ಬರುವಂತಿಲ್ಲ.
ಲಾಕ್ ಡೌನ್ ಕಾರಣದಿಂದ ಇಲ್ಲಿನ ಬಾರ್, ಪಬ್‌ಗಳು ಮುಚ್ಚಿವೆ. ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ನೌಕರರೇ ನೆಲೆಸಿರುವ ಈ ನಗರದಲ್ಲಿ ಮದ್ಯ ಮಾರಾಟ ಪ್ರಮುಖ ಆದಾಯ ಮೂಲವೂ ಹೌದು. ಇದರಿಂದಾಗಿ ಲಾಕ್ ಡೌನ್ ಹೊರತಾಗಿಯೂ ದುಬೈ ಮದ್ಯವನ್ನು ಮನೆಗೇ ಸರಬರಾಜು ಮಾಡಲು ಮುಂದಾಗಿದೆ. ದುಬೈನ 2 ಪ್ರಮುಖ ಸಂಸ್ಥೆಗಳು ಈ ಯೋಜನೆಯನ್ನು ಕೈಗೆತ್ತಿಕೊಂಡಿವೆ.
ಕೋವಿಡ್ ಸಂಬಂಧಿತ ಲಾಕ್ ಡೌನ್ ಪರಿಸ್ಥಿತಿಯಿಂದಾಗಿ ಇಲ್ಲಿನ ಐಶಾರಾಮಿ ಹೊಟೇಲ್ ಗಳು ಹಾಗೂ ಬಾರ್ ಗಳು ಪರಿಸ್ಥಿತಿ ಶೋಚನೀಯವಾಗಿದೆ. ಮತ್ತು ಇದು ಆಲ್ಕೋಹಾಲ್ ಸೇವನೆಯ ಮೇಲೆ ನೇರ ಪರಿಣಾಮವನ್ನು ಬೀರಿದೆ. ಇದಕ್ಕೆ ಪೂರಕವಾಗಿ ಸರಕಾರಿ ಮಾಲಕತ್ವದ ಎಮಿರೇಟ್ಸ್ ಏರ್ ಲೈನ್ಸ್ ನ ಅಂಗಸಂಸ್ಥೆಯಾಗಿರುವ ಮೆರಿಟೈಮ್ ಮತ್ತು ಮರ್ಕೆಂಟೈಲ್ ಇಂಟರ್ನ್ಯಾಷನಲ್ ಮದ್ಯವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶಕ್ಕಾಗಿ ವೆಬ್ ಸೈಟ್ ಒಂದನ್ನು ಪ್ರಾರಂಂಭಿಸಿದೆ.
ಈ ವೆಬ್ ಸೈಟ್ ನಲ್ಲಿ ಒಂದು ಬಾಟಲಿಗೆ 530 ಡಾಲರ್ ನ 1942 ಟಕಿಲಾ ಡಾನ್ ಜೂಲಿಯೋದಿಂದ ಹಿಡಿದು 4.30 ಡಾಲರ್ ಬೆಲೆಯ ಇಂಡಿಯನ್ ಬ್ಲೆಂಡೆಡ್ ವಿಸ್ಕಿಯವರೆಗೆ ಬೀಯರ್ ಗಳು, ವೈನ್ ಗಳು ಎಲ್ಲವೂ ಮದ್ಯಪ್ರಿಯರಿಗಾಗಿ ಲಭ್ಯವಿದೆ.
ದುಬೈನಲ್ಲಿ ಇನ್ನೂ ಉಳಿದುಕೊಂಡಿರುವ ವಿದೇಶಿ ಪ್ರವಾಸಿಗರು ಮದ್ಯವನ್ನು ಖರೀದಿಸಲು ತಮ್ಮ ಪಾಸ್ ಪೋರ್ಟನ್ನು ದಾಖಲೆಯಾಗಿ ಬಳಸಿಕೊಳ್ಳಬಹುದಾಗಿದೆ ಇನ್ನು ದುಬೈ ಪ್ರಜೆಗಳ ಬಳಿಯಲ್ಲಿ ಮದ್ಯ ಖರೀದಿ ಪರವಾನಿಗೆ ಇದ್ದರಷ್ಟೇ ಅವರ ಮನೆ ಬಾಗಿಲಿಗೆ ಆರ್ಡರ್ ಮಾಡಿದ ಮದ್ಯ ತಲುಪುತ್ತದೆ.