ಬೆಂಗಳೂರು: ಹುಟ್ಟು- ಸಾವು ಸಾಮಾನ್ಯ. ಇದರ ನಡುವಿನ ಜೀವನದಲ್ಲಿ ಜನರ ಮನಸ್ಸಿನಲ್ಲಿ ಸ್ಥಿರವಾಗಿ ನೆಲೆಸುವಂಥ ಕೆಲಸ ಮಾಡಬೇಕು ಎಂದು ಮೇಯರ್ ಜಿ.ಪದ್ಮಾವತಿ ಹೇಳಿದರು. ಡಿ.ಎಸ್.ಮ್ಯಾಕ್ಸ್ ವಾರ್ಷಿಕೋತ್ಸವ ಅಂಗವಾಗಿ ಸೋಮವಾರ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಗಶ್ರೀ ಹಾಗೂ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಬೆಂಗಳೂರು ಮಹಾನಗರ ಇಂದು ಬೃಹದಾಕಾರವಾಗಿ ಬೆಳೆಯುತ್ತಿದೆ. ಬಡವರು, ಮಧ್ಯಮ ವರ್ಗದ ಜನರು ಸ್ವಂತ ಸೂರು ಕಟ್ಟಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಡಿ.ಎಸ್.ಮ್ಯಾಕ್ಸ್ ಸಂಸ್ಥೆ ಜನಸಾಮಾನ್ಯರಿಗೆ ಅಗತ್ಯವಾದ ವಸತಿ ಯೋಜನೆ ರೂಪಿಸಿ ಕಡಿಮೆ ದರದಲ್ಲಿ ಕೊಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಬೇಲಿಮಠದ ಶಿವರುದ್ರ ಸ್ವಾಮೀಜಿ, ಉದ್ಯಮದೊಂದಿಗೆ ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಡಿಎಸ್ ಮ್ಯಾಕ್ಸ್ ಸಂಸ್ಥೆ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಯೋಗಗುರು ವಚನಾನಂದ ಸ್ವಾಮೀಜಿ, ಮಹಾಯೋಗ ಫೌಂಡೇಶನ್‌ನ ಪೈಲೆಟ್ ಬಾಬಾ, ಮಾಜಿ ಸಚಿವ ರಾಜುಗೌಡ, ಡಿಎಸ್ ಮ್ಯಾಕ್ಸ್ ಸಂಸ್ಥೆ ಅಧ್ಯಕ್ಷ ಕೆ.ವಿ.ಸತೀಶ್, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.
ಸಾಧಕರಿಗೆ ಕಲಾಶ್ರೀ ಪ್ರಶಸ್ತಿ: ಚಲನಚಿತ್ರ ನಿರ್ಮಾಪಕ ಎಚ್.ಡಿ.ಗಂಗರಾಜು, ಹಿರಿಯ ನಿರ್ದೇಶಕ ಗಿರೀಶ್‌ಕಾಸರವಳ್ಳಿ, ಬಹುಭಾಷಾ ನಟಿ ರೂಪಾದೇವಿ, ನಿರ್ದೇಶಕ ಎಸ್.ನಾರಾಯಣ್, ಚಲನಚಿತ್ರ ನಟಿ ಮಾಲತಿ ಸುಧೀರ್, ನಟ ರವಿ ಕಾಳೇ, ತಮಿಳು ಚಿತ್ರ ನಿರ್ದೇಶಕ, ನಟ ಕೆ.ಭಾಗ್ಯರಾಜ್, ಬಹುಭಾಷಾ ನಟಿ ಅಂಬಿಕಾ, ನಿರ್ಮಾಪಕ ಸಿ.ಕಲ್ಯಾಣ್, ತೆಲುಗು ನಟಿ ರಮಾ ಪ್ರಭಾ, ಮಲಯಾಳಂ ನಟ ಲಾಲು ಅಲೆಕ್ಸ್, ಬಹುಭಾಷಾ ನಟಿ ಕಲಾರಂಜನಿ ಅವರಿಗೆ ಡಿ.ಎಸ್.ಮ್ಯಾಕ್ಸ್ ರಾಷ್ಟ್ರೀಯ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೀವನ ಸಾಧನೆ ಪ್ರಶಸ್ತಿ: ನ್ಯೂಯಾರ್ಕ್‌ನ ವಿಶ್ವದ ಅತ್ಯಂತ ಹಿರಿಯ ಯೋಗ ಗುರು 98 ವರ್ಷದ ತಾವೋಫೋರ್ಚಾನ್ ಲಿಂಚ್ ಹಾಗೂ ಜಪಾನಿನ ಐಕಾವ ಯೋಗ ಸಂಸ್ಥೆ ಸಂಸ್ಥಾಪಕಿ 70ವರ್ಷದ ಯೋಗಪಟು ಕಿಕೋ ಐಕಾವ ಅವರಿಗೆ ಡಿ.ಎಸ್. ಮ್ಯಾಕ್ಸ್ ಯೋಗಶ್ರೀ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.