Advertisement

ನಗರದಲ್ಲೀಗ ಇಂಗುಗುಂಡಿ ಟ್ರೆಂಡ್‌

01:12 AM May 15, 2019 | Lakshmi GovindaRaj |

ಬೆಂಗಳೂರು: ಈ ಹಿಂದೆ ಬೆಂಗಳೂರಿನಲ್ಲಿ ನೀರಿನ ದಾಹ ತೀರಿಸಿಕೊಳ್ಳಲು ಕೊಳವೆ ಬಾವಿ ಕೊರೆಸುವುದು ಸಾಮಾನ್ಯವಾಗಿತ್ತು. ಈಗ ಆ ಕೊಳವೆ ಬಾವಿಗಳ ಮರುಪೂರಣ (ರಿಚಾರ್ಜ್‌) ಮಾಡುವ ಟ್ರೆಂಡ್‌ ಶುರುವಾಗಿದೆ.

Advertisement

ಎರಡು ಮೂರು ವರ್ಷಗಳಿಂದ ನಗರದಲ್ಲಿ ಅಂತರ್ಜಲ ಪ್ರಮಾಣ ತೀವ್ರ ಇಳಿಕೆ ಕಂಡಿದ್ದು, 1,300 ರಿಂದ 1,500 ಅಡಿ ಆಳಕ್ಕೆ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಜತೆಗೆ ಈ ಹಿಂದೆ ಕಡಿಮೆ ಆಳಕ್ಕೆ ಕೊರೆಸಿರುವ ಕೊಳವೆಬಾವಿಗಳು ಒಂದೊಂದಾಗಿ ಬತ್ತುತ್ತಿವೆ.

ಇದರಿಂದಾಗಿ ಬಹುತೇಕ ನಿವಾಸಿಗಳು ಮನೆಯಲ್ಲಿರುವ ಕೊಳವೆಬಾವಿ ಕೈಬಿಟ್ಟು, ನಿತ್ಯದ ನೀರಿಗೆ ಜಲಮಂಡಳಿ ಮೊರೆಯೋಗುತ್ತಿದ್ದಾರೆ. ಇನ್ನೂ ಕೆಲವರು ಬೇಸಿಗೆಯಲ್ಲಿ ಟ್ಯಾಂಕರ್‌ ನೀರು ಖರೀದಿಸಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.

ಆದರೆ, ಇವೆರಡಕ್ಕಿಂತ ಶಾಶ್ವತ ಪರಿಹಾರವೊಂದನ್ನು ಕಂಡುಕೊಂಡು ನೀರಿನ ಬವಣೆಯಿಂದ ಮುಕ್ತಿ ಪಡೆಯಬೇಕೆಂಬ ಆಶಯದಿಂದ ಕೊಳವೆ ಬಾವಿಗಳನ್ನೇ ಮರುಪೂರಣ ಮಾಡುವ ಪ್ರಕ್ರಿಯೆಗೆ ಕೆಲ ಬೆಂಗಳೂರಿಗರು ಮುಂದಾಗುತ್ತಿದ್ದಾರೆ. ಇದಕ್ಕಾಗಿ ತಮ್ಮ ನಿವೇಶನದ ಬಳಿಯೇ ಇಂಗು ಗುಂಡಿ ನಿರ್ಮಿಸಿಕೊಳ್ಳುತ್ತಿದ್ದಾರೆ.

ಸದ್ಯ ನಗರದ ಗಡಿಭಾಗಗಳಾದ ಪೀಣ್ಯ, ಕನಕಪುರ ರಸ್ತೆ, ಕೆಂಗೇರಿ, ಮಹದೇವಪುರ, ಕೆ.ಆರ್‌.ಪುರ ಭಾಗಗಳಲ್ಲಿ ಇಂಗುಗುಂಡಿ ಟ್ರೆಂಡ್‌ ಹೆಚ್ಚಾಗಿದೆ. ಇನ್ನು ಈ ಕೊಳವೆಬಾವಿ ರಿಜಾರ್ಜ್‌ ಕಾಯಕವನ್ನೇ ನಂಬಿರುವ ಸಮುದಾಯದ ತಂಡವೊಂದು ಕಳೆದ 10 ವರ್ಷಗಳಿಂದ ಇಂಗು ಗುಂಡಿಗಳನ್ನು ನಿರ್ಮಿಸುವ ಕಾರ್ಯ ಮಾಡುತ್ತಾ ಬಂದಿದ್ದು,

Advertisement

ನಗರದ ಯಾವ ಭಾಗಕ್ಕೆ ಕರೆದರೂ, ಎಷ್ಟೇ ಚಿಕ್ಕ ನಿವೇಶನವಿದ್ದರೂ, ಅಲ್ಲೊಂದು ಇಂಗು ಗುಂಡಿ ನಿರ್ಮಿಸಿಕೊಡುತ್ತಾರೆ. ಈ ಮೂಲಕ ನಗರದಲ್ಲಿ ಸದ್ದಿಲ್ಲದೇ ಅಂತರ್ಜಲ ಏರಿಕೆ ಹಾಗೂ ನೀರಿನ ಬವಣೆಗೆ ತಪ್ಪಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಈ ತಂಡದಲ್ಲಿ ಆರು ಸದಸ್ಯರಿದ್ದು, ಇವರೆಲ್ಲ ಕುಟುಂಬ ಪಾರಂಪರ್ಯವಾಗಿ ಈ ಕಾಯಕದಲ್ಲಿ ತೊಡಗಿದ್ದಾರೆ. ಆರಂಭದಲ್ಲಿ ಇವರು ಬಾವಿ ತೋಡುತ್ತಿದ್ದರು. ಕಾಲ ಕಳೆದಂತೆ ನಗರದಲ್ಲಿ ಕೊಳವೆಬಾವಿ ಪ್ರವೃತ್ತಿ ಹೆಚ್ಚಾಗಿ, ಇವರಿಗೆ ಕೆಲಸ ಕಡಿಮೆಯಾಯಿತು.

ಹೇಗಿದ್ದರೂ ನಗರೀಕರಣದ ಹೆಸರಲ್ಲಿ ಬೆಂಗಳೂರು ಕಾಂಕ್ರಿಟ್‌ ಕಾಡಾಗುತ್ತದೆ. ಅಭಿವೃದ್ಧಿ ಹೆಸರಲ್ಲಿ ಅಂತರ್ಜಲ ಬತ್ತುತ್ತದೆ ಎಂದು ತಿಳಿದಿದ್ದ ಇವರು, ಅದಕ್ಕೊಂದು ಪರ್ಯಾಯ ಮಾರ್ಗ ಕಂಡುಕೊಂಡರು. ಅದರಂತೆ, ಬಾವಿ ತೋಡುವುದಕ್ಕೆ ಬ್ರೇಕ್‌ ಹಾಕಿ, ಕೊಳವೆ ಬಾವಿಗಳಿಗೆ ಮರುಜೀವ ನೀಡುವ “ಇಂಗುಗುಂಡಿ’ ನಿರ್ಮಾಣ ಕಾಯಕ ಆರಂಭಿಸಿದರು.

ಸಾವಿರಕ್ಕೂ ಹೆಚ್ಚು ಇಂಗುಗುಂಡಿ: ಈ ತಂಡ ಈವರೆಗೂ ನಗರದ ವಿವಿಧೆಡೆ 5 ಸಾವಿರಕ್ಕೂ ಹೆಚ್ಚು ಇಂಗುಗುಂಡಿಗಳನ್ನು ಮಾಡಿಕೊಟ್ಟಿದೆ. ನಿವೇಶನವನ್ನು ತೋರಿಸಿದರೆ ಇಂತಿಷ್ಟು ಹಣ ಪಡೆದು ಕೊಳವೆಬಾವಿ ಸಮೀಪದಲ್ಲೇ ಒಂದು ಇಂಗುಗುಂಡಿ ನಿರ್ಮಿಸಿಕೊಡುತ್ತಾರೆ. ಕಳೆದ ಎರಡು ವರ್ಷಗಳಿಂದ ಇಂಗುಗುಂಡಿ ನಿರ್ಮಿಸುವ ಟ್ರೆಂಡ್‌ ಹೆಚ್ಚಾಗಿದ್ದು, 2018ರಲ್ಲಿ 200 ಹಾಗೂ ಪ್ರಸಕ್ತ ವರ್ಷ 120ಕ್ಕೂ ಹೆಚ್ಚು ಇಂಗುಗುಂಡಿಗಳನ್ನು ಈ ತಂಡ ನಿರ್ಮಿಸಿದೆ.

ಅಂತರ್ಜಲ ಹೆಚ್ಚಳ: ಈ ತಂಡವು ಇಂಗುಗುಂಡಿ ನಿರ್ಮಿಸಿದ ವರ್ಷದಲ್ಲಿಯೇ ಅದರ ಫ‌ಲ ನಿವೇಶನದಾರರಿಗೆ ಸಿಕ್ಕಿದೆ. ಕೊಳವೆ ಬಾವಿಯಿಂದ ಬರುವ ನೀರಿನ ಪ್ರಮಾಣ ಅರ್ಧ ಇಂಚಿನಿಂದ ಎರಡು-ಎರಡೂವರೆ ಇಂಚಿಗೆ ಏರಿಕೆಯಾಗಿದೆ. ಬೇಸಿಗೆಯಲ್ಲಿ ಕೇವಲ 30 ನಿಮಿಷ ಬರುತ್ತಿದ್ದ ನೀರು ಮೂರ್‍ನಾಲ್ಕು ತಾಸು ಲಭ್ಯವಾಗುತ್ತಿದೆ. ಇನ್ನೂ ಕೆಲವು ಕೊಳವೆಬಾವಿಗಳಲ್ಲಿ 1,000 ಅಡಿ ದಾಟಿ ಹೋಗಿದ್ದ ನೀರು 500ರಿಂದ 600 ಅಡಿಗೆ ಏರಿಕೆಯಾಗಿದೆ.

2*2 ಅಡಿ ವಿಸ್ತೀರ್ಣದಲ್ಲಿ ಇಂಗುಗುಂಡಿ: ಇಂಗುಗುಂಡಿ ನಿರ್ಮಿಸಲು ದೊಡ್ಡ ಜಾಗದ ಅವಶ್ಯಕತೆ ಇಲ್ಲ. ಮನೆಯ ಹೊರಭಾಗದ ಕನಿಷ್ಠ 2*2 ಅಡಿ ಜಾಗದಲ್ಲಿಯೇ ಗುಂಡಿ ನಿರ್ಮಿಸಬಹುದು. ಮೊದಲು ಮನೆಯ ಚಾವಣಿ ನೀರೆಲ್ಲ ಒಂದು ಕಡೆ ಸಂಗ್ರಹವಾಗಿ ಭೂಮಿಗೆ ಬರುವಂತೆ ಪೈಪ್‌ಲೈನ್‌ ಸಂಪರ್ಕ ಮಾಡಲಾಗುತ್ತದೆ.

2*2 ಅಡಿ ವಿಸ್ತಿರ್ಣದಲ್ಲಿ ಕನಿಷ್ಠ 20 ಅಡಿ ಆಳದ ಗುಂಡಿ ತೋಡಿ, ತಳಭಾಗದಲ್ಲಿ ಜಲ್ಲಿಕಲ್ಲು ಹಾಕಿ ಮೇಲ್ಭಾಗದಲ್ಲಿ ವೃತ್ತಾಕಾರವಾಗಿ ಸಿಮೆಂಟ್‌ ಹಾಕಿ ಕಬ್ಬಿಣದ ಸರಳಿನ ಮುಚ್ಚಳ ಹಾಕಲಾಗುತ್ತದೆ. ಗುಂಡಿಗೆ ಕಸ ಸೇರದಂತೆ ಫಿಲ್ಟರ್‌ ಅಳವಡಿಸಲಾಗುತ್ತದೆ. ನಂತರ ಚಾವಣಿ ಪೈಪ್‌ಲೈನ್‌ ಸಂಪರ್ಕ ನೀಡಲಾಗುತ್ತದೆ.

ಈ ಗುಂಡಿ ಕನಿಷ್ಠ 5 ಸಾವಿರ ಲೀ. ನೀರು ಹಿಡಿದಿಟ್ಟುಕೊಳ್ಳಬಲ್ಲದು. ಒಮ್ಮೆ ಬಂದ ಮಳೆಗೆ ಗುಂಡಿ ತುಂಬಿದರೆ ಒಂದು ದಿನದಲ್ಲಿ ಇಂಗುತ್ತದೆ. ಇನ್ನು ಹುಂಡಿಯಲ್ಲಿ ನೀರು ಹೆಚ್ಚಾದರೆ ಸಮೀಪದ ತ್ಯಾಜ್ಯಗುಂಡಿಗೆ ಪೈಪ್‌ ಸಂಪರ್ಕ ನೀಡಲಾಗಿರುತ್ತದೆ. ಅಲ್ಲದೆ ಇಂಗುಗುಂಡಿ ಕಾಣದಂತೆ ಅದರ ಮೇಲೆ ಹುಲ್ಲು ಹಾಸಿನ ಅಲಂಕಾರ ಮಾಡಬಹುದು ಎನ್ನುತ್ತಾರೆ ತಂಡದ ಸದಸ್ಯ ರಾಮಕೃಷ್ಣ.

“ಬೆಳ್ಳಂದೂರು ಜೊತೆಗೆ’ ಇಂದ ಚಾಲೇಂಜ್‌ 2,500: ಮಹಾದೇವಪುರ ಭಾಗದಲ್ಲಿ ಬಹುತೇಕ ಕೊಳವೆಬಾವಿಗಳು ಬತ್ತಿ ಹೋಗಿರುವುದರಿಂದ ಅಲ್ಲಿನ ಅಪಾರ್ಟ್‌ಮೆಂಟ್‌ ಮತ್ತು ಮನೆಗಳ ಸುತ್ತಲಿನ ಜಾಗದಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿಕೊಳ್ಳಲಾಗುತ್ತಿದೆ.

ಅಲ್ಲಿನ “ಬೆಳ್ಳಂದೂರು ಜೊತೆಗೆ’ ತಂಡದಿಂದ ಜಾಗೃತಿ ಮೂಡಿಸಲಾಗುತ್ತಿದ್ದು, ಇಂಗುಗುಂಡಿ ನಿರ್ಮಾಣಕ್ಕೆ ತಜ್ಞರಿಂದ ಅಗತ್ಯ ಸಲಹೆ, ಮಾರ್ಗದರ್ಶನ, ಕಾರ್ಮಿಕರ ಸಂಪರ್ಕ ಕೊಡಿಸಲಾಗುತ್ತಿದೆ. ಎರಡು ತಿಂಗಳಿಂದ ಈ ಕಾರ್ಯಕ್ರಮ ಆರಂಭಿಸಿದ್ದು, ಸದ್ಯ ಈ ಭಾಗದ ಅಪಾರ್ಟ್‌ಮೆಂಟ್‌ಗಳಲ್ಲಿ 150ಕ್ಕೂ ಹೆಚ್ಚು ಇಂಗುಗುಂಡಿ ನಿರ್ಮಾಣವಾಗಿವೆ ಎಂದು ವರ್ತೂರು ಕೆರೆ ಸಂರಕ್ಷಣಾ ಹೋರಾಟಗಾರ ಜಗದೀಶ್‌ ತಿಳಿಸಿದರು.

ಕಬ್ಬನ್‌ ಉದ್ಯಾನದಲ್ಲಿ ಇಂಗುಗುಂಡಿ: ನಗರದ ಕಬ್ಬನ್‌ ಉದ್ಯಾನದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು 65 ಕಡೆ ಇಂಗುಗುಂಡಿಗಳನ್ನು ನಿರ್ಮಿಸಲಾಗುತ್ತಿದೆ. ಸದ್ಯ, 4 ಅಡಿ ಅಗಲ, 20 ಅಡಿ ಆಳದ 35 ಗುಂಡಿಗಳನ್ನು ತೋಡಲಾಗಿದೆ. ಮಳೆಗಾಲದಲ್ಲಿ ಉದ್ಯಾನದಲ್ಲಿ ಬೀಳುವ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸಿ ಬೇಸಿಗೆಯಲ್ಲೂ ಹೆಚ್ಚು ಕೊಳವೆಬಾವಿ ನೀರು ಪಡೆದು, ಲಕ್ಷಾಂತರ ರೂ. ನೀರಿನ ಬಿಲ್‌ನಿಂದ ಮುಕ್ತಿ ಪಡೆಯಲು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ವಿದೇಶಿ ಕಂಪನಿಯೊಂದರ ಸಹಾಯ ಪಡೆದು, ತಜ್ಞರ ಸಲಹೆ ಮೇರೆಗೆ ಇಂಗು ಗುಂಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಭಿವೃದ್ಧಿ ಹೆಸರಲ್ಲಿ ಅಂತರ್ಜಲ ಪ್ರಮಾಣ ಕುಗ್ಗಿದೆ. ಜಲ ಮರುಪೂರಣಕ್ಕೆ ಇಂಗುಗುಂಡಿ ಸಂಪ್ರದಾಯ ಅಗತ್ಯವಾಗಿದ್ದು, ಬೆಂಗಳೂರಿನಂತಹ ಬೃಹತ್‌ನಗರಕ್ಕೆ 10 ಲಕ್ಷ ಇಂಗುಗುಂಡಿಗಳ ಅಗತ್ಯವಿದೆ. ಅಂತರ್ಜಲ ಹೆಚ್ಚಿಸುವ ಸುಲಭ ಕಾರ್ಯ ಇದಾಗಿದೆ.
-ವಿಶ್ವನಾಥ್‌, ಮಳೆನೀರು ಕೊಯ್ಲು ತಜ್ಞ

ನಗರ ಕೇಂದ್ರ ಭಾಗದಲ್ಲಿ ಇತ್ತೀಚೆಗೆ ಇಂಗುಗುಂಡಿ ನಿಮಾರ್ಣಕ್ಕೆ ಹೆಚ್ಚು ಬೇಡಿಕೆ ಬರುತ್ತಿದ್ದು, ಈ ವರ್ಷ ರಾಜಾಜಿನಗರ, ಸದಾಶಿವನಗರ, ಮಲ್ಲೇಶ್ವರ, ಶ್ರೀರಾಮಪುರ, ಹಲಸೂರು, ದೊಮ್ಮಲೂರು ಭಾಗದಲ್ಲಿ ನೂರಕ್ಕು ಹೆಚ್ಚು ಇಂಗುಗುಂಡಿ ನಿರ್ಮಿಸಿದ್ದೇವೆ.
-ಶಂಕರ್‌, ಕಾರ್ಮಿಕ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next