Advertisement

ಹುಲ್ಲಿಗೆ ಬೆಂಕಿ: ಗೋವುಗಳ ಹೊಟ್ಟೆಗೂ “ಬೆಂಕಿ’

09:49 PM May 10, 2020 | Sriram |

ಉಡುಪಿ: ಬೇಸಗೆ ಸಮಯ ಬಂದಾಕ್ಷಣ ರಸ್ತೆ ಬದಿ, ಹೊಲಗಳಲ್ಲಿ ಉದ್ದುದ್ದ ಬೆಳೆದ ಹುಲ್ಲುಗಾವಲುಗಳಿಗೆ ಬೆಂಕಿ ಹಾಕುವುದು ಸಾಮಾನ್ಯ. ಇದು ಕೇವಲ ಹುಲ್ಲುಗಳನ್ನು ಸುಡುವುದಷ್ಟೇ ಅಲ್ಲದೆ, ಆ ಪ್ರದೇಶದ ದೊಡ್ಡ ಮರಗಳೂ ಸುಟ್ಟು ಹೋಗುತ್ತವೆ. ಇದರ ಜತೆಗೆ ಹುಲ್ಲುಗಾವಲಿನ ಒಳಗೆ ಸೇರಿಕೊಂಡ ನಾಗರಹಾವು ಸೇರಿದಂತೆ ನೂರಾರು ಜೀವಿಗಳು ಸಾಯುತ್ತವೆ. ಕೋವಿಡ್-19 ಕಾರಣದಿಂದ ಮೇವಿನ ಕೊರತೆ ಎದುರಿಸುತ್ತಿರುವ ಗೋವುಗಳ ಆಹಾರಕ್ಕೂ “ಬೆಂಕಿ’ ಹಾಕಿದಂತಾಗುತ್ತದೆ.

Advertisement

ಜನರು ತಮ್ಮ ಮನೆ ಬಳಿ ಕ್ಲೀನ್‌ ಮಾಡಬೇಕೆಂಬ ಉದ್ದೇಶದಿಂದ ಬೆಳೆದ ಹುಲ್ಲುಗಳಿಗೆ ಬೆಂಕಿ ಹಾಕಿ ಅನಂತರ ನಿಯಂತ್ರಿಸಲು ಸಾಧ್ಯವಾಗದಾಗ ಅಗ್ನಿಶಾಮಕ ಠಾಣೆಗಳಿಗೆ ಕರೆ ನೀಡುತ್ತಾರೆ. ಗದ್ದೆಗಳ ಬದುಗಳನ್ನು ಕ್ಲೀನ್‌ ಮಾಡುವಾಗ ಹುಲ್ಲುಗಳಿಗೆ ಬೆಂಕಿ ಹಾಕುತ್ತಾರೆ. ಇದು ಗಾಳಿಯಿಂದ ಇನ್ನೊಬ್ಬರ ಗದ್ದೆಗಳಿಗೂ ಹರಡಿ ಕೋವಿಡ್-19 ಕಾರಣದಿಂದ ಗೋ ಶಾಲೆಗಳು, ಮನೆಗಳಲ್ಲಿ ಸಾಕುವ ಗೋವುಗಳಿಗೆ ಮೊದ ಮೊದಲು ಒಣಹುಲ್ಲಿನ ಕೊರತೆ ಇದಿರಾಯಿತು. ಆದರೆ ಜಿಲ್ಲಾಡಳಿತ ಕೃಷಿ ಸಂಬಂಧಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟದ್ದರಿಂದ ತೀರ್ಥಹಳ್ಳಿಯಿಂದ ಬರುವ ಹುಲ್ಲುಗಳಿಗೆ ತೊಂದರೆಯಾಗಲಿಲ್ಲ. ಆದರೆ ಬೀಡಾಡಿ ದನಗಳು, ಮನೆಗಳಲ್ಲಿ ಸಾಕುವ ಜಾನುವಾರುಗಳು ಅವುಗಳಷ್ಟಕ್ಕೆ ಗದ್ದೆ, ತೋಪುಗಳಿಗೆ ಹೋಗಿ ಮೆಂದುಕೊಂಡು ಬರುವ ದನಗಳಿಗೆ ಬೆಳೆದ ಹುಲ್ಲುಗಳಿಗೆ ಬೆಂಕಿ ಕೊಡುವುದರಿಂದ ತೊಂದರೆಯಾಗುತ್ತಿದೆ.

ಕೋವಿಡ್-19 ಕಾರಣದಿಂದಲೋ ಏನೋ ಈ ಬಾರಿ ಬೆಂಕಿ ಅನಾಹುತ ಉಂಟಾದುದು ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ. ಇತ್ತೀಚಿಗೆ ಒಂದೆರಡು ಮಳೆ ಬಂದಿರುವದೂ ಕಾರಣವಿರಬಹುದು. ಉಡುಪಿ ಠಾಣೆಯೊಂದರಲ್ಲೇ ಹೋದ ವರ್ಷ 300 ಅಗ್ನಿ ಆಕಸ್ಮಿಕ ಘಟನೆಗಳಿಗೆ ಸಾರ್ವಜನಿಕರ ಕರೆ ಬಂದಿತ್ತು. ಈ ಬಾರಿ ಸುಮಾರು 160 ಕರೆಗಳು ಮಾತ್ರ ಬಂದಿವೆ. ಕಾರ್ಕಳ, ಕುಂದಾಪುರ ಠಾಣೆಗಳಿಗೆ ತಲಾ 100 ಕರೆ, ಮಲ್ಪೆ ಠಾಣೆಗೆ 45 ಕರೆಗಳು ಬಂದಿವೆ. ಇವು ಹೋದ ವರ್ಷಕ್ಕೆ ಹೋಲಿಸಿದರೆ ಬಹಳ ಕಡಿಮೆ. ಈಗ ಜನರಿಗೆ ಅರಿವು ಇರುವುದರಿಂದ ಬೀಡಿ, ಸಿಗರೇಟು ಸೇದಿ ಬಿಸಾಡಿದ ಕಾರಣದಿಂದ ಅಗ್ನಿ ಆಕಸ್ಮಿಕ ಅಷ್ಟಾಗಿ ಆಗುತ್ತಿಲ್ಲ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಚ್‌.ಎಂ. ವಸಂತಕುಮಾರ್‌.

ಜಾಗೃತಿ ಮೂಡಿದೆ
ಹೋದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಗ್ನಿ ಆಕಸ್ಮಿಕದ ದೂರವಾಣಿ ಕರೆಗಳು ಬಹಳ ಕಡಿಮೆ. ಬೀಡಿ, ಸಿಗರೇಟು ಸೇದಿ ಬಿಸಾಡಿದ ಕಾರಣದಿಂದ ಅಗ್ನಿ ದುರಂತ ಘಟನೆಗಳು ಅಷ್ಟಾಗಿ ನಡೆಯುತ್ತಿಲ್ಲ. ಇದಕ್ಕೆ ಜನರಲ್ಲಿ ಉಂಟಾದ ಜಾಗೃತಿ ಕಾರಣ. ಆದರೆ ಜನರೇ ಬೆಂಕಿ ಹಾಕಿ ನಿಯಂತ್ರಿಸಲು ಆಗದೆ ನಮಗೆ ಕರೆ ನೀಡುತ್ತಾರೆ.
-ಎಚ್‌.ಎಂ. ವಸಂತಕುಮಾರ್‌, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ, ಉಡುಪಿ.

ಆಹಾರಕ್ಕೆ ಧಕ್ಕೆ
ಗದ್ದೆಗಳಲ್ಲಿ ಬೆಳೆದ ಹುಲ್ಲುಗಳಿಗೆ ಬೆಂಕಿ ಹಾಕುವುದರಿಂದ ಪ್ರಾಕೃತಿಕವಾಗಿ ಸಿಕ್ಕಿದ ಮೇವನ್ನು ನಷ್ಟ ಮಾಡಿ ಕೊಂಡಂತಾಗುತ್ತದೆ. ಇದರಿಂದ ಜಾನುವಾರುಗಳ ಆಹಾರಕ್ಕೆ ಧಕ್ಕೆ ಆಗುತ್ತದೆ.
-ಡಾ| ಹರೀಶ್‌ ತಮಣ್ಕರ್ , ಜಿಲ್ಲಾ ಉಪನಿರ್ದೇಶಕರು, ಪಶುಸಂಗೋಪನ ಇಲಾಖೆ, ಉಡುಪಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next