ಸಿರುಗುಪ್ಪ: ತಾಲೂಕಿನ ಕರೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ದೊಡ್ಡ ಹಳ್ಳದಲ್ಲಿ ನೀರು ಸಂಪೂರ್ಣವಾಗಿ ಬತ್ತಿಹೋಗಿದ್ದು, ವಿವಿಧ ಬೆಳೆಗಳನ್ನು ಬೆಳೆದ ರೈತರು ಬೆಳೆ ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಳ್ಳದ ನೀರನ್ನು ಹರಿಸಿಕೊಂಡು ರೈತರು ಏತನೀರಾವರಿ ಯೋಜನೆ ಅಳವಡಿಸಿಕೊಂಡಿದ್ದಾರೆ.
ತಾಲೂಕಿನ ಎಚ್. ಹೊಸಳ್ಳಿ, ಹಾಗಲೂರು, ದರೂರು, ಕರೂರು, ಗೋಸ್‌ಬಾಳು, ಬೂದುಗುಪ್ಪ, ಕೂರಿಗನೂರು, ಮಾಟಸೂಗೂರು ಮುಂತಾದ ಗ್ರಾಮಗಳ ರೈತರು ದೊಡ್ಡ ಹಳ್ಳದ ನೀರನ್ನು ಬಳಸಿಕೊಂಡು ಭತ್ತ, ಹತ್ತಿ, ಮೆಣಸಿನಕಾಯಿ, ಜೋಳ, ಸಜ್ಜೆ ಮುಂತಾದ ಬೆಳೆಗಳನ್ನು ಬೇಸಿಗೆ ಹಂಗಾಮಿನಲ್ಲಿ 3 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದು, ಈಗಾಗಲೇ ಭತ್ತದ ಬೆಳೆಯು ಕಾಳುಕಟ್ಟುವ ಹಂತದಲ್ಲಿದ್ದು, ಸುಮಾರು 25ದಿನಗಳವರೆಗೆ ಭತ್ತಕ್ಕೆ ನೀರು ಬೇಕಾಗುತ್ತದೆ.
ತಿಂಗಳ ಹಿಂದೆ ಬೆಳೆದ ಜೋಳ, ಸಜ್ಜೆಯ ಬೆಳೆಗೆ ಒಂದು ತಿಂಗಳು ನೀರು ಬೇಕಾಗುತ್ತದೆ. ದೊಡ್ಡ ಹಳ್ಳಕ್ಕೆ ಪ್ರಮುಖ ನೀರಿನ ಮೂಲ ಇರುವುದು ಎಚ್ ಎಲ್‌ಸಿ ಕಾಲುವೆಯಿಂದ, ಎಚ್ ಎಲ್‌ಸಿ ಕಾಲುವೆ ರೈತರು ತಮ್ಮ ಜಮೀನುಗಳಿಗೆ ನೀರು ಹರಿಸಿಕೊಂಡ ನಂತರ ಬರುವ ಬಸಿನೀರು ಹಳ್ಳದಲ್ಲಿ ಸಂಗ್ರಹವಾಗಿ ಹರಿಯುತ್ತಿದ್ದು, ಎಚ್‌ಎಲ್‌ಸಿ ಕಾಲುವೆಗೆ ಮಾರ್ಚ್ ಮೊದಲ ವಾರದವರೆಗೆ ನೀರು ಹರಿಸಿದ್ದರಿಂದ ದೊಡ್ಡ ಹಳ್ಳದಲ್ಲಿ ನೀರಿನ ಹರಿ ಮುಂದುವರೆದಿತ್ತು ಆದರೆ ಎಚ್‌ಎಲ್‌ಸಿ ಕಾಲುವೆಗೆ ಸದ್ಯ ನೀರು ಹರಿಸುವುದನ್ನು ನಿಲ್ಲಿಸಲಾಗಿದ್ದರಿಂದ ಈ ಹಳ್ಳದಲ್ಲಿ ನೀರಿನ ಹರಿವು ಬತ್ತಿಹೋಗಿ ವಿವಿಧ ಬೆಳೆ ಬೆಳೆದ ರೈತರು ತಮ್ಮ ಬೆಳೆದ ಬೆಳೆಗಳಿಗೆ ನೀರು ಹರಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.
ನಮ್ಮ ಬೆಳೆ ಉಳಿಸಲು ಸರ್ಕಾರ ಎಲ್‌ಎಲ್‌ಸಿ ಕಾಲುವೆಯ ಗುಡದೂರು ಎಸ್ಕೇಪ್‌ನಿಂದ ನೀರು ಹರಿಸಬೇಕು. ಆಗ ಮಾತ್ರ ನಮ್ಮ ಬೆಳೆಗಳು ಕೈಗೆ ಬರಲು ಸಾಧ್ಯವಾಗುತ್ತದೆ. ಆದ್ದರಿಂದ ಶಾಸಕ ಎಂ.ಎಸ್. ಸೋಮಲಿಂಗಪ್ಪ ದೊಡ್ಡಹಳ್ಳಕ್ಕೆ ನೀರು ಬಿಡಿಸಲು ಮುಂದಾಗಬೇಕೆಂದು ದೊಡ್ಡಹಳ್ಳ ವ್ಯಾಪ್ತಿಯ ರೈತರು ಆಗ್ರಹಿಸಿದ್ದಾರೆ.