Advertisement

ಧ್ರುವ ಜುರೆಲ್‌ ಶತಕ; ಭಾರತ ಚಾಂಪಿಯನ್‌

10:13 AM Jan 10, 2020 | Team Udayavani |

ಡರ್ಬನ್‌: ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಅಭ್ಯಾಸಾರ್ಥವಾಗಿ ನಡೆದ ಚತುಷ್ಕೋನ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಗುರುವಾರ ಡರ್ಬನ್‌ನ “ಕಿಂಗ್ಸ್‌ಮೀಡ್‌ ಸ್ಟೇಡಿಯಂ’ನಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಪ್ರಿಯಂ ಗರ್ಗ್‌ ಸಾರಥ್ಯದ ಭಾರತದ ಕಿರಿಯರ ಪಡೆ ಆತಿಥೇಯ ದಕ್ಷಿಣ ಆಫ್ರಿಕಾವನ್ನು 69 ರನ್ನುಗಳಿಂದ ಬಗ್ಗುಬಡಿಯಿತು.

Advertisement

ಟಾಸ್‌ ಸೋತು ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಧ್ರುವ ಜುರೆಲ್‌ ಅವರ ಆಕರ್ಷಕ ಶತಕ ಸಾಹಸದಿಂದ 7 ವಿಕೆಟಿಗೆ 259 ರನ್‌ ಪೇರಿಸಿ ಸವಾಲೊಡ್ಡಿತು. ಜವಾಬಿತ್ತ ದಕ್ಷಿಣ ಆಫ್ರಿಕಾ 43.1 ಓವರ್‌ಗಳಲ್ಲಿ 190ಕ್ಕೆ ಆಲೌಟ್‌ ಆಯಿತು.

4ನೇ ವಿಕೆಟಿಗೆ 164 ರನ್‌
ಭಾರತದ ಆರಂಭ ಅತ್ಯಂತ ಆಘಾತಕಾರಿ ಯಾಗಿತ್ತು. ವೇಗಿ ಗೆರಾಲ್ಡ್‌ ಕೋಟಿj ದಾಳಿಗೆ ತತ್ತರಿಸಿ 13 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಉದುರಿಸಿಕೊಂಡಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್‌ (0), ದಿವ್ಯಾಂಶ್‌ ಸಕ್ಸೇನಾ (6) ಮತ್ತು ನಾಯಕ ಪ್ರಿಯಂ ಗರ್ಗ್‌ (2) ಬೇಗನೇ ಪೆವಿಲಿಯನ್‌ ಸೇರಿಕೊಂಡರು. ಭಾರತದ ಸ್ಥಿತಿ ಚಿಂತಾಜನಕವೆನಿಸಿತು.

ಆದರೆ ವನ್‌ಡೌನ್‌ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮ ಮತ್ತು ವಿಕೆಟ್‌ ಕೀಪರ್‌ ಧ್ರುವ ಜುರೆಲ್‌ ಹರಿಣಗಳ ದಾಳಿಗೆ ಸಡ್ಡು ಹೊಡೆದು ನಿಂತರು. ನಿಧಾನವಾಗಿ ಇನ್ನಿಂಗ್ಸ್‌ ಬೆಳೆಸುತ್ತ 4ನೇ ವಿಕೆಟಿಗೆ 164 ರನ್‌ ಪೇರಿಸಿದರು.

44ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಉತ್ತರಪ್ರದೇಶದ ಬಲಗೈ ಆಟಗಾರ ಧ್ರುವ ಜುರೆಲ್‌ ಆಕರ್ಷಕ ಹಾಗೂ ಜವಾಬ್ದಾರಿಯುತ ಆಟವಾಡಿ 101 ರನ್‌ ಬಾರಿಸಿದರು. 115 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ ಒಳಗೊಂಡಿತ್ತು.

Advertisement

ಹೈದರಾಬಾದ್‌ನ ಎಡಗೈ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮ ಕೊಡುಗೆ 70 ರನ್‌. 103 ಎಸೆತ ಎದುರಿಸಿದ ವರ್ಮ, 7 ಬೌಂಡರಿ, 1 ಸಿಕ್ಸರ್‌ ಹೊಡೆದರು.

ಈ ಜೋಡಿ ಬೇರ್ಪಟ್ಟ ಬಳಿಕ ಸಿದ್ದೇಶ್‌ ವೀರ್‌ ಸಿಡಿದು ನಿಂತರು. 37 ಎಸೆತಗಳಿಂದ ಅಜೇಯ 48 ರನ್‌ ಬಾರಿಸಿದರು (3 ಬೌಂಡರಿ, 2 ಸಿಕ್ಸರ್‌).

ಜಾಕ್‌ ಲೀಸ್‌ ಹೋರಾಟ
ಭಾರತದ ಬೌಲಿಂಗ್‌ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ನಿರಂತರವಾಗಿ ವಿಕೆಟ್‌ಗಳನ್ನು ಉರುಳಿಸಿಕೊಳ್ಳುತ್ತ ಹೋಯಿತು. 95 ರನ್‌ ಆಗುವಷ್ಟರಲ್ಲಿ 5 ಮಂದಿಯ ಆಟ ಮುಗಿದಿತ್ತು. ಆದರೆ ಕೆಳ ಕ್ರಮಾಂಕದಲ್ಲಿ ಜಾಕ್‌ ಲೀಸ್‌ ಉತ್ತಮ ಹೋರಾಟವೊಂದನ್ನು ಸಂಘಟಿಸಿ ಆತಿಥೇಯರ ಆಸೆಯನ್ನು ಜೀವಂತವಾಗಿರಿಸಿದರು. ಲೀಸ್‌ ಆಫ್ರಿಕಾ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು (52).

ಸ್ಪಿನ್ನರ್‌ಗಳಾದ ಅಥರ್ವ ಅಂಕೋಲೆಕರ್‌ 4, ರವಿ ಬಿಶ್ನೋಯಿ 2 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌
ಭಾರತ-7 ವಿಕೆಟಿಗೆ 259 (ಧ್ರುವ ಜುರೆಲ್‌ 101, ತಿಲಕ್‌ ವರ್ಮ 70, ಸಿದ್ದೇಶ್‌ ವೀರ್‌ ಔಟಾಗದೆ 48, ಗೆರಾಲ್ಡ್‌ ಕೋಟಿj 19ಕ್ಕೆ 3). ದಕ್ಷಿಣ ಆಫ್ರಿಕಾ-43.1 ಓವರ್‌ಗಳಲ್ಲಿ 190 (ಲೀಸ್‌ 52, ಬರ್ಡ್‌ 39, ವುÂರೆನ್‌ 24, ಅಂಕೋಲೆಕರ್‌ 31ಕ್ಕೆ 4, ಬಿಶ್ನೋಯಿ 29ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next