Advertisement
ಗ್ರೆನೇಡ್ ಎಸೆದು ವಯರ್‌ಲೆಸ್ ಸ್ಟೇಶನ್ ನಾಶ 1971ರಲ್ಲಿ ಪ್ರಭು ಅವರನ್ನು ನಾಗಾಲ್ಯಾಂಡ್ ಮೌಂಟೇನ್ ಬ್ರಿಗೇಡ್‌ಗೆ ನಿಯೋಜಿಸಲಾಗಿತ್ತು. ಅದೇ ವರ್ಷ ಬಾಂಗ್ಲಾದಲ್ಲಿ ಸ್ವಾತಂತ್ರ್ಯಕ್ಕಾಗಿ ಮುಕ್ತಿ ವಾಹಿನಿ ಎಂಬ ಜನರ ಸೈನ್ಯ ಪಾಕಿಸ್ಥಾನ ಸೈನಿಕರ ವಿರುದ್ಧ ಹೋರಾಟ ನಡೆಸುತ್ತಿತ್ತು. ಈ ಸಮಯದಲ್ಲಿ ಮುಕ್ತಿ ವಾಹಿನಿಗೆ ಅಗತ್ಯ ನೆರವು, ಶಸ್ತ್ರಾಸ್ತ್ರ ಕಲ್ಪಿಸುವುದು ನಮ್ಮ ಕೆಲಸವಾಗಿತ್ತು. ಡಿ. 3ರಂದು ಪಾಕಿಸ್ಥಾನ ವಿರುದ್ಧ ಯುದ್ಧ ಘೋಷಣೆಯಾಗಿತ್ತು. ಪಾಕ್ ಸೈನಿಕರ ಮೇಲೆ ದಾಳಿ ಮಾಡಿಕೊಂಡು ಹೋಗುತ್ತಿದ್ದಾಗ ನಮ್ಮ ಟ್ಯಾಂಕರ್ ಕೈಕೊಟ್ಟಿತ್ತು. ಪಾಕ್ ಸೈನಿಕರು ನಮ್ಮನ್ನು ಸುತ್ತುವರಿದರು. ನಮ್ಮ ಬಳಿ ಇರುವ ವಯರ್‌ಲೆಸ್ ಮೂಲಕ ದಿಲ್ಲಿಗೆ ಸಂದೇಶ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಸಮೀಪದಲ್ಲಿದ್ದ ಪಾಕ್‌ನ ವಯರ್‌ಲೆಸ್ ಕೇಂದ್ರಕ್ಕೆ ಅದು ಸಂಪರ್ಕ ಆಗುತ್ತಿತ್ತು. ಈ ವೇಳೆ ರಾತ್ರಿ ಒಬ್ಬರೇ ಕಾಡಿನಲ್ಲಿ ನಡೆದುಕೊಂಡು ಹೋಗಿ ಹ್ಯಾಂಡ್ ಗ್ರೆನೇಡ್ ಅನ್ನು ಆಕ್ಟಿವ್ ಮಾಡಿ ಪಾಕ್‌ನ ಬಂಕರ್ ಮತ್ತು ವಯರ್‌ಲೆಸ್ ಸ್ಟೇಶನ್ ಮೇಲೆ ಎಸೆದು ನಾಶಪಡಿಸಿದ ಎದೆಗಾರಿಕೆ ಪ್ರಭು ಅವರದು. ಇದರಿಂದ ಭಾರತೀಯ ಸೈನಿಕರಿಗೆ ದಿಲ್ಲಿಗೆ ಸಂದೇಶ ಕಳುಹಿಸಲು ಸಹಕಾರಿಯಾಯಿತು. ಈ ವೇಳೆ ಪಾಕ್ ಸೈನಿಕರ ಕೈಗೆ ಸಿಕ್ಕಿಬಿದ್ದು ಪ್ರಭು ಯುದ್ಧ ಕೈದಿಯಾದರು.ರಮ್ ಕುಡಿದು ಯಮಲೋಕ ಸೇರಿದ ಪಾಕ್ ಸೈನಿಕರು
ಪ್ರಭು ಅವರನ್ನು ಸೆರೆ ಹಿಡಿದ ಪಾಕ್ ಸೈನಿಕರು, ಬಟ್ಟೆ ಬಿಚ್ಚಿ ಸಂಪೂರ್ಣ ನಗ್ನಗೊಳಿಸಿ ಬೆನ್ನಿಗೆ ರೈಫಲ್‌ಗಳಿಂದ ಪೆಟ್ಟು ಕೊಟ್ಟಿದ್ದರು. ಈ ಬೆನ್ನು ನೋವನ್ನು ಈಗಲೂ ಅನುಭವಿಸುತ್ತಿದ್ದಾರೆ. ಬಾಂಗ್ಲಾದ ಕಾಡು ಪ್ರದೇಶ ಸೈಯದ್‌ಪುರದ ಜೈಲಿನಲ್ಲಿ ಇಡಲಾಗಿತ್ತು. ಅಲ್ಲಿ ಇವರೊಬ್ಬರೇ ಕೈದಿಯಾಗಿದ್ದರು. ಅದೇ ಸಮಯದಲ್ಲಿ ಭಾರತೀಯ ಸೇನೆಯ ಕ್ಯಾಂಪ್‌ಗೆ ಬರಬೇಕಿದ್ದ ಆಹಾರ ಸಾಮಗ್ರಿ ಹೊತ್ತ ಟ್ರಕ್ ಕಣ್ತಪ್ಪಿನಿಂದ ಪಾಕ್ ಸೈನಿಕರ ಕ್ಯಾಂಪ್‌ಗೆ ಬಂದಿತ್ತು. ಇದನ್ನು ವಶಪಡಿಸಿಕೊಂಡಿದ್ದ ಸೈನಿಕರು ಅದರಲ್ಲಿದ್ದ ಮದ್ಯ (ರಮ್) ಬಾಟಲಿ ತೋರಿಸಿ ಇದು ಏನು ಎಂದು ಕೇಳಿದ್ದರು. ಇದು ಆಲ್ಕೊಹಾಲ್, ಚಳಿಯಿಂದ ರಕ್ಷಣೆ ಮತ್ತು ಸ್ಪಿರಿಟ್‌ಗಾಗಿ ಇದನ್ನು ಸೇವಿಸಲಾಗುತ್ತದೆ ಎಂದು ಪ್ರಭು ತಿಳಿಸಿದರು. ಅವರಲ್ಲಿ ಒಬ್ಟಾತ ಅದನ್ನು ಸೇವಿಸಿ ಖುಷಿಪಟ್ಟ. ಬಳಿಕ 12 ಬಾಟಲಿಗಳನ್ನು ಏಳೆಂಟು ಮಂದಿ ಸೈನಿಕರು ಕುಡಿದು ಅಮಲೇರಿಸಿ ಕೊಂಡರು. ಓರ್ವ ಮದ್ಯದ ಅಮಲಿನಲ್ಲಿ ನಿಯಂತ್ರಣ ತಪ್ಪಿ ಭದ್ರತಾ ಗೋಡೆಯ ವಿದ್ಯುತ್ ತಂತಿ ಬೇಲಿ ಮೇಲೆ ಬಿದ್ದು ಕರಕಲಾದ. ಪಾನಮತ್ತರಾಗಿದ್ದ ಆರೇಳು ಪಾಕ್ ಸೈನಿಕರ ಎದೆಗೆ ಬಂದೂಕಿನ ಎದುರಿದ್ದ ಚೂಪಾದ ಆಯುಧದಿಂದ ತಿವಿದು ಕೊಂದು ಪರಾರಿಯಾದೆ ಎಂಬ ರೋಚಕ ಕಥಾನಕವನ್ನು ಪ್ರಭು ಬಿಚ್ಚಿಡುತ್ತಾರೆ.
ಸೈಯದ್‌ಪುರದಿಂದ ಪಾಕ್ ಸೈನಿಕರ ಬಟ್ಟೆ ಹಾಕಿಕೊಂಡು ಒಂದು ಕಿಲೋ ಮೀಟರ್ ಕಾಡಿನಲ್ಲಿ ತೆವಳಿಕೊಂಡು ಭಾರ ತೀಯ ಸೈನಿಕರ ಕ್ಯಾಂಪ್‌ಗೆ ಮರಳಿದೆ. ಅದು ಮರಾಠ ರೆಜಿಮೆಂಟ್ ಕ್ಯಾಂಪ್ ಆಗಿದ್ದು, ಪಾಕ್ ಗೂಢಚಾರನೆಂದು ಅವರು ನನ್ನ ಬಂಧಿಸಿದರು. ಜೈಲಿನಲ್ಲಿಟ್ಟು ಗೌರವಯುತವಾಗಿ ನಡೆಸಿಕೊಂಡಿದ್ದರು. ವಿಚಾರಣೆ ವೇಳೆ ನಾನು ಭಾರತೀಯ ಸೈನಿಕ ಎಂದು ಐಡಿ, ಕೋಡ್‌ವರ್ಡ್ ಹೇಳಿದರೂ ನಂಬಿಲ್ಲ. ಬಳಿಕ ಸತ್ಯವನ್ನು ಪರಾ ಮರ್ಶಿಸಲು ನಮ್ಮ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಯಾಂಪ್‌ನ ಹಿರಿಯ ಅಧಿಕಾರಿ ಗಳನ್ನು ಕರೆಸಿದ್ದರು. ಅವರು ನನ್ನ ಗುರುತು ಹಿಡಿದರು. ಡಿ. 16ಕ್ಕೆ ಯುದ್ಧ ಮುಗಿದು ನಮ್ಮವರಿಂದ ಸೈಯದ್‌ಪುರ, ದಿನಾಜ್‌ಪುರ, ಬಿರ್‌ಗಂಜ್ ವಶಪಡಿಸಿ ಕೊಂಡಿದ್ದೆವು. ಬೆನ್ನು ನೋವು ಹೇಳಿದಲ್ಲಿ ಮೆಡಿಕಲಿ ಅನ್‌ಫಿಟ್ ಎಂದು ಸೈನ್ಯದಿಂದ ವಾಪಸ್ ಕಳುಹಿಸು ತ್ತಾರೆ ಎಂಬ ಭಯದಿಂದ ಪಾಕ್ ಸೈನಿಕರು ಬೆನ್ನಿಗೆ ಗುದ್ದಿದ್ದ ನೋವನ್ನು ಸಹಿಸಿಕೊಂಡು ಕರ್ತವ್ಯ ನಿರ್ವಹಿಸಿದೆ. ನನ್ನ ಸೈನಿಕ ವೃತ್ತಿ ಜೀವನದಲ್ಲಿ 4 ಯುದ್ಧಗಳಲ್ಲಿ ಪಾಲ್ಗೊಂಡಿದ್ದೇನೆ. ಇದರಲ್ಲಿ ಭಾರತ- ಚೀನ, 1971ರ ಭಾರತ-ಪಾಕ್ ಯುದ್ಧ ನನ್ನ ಪಾಲಿನ ಅವಿಸ್ಮರಣೀಯ ದಿನಗಳು ಎನ್ನುತ್ತಾರೆ ಪ್ರಭು.
Related Articles
Advertisement