ನವದೆಹಲಿ: ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಮಹಿಳಾ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಘಟನೆ ನವೆಂಬರ್ ತಿಂಗಳಲ್ಲಿ ನಡೆದಿದ್ದು ಈ ವೇಳೆ ಪಾನಮತ್ತ ವ್ಯಕ್ತಿಯ ಮೇಲೆ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ. ಬಳಿಕ ಮಹಿಳೆ ಏರ್ ಇಂಡಿಯಾದ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಇಮೇಲ್ ಮೂಲಕ ದೂರು ನೀಡಿದ ಬಳಿಕ ವಿಚಾರ ಬಹಿರಂಗವಾಗಿದೆ. ಈ ಘಟನೆಯ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ವಿಮಾನಯಾನ ಸಂಸ್ಥೆಯಿಂದ ವರದಿ ಕೇಳಿದೆ.
ವಿಮಾನ ನ್ಯೂಯಾರ್ಕ್ ನಿಂದ ದೆಹಲಿಗೆ ಹೊರಟಿತ್ತು ಎನ್ನಲಾಗಿದೆ ಈ ವೇಳೆ ಬಿಸಿನೆಸ್ ಕ್ಲಾಸ್‌ನಲ್ಲಿ ಕುಳಿತ್ತಿದ್ದ ವ್ಯಕ್ತಿ ಪಕ್ಕದಲ್ಲೇ ಇದ್ದ ಎಪ್ಪತ್ತು ವರ್ಷದ ಮಹಿಳಾ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎನ್ನಲಾಗಿದೆ. ಮಹಿಳೆಯ ಬಟ್ಟೆ ಬ್ಯಾಗ್ ಎಲ್ಲಾ ಒದ್ದೆಯಾಗಿದ್ದು ವಿಮಾನದ ಸಿಬ್ಬಂದಿ ಮಹಿಳೆಗೆ ಬಟ್ಟೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ವಿಮಾನದಲ್ಲಿ ಬೇರೆ ಸೀಟುಗಳು ಖಾಲಿ ಇದ್ದರೂ ಸಿಬ್ಬಂದಿಗಳು ನನಗೆ ಸೀಟು ನೀಡಲಿಲ್ಲ ಕೊನೆಗೆ ಸಿಬ್ಬಂದಿಯೊಬ್ಬರ ಸೀಟ್ ನಲ್ಲಿ ಕುಳಿತು ಪ್ರಯಾಣ ಬೆಳೆಸಿದೆ. ಅಷ್ಟು ಮಾತ್ರವಲ್ಲದೆ ನನ್ನ ಮೇಲೆ ಮೂತ್ರ ಮಾಡಿದ ವ್ಯಕ್ತಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮಹಿಳೆ ಏರ್ ಇಂಡಿಯಾದ ಗ್ರೂಪ್ ಅಧ್ಯಕ್ಷರಿಗೆ ಇಮೇಲ್ ಮೂಲಕ ದೂರನ್ನು ನೀಡಿದ್ದಾರೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಏರ್ ಇಂಡಿಯಾ ಆಂತರಿಕ ಸಮಿತಿಯನ್ನು ರಚಿಸಿ ಆರೋಪಿಯನ್ನು ನೋ ಫ್ಲೈ ಲಿಸ್ಟ್ ಗೆ ಸೇರಿಸಿದೆ, ಅಲ್ಲದೆ ಪ್ರಯಾಣಿಕರನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ರಾಜ್ಯದ ಕ್ಷಮೆ ಕೇಳಲಿ: ಗೃಹ ಸಚಿವ ಆರಗ ಜ್ಞಾನೇಂದ್ರ