Advertisement

ರಾಜಧಾನಿಯಲ್ಲಿ ಡ್ರಗ್ಸ್‌ ಜಾಲದ ಬೇಟೆ

11:34 AM Sep 06, 2020 | Suhan S |

ಬೆಂಗಳೂರು: ಸ್ಯಾಂಡಲ್‌ ವುಡ್‌ ಮಾತ್ರವಲ್ಲದೆ ನಗರದಲ್ಲಿ ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಪೂರೈಕೆ ಮಾಡುತ್ತಿರುವ ಜಾಲಗಳ ಬೆನ್ನುಬಿದ್ದಿರುವ ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಸ್ನಾತಕೋತ್ತರ ಪದವಿಧರ ಸೇರಿ ಮೂವರು ಅಂತಾರಾಜ್ಯ ಡ್ರಗ್ಸ್‌ ಪೆಡ್ಲರ್‌ ಗಳನ್ನು ಬಂಧಿಸಿದ್ದಾರೆ.

Advertisement

ಕೇರಳ ಮೂಲದ ಸುಬ್ರಮಣಿ (26), ವಿದುಸ್‌ (31) ಮತ್ತು ಶೆಜಿನ್‌ (21) ಬಂಧಿತರು. ಅವರಿಂದ 44 ಲಕ್ಷ ರೂ. ಮೌಲ್ಯದ 2,113 ಗ್ರಾಂ ಹ್ಯಾಶಿಶ್‌ ಆಯಿಲ್‌, ಎರಡು ಕೆ.ಜಿ.ಗಾಂಜಾ, ಆಯಿಲ್‌ ತುಂಬಲು ಇಟ್ಟುಕೊಂಡಿದ್ದ 105 ಖಾಲಿ ಡಬ್ಬಗಳು, ಕೃತ್ಯಕ್ಕೆ ಬಳಸುತ್ತಿದ್ದ ಎರಡು ಮೊಬೈಲ್‌ ಫೋನ್‌ಗಳು, ತೂಕದ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಮೂವರು ಕೆ.ಆರ್‌.ಪುರ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಾಗಿದ್ದುಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದರು. ಈ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು ಆಂಧ್ರಪ್ರದೇಶ ವೈಜಾಕ್‌ ಮೂಲದ ಡ್ರಗ್ಸ್‌ ಪೆಡ್ಲರ್‌ ಜತೆ ಸಂಪರ್ಕ ಇಟ್ಟುಕೊಂಡು, ಆತನಿಂದ ಸಗಟು ರೂಪದಲ್ಲಿ ಗಾಂಜಾ ಹಾಗೂ ಹ್ಯಾಶಿಶ್‌ ಆಯಿಲ್‌ ಮುಂತಾದ ಡ್ರಗ್ಸ್‌ ತರಿಸಿಕೊಳ್ಳುತ್ತಿದ್ದರು. ಬೆಂಗಳೂರಿನ ಮನೆಯಲ್ಲಿ ಸಣ್ಣ- ಸಣ್ಣ ಡಬ್ಬಿಗಳಲ್ಲಿ ಆಯಿಲ್‌ ತುಂಬಿ ಗ್ರಾಹಕರಿಗೆ ಮಾರಾಟಮಾಡುತ್ತಿದ್ದರು. ಈ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು. ಆರೋಪಿಗಳ ಪೈಕಿ ವಿದೂಸ್‌ ಇಂಗ್ಲೆಂಡ್‌ನ‌ ಲುಟನ್‌ ನಗರದ ಬೆಡ್‌ಪೋರ್ಡ್‌ ಶೈರ್‌ ಎಂಬಲ್ಲಿ ಎಂಎಸ್ಸಿ ಕಂಪ್ಯೂಟರ್‌ ಸೈನ್ಸ್‌ ಮತ್ತು ಇಂಟರ್‌ ನೆಟ್‌ ಅಪ್ಲಿಕೇಷನ್‌ ವಿಷಯದಲ್ಲಿ ಪದವೀಧರ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

ಶಾಲಾ-ಕಾಲೇಜುಗಳು ಸಹಕರಿಸಲು ಮನವಿ :  ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತು ಸೇವನೆ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಹೀಗಾಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ದಂಧೆಗೆ ಕಡಿವಾಣ ಹಾಕಲು ಸಹಕರಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಡ್ರಗ್ಸ್‌ ದಂಧೆಯನ್ನು ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಶಾಲಾ-ಕಾಲೇಜುಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಕೇರಳ ಮೂಲದ ಮೂವರನ್ನುಬಂಧಿಸಲಾಗಿದೆ. ನಗರದ ಕೆಲ ಶಿಕ್ಷಣ ಸಂಸ್ಥೆಗಳ ಬಳಿಯೇ ನೇರವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ನಮ್ಮ ಜತೆ ಕೈ ಜೋಡಿಸಬೇಕು. ಯುವಕರಿಗೆ ಬೇರೆ ದೇಶದಿಂದ ಬಂದು ಡ್ರಗ್ಸ್‌ ಕೊಡುತ್ತಾರಾ ಅಥವಾ ಸ್ಥಳೀಯರೇ ಮಾರಾಟ ಮಾಡುತ್ತಿದ್ದಾರಾ ಎಂಬ ಮಾಹಿತಿ ಗೊತ್ತಾದರೆ ಕೂಡಲೇ ನಮ್ಮ ಬಳಿ ಹಂಚಿಕೊಳ್ಳಿ ಎಂದು ಆಯುಕ್ತರು ಮನವಿ ಮಾಡಿದರು.

Advertisement

ಪ್ಯಾರಚೂಟ್‌ ಆಯಿಲ್‌ ಬಾಟಲಿನಲ್ಲಿ ಹ್ಯಾಶಿಶ್‌ : ವೈಜಾಗ್‌ನಿಂದ ಬೆಂಗಳೂರಿಗೆ ಹ್ಯಾಶಿಶ್‌ ಆಯಿಲ್‌ ತರುವಾಗ ಪೊಲೀಸರಿಗೆ ದಿಕ್ಕು ತಪ್ಪಿಸುವ ಉದ್ದೇಶದಿಂದ ಪ್ಯಾರಚೂಟ್‌ ಆಯಿಲ್‌ ಬಾಟಲಿಗಳನ್ನು ಖರೀದಿಸುತ್ತಿದ್ದರು. ಅವುಗಳಲ್ಲಿರುವ ಅಸಲಿ ಎಣ್ಣೆಯನ್ನು ಚೆಲ್ಲಿ ಹ್ಯಾಶಿಸ್‌ ಆಯಿಲ್‌ ತುಂಬಿ ಮಾರಾಟ ಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದರ

………………………………………………………………………………………………………………………………………………………

ಇರಾನಿ ಗ್ಯಾಂಗ್‌ನ ನಾಲ್ವರು ಅಂದರ್‌ :

ಬೆಂಗಳೂರು: ಮಹಿಳೆಯರು ಹಾಗೂ ವೃದ್ಧೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ನಾಲ್ವರು ಇರಾನಿ ತಂಡದ ಸದಸ್ಯರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಅಬು ಹೈದರ್‌(52), ಮೆಹದಿ ಹಸನ್‌(45), ಕಲಬುರಗಿ ನಿವಾಸಿ ಹಸನೇ (29) ಮತ್ತು ಆಂಧ್ರಪ್ರದೇಶಧ ಅನಂತಪುರ ಜಿಲ್ಲೆಯ ಸಾಧಿಕ್‌ (34) ಬಂಧಿತರು. ಆರೋಪಿಗಳಿಂದ 85 ಲಕ್ಷ ರೂ. ಮೌಲ್ಯದ 1.7 ಕೆ.ಜಿ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಅಬು ಹೈದರ್‌ ಪ್ರಮುಖ ಆರೋಪಿಯಾ ಗಿದ್ದು, ಕರ್ನಾಟಕ, ತಮಿಳುನಾಡು, ಜಾರ್ಖಂಡ್‌, ಆಂಧ್ರಪ್ರದೇಶ ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗಿದ್ದಾನೆ. ನಾಲ್ವರು ಈ ಹಿಂದೆ ಸರಗಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳ ಗಾಗಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದರು. ಅನಂತರ ಮತ್ತೆ ಕೃತ್ಯದಲ್ಲಿ ತೊಡಗಿದ್ದಾರೆ. ಕಳವು ಮಾಡುತ್ತಿದ್ದ ಚಿನ್ನಾಭರಣಗಳನ್ನು ಕಲಬುರಗಿ, ಮಧ್ಯ ಪ್ರದೇಶ, ಜಾರ್ಖಂಡ್‌ ರಾಜ್ಯಗಳಲ್ಲಿ ವಿಲೇವಾರಿ ಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದರು.

ಇತ್ತೀಚೆಗೆ ನಗರದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಸಿಸಿಬಿ ತನಿಖೆ ಕೈಗೊಂಡಾಗ ಇರಾನಿ ಗ್ಯಾಂಗ್‌ ಸದಸ್ಯರ ಕೈವಾಡದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ನಾಲ್ಕು ತಿಂಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಮಧ್ಯೆ ತಮಿಳುನಾಡಿನ ಚೆನ್ನೈ ಪೊಲೀಸರ ಬಲೆಗೆ ಬಿದ್ದಿದ್ದರು. ವಿಚಾರಣೆ ವೇಳೆ ಬೆಂಗಳೂರು ಸೇರಿ ಕರ್ನಾಟಕದಲ್ಲಿ ಸರಗಳ್ಳತನ ಮಾಡುತ್ತಿರುವುದು ಗೊತ್ತಾಗಿದೆ. ಹೀಗಾಗಿ ಆರೋಪಿಗಳನ್ನು ಬಾಡಿ ವಾರೆಂಟ್‌ ಮೂಲಕ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕೆ.ಆರ್‌.ಪುರ, ಹೆಣ್ಣೂರು, ರಾಮಮೂರ್ತಿನಗರ, ಬೆಳ್ಳಂದೂರು, ಎಚ್‌ಎಸ್‌ ಆರ್‌ ಲೇಔಟ್‌, ಸೋಲದೇವನಹಳ್ಳಿ ಸೇರಿ 15 ಠಾಣಾ ವ್ಯಾಪ್ತಿಯಲ್ಲಿ ನಡೆದ 30 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next