Advertisement

ಕಿರುತೆರೆ, ಕ್ರಿಕೆಟ್‌ಗೂ ನಂಟು: ನಟಿಯರು, ಕ್ರಿಕೆಟಿಗರಿಗೂ ಫೈಜಲ್‌ ಪಾರ್ಟಿ

06:53 AM Sep 14, 2020 | Hari Prasad |

ಬೆಂಗಳೂರು: ಸ್ಯಾಂಡಲ್‌ವುಡ್‌ ಮಾದಕ ವಸ್ತು ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಪ್ರಕರಣ ಕಿರುತೆರೆ ನಟ-ನಟಿಯರು ಹಾಗೂ ಮಾಜಿ ಮತ್ತು ಹಾಲಿ ಕ್ರಿಕೆಟ್‌ ಆಟಗಾರರ ಕೊರಳಿಗೆ ಸುತ್ತಿಕೊಳ್ಳುವ ಸಾಧ್ಯತೆಯಿದೆ.

Advertisement

ಮತ್ತೊಂದೆಡೆ ಆರೋಪಿ ಶೇಖ್‌ ಫೈಜಲ್‌ಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪ್ರಕರಣದ ತನಿಖಾ ಹಂತದಲ್ಲೇ ಕೆಲವು ಕಿರುತೆರೆ ನಟ, ನಟಿಯರು ದಂಧೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ಆದರೆ ಪೂರಕ ಸಾಕ್ಷ್ಯಗಳು ಸಿಕ್ಕಿರಲಿಲ್ಲ.

ಈಗ ಪ್ರಕರಣದ ಆರೋಪಿಗಳಾದ ವೈಭವ್‌ ಜೈನ್‌ ಮತ್ತು ತಲೆಮರೆಸಿಕೊಂಡಿರುವ ಶೇಖ್‌ ಫೈಜಲ್‌ ಹಾಗೂ ದಿಲ್ಲಿ ಮೂಲದ ವೀರೇನ್‌ ಖನ್ನಾ ಜತೆ ಕೆಲವು ಕಿರುತೆರೆ ನಟ-ನಟಿಯರು ಹಾಗೂ ಕ್ರಿಕೆಟ್‌ ಆಟಗಾರರು ತೆಗೆಸಿಕೊಂಡಿರುವ ಫೋಟೋಗಳು ವೈರಲ್‌ ಆಗಿವೆ.

ಕಿರುತೆರೆಯ ಇಬ್ಬರು ಹೆಸರಾಂತ ನಟರು ಮತ್ತು ಕೆಲವು ನಟಿಯರು ಈ ಫೋಟೋಗಳಲ್ಲಿದ್ದಾರೆ. ಅಲ್ಲದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರರ ಜತೆಗೂ ಆರೋಪಿಗಳು ಫೋಟೋ ತೆಗೆಸಿಕೊಂಡಿದ್ದಾರೆ. ಈ ಮೂಲಕ ಧಾರಾವಾಹಿ ಕಲಾವಿದರು ಮತ್ತು ರಾಜ್ಯದ ಕ್ರಿಕೆಟ್‌ ಆಟಗಾರರಿಗೂ ಕಂಟಕವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸಿಸಿಬಿ ಮೂಲಗಳ ಪ್ರಕಾರ ಶೇಖ್‌ ಫೈಜಲ್‌ ಆಯೋಜಿಸಿ ರುವ ಪಾರ್ಟಿಗಳಲ್ಲಿ ಈ ನಟರು ಪಾಲ್ಗೊಂಡಿದ್ದು, ಅಲ್ಲಿಯೇ ಫೋಟೋಗಳನ್ನು ತೆಗೆಸಿಕೊಳ್ಳಲಾಗಿದೆ.

Advertisement

ವೈರಲ್‌ ಆಗಿರುವ ಫೋಟೋಗಳಲ್ಲಿರುವ ನಟರು ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಪಾರ್ಟಿಯಲ್ಲಿ ಭಾಗಿಯಾಗಿದ್ದು, ಡ್ರಗ್ಸ್‌ ಸೇವಿಸಿರುವ ಸಾಧ್ಯತೆಯಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತದೆ.
ಆ ಇಬ್ಬರು ನಟರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜತೆಗೆ ಇತರ ನಟ-ನಟಿಯರು ಭಾಗಿಯಾಗಿದ್ದಲ್ಲದೆ, ದಂಧೆಗೆ ಪರೋಕ್ಷ ಸಹಕಾರ ನೀಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಸೂಕ್ತ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕ್ರಿಕೆಟ್‌ ಆಟಗಾರರು ಭಾಗಿ
ಶೇಖ್‌ ಫೈಜಲ್‌ ಪ್ರಾಯೋಜಕತ್ವದ ಪಾರ್ಟಿಗಳಲ್ಲಿ ಸ್ಯಾಂಡಲ್‌ವುಡ್‌, ಬಾಲಿವುಡ್‌ ತಾರೆಯರು ಮಾತ್ರವಲ್ಲದೆ ಕ್ರಿಕೆಟ್‌ ಆಟಗಾರರು ಪಾಲ್ಗೊಂಡಿದ್ದಾರೆ. ಫೈಜಲ್‌ 2019ರಿಂದ ಅಬುಧಾಬಿ ಟಿ-10 ಕ್ರಿಕೆಟ್‌ ಟೂರ್ನಿಯಲ್ಲಿ ಭಾಗಿಯಾಗಿದ್ದ ಕರ್ನಾಟಕದ ತಂಡವೊಂದಕ್ಕೆ ಪ್ರಾಯೋಜಕತ್ವ ನೀಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಈ ಟಿ-10 ಟೂರ್ನಿಯಲ್ಲಿ ಭಾಗಿಯಾಗಿದ್ದ ರಾಜ್ಯ ಮಾತ್ರವಲ್ಲದೆ ದೇಶದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರರಿಗೂ ಫೈಜಲ್‌ ಪಾರ್ಟಿ ನೀಡಿದ್ದಾನೆ.

ಶೀಘ್ರ ‘ದೊಡ್ಡವರ’ ಹೆಸರು ಬಹಿರಂಗ
ಡ್ರಗ್ಸ್‌ ಜಾಲ ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ವಾರ ಮಹತ್ವದ ತನಿಖೆ ನಡೆಯಲಿದ್ದು, ಈ ಜಾಲದಲ್ಲಿ ಭಾಗಿಯಾಗಿರುವವರ ಹೆಸರು ಬಹಿರಂಗವಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿರುವುದು ಕುತೂಹಲ ಮೂಡಿಸಿದೆ. ಈವರೆಗೆ ಒಂದು ಹಂತದ ತನಿಖೆಯಷ್ಟೇ ನಡೆದಿದೆ. ಮುಂದಿನ ವಾರದಿಂದ ಮಹತ್ವದ ತನಿಖೆ ನಡೆಯಲಿದೆ. ಯಾರೆಲ್ಲ ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನಾನು ಸದ್ಯ ಬಹಿರಂಗಪಡಿಸುವುದಿಲ್ಲ. ತನಿಖೆ ಪ್ರಗತಿಯಲ್ಲಿ ಇರುವುದರಿಂದ ಅದು ಬೇರೆ ರೀತಿಯ ಪರಿಣಾಮ ಬೀರುತ್ತದೆ. ಎಲ್ಲವೂ ನಿಮಗೇ ಗೊತ್ತಾಗಲಿದೆ ಎಂದು ಅವರು ನಗರದಲ್ಲಿ ರವಿವಾರ ಸುದ್ದಿಗಾರರಿಗೆ ತಿಳಿಸಿದರು.

ಡ್ರಗ್ಸ್‌ ಜಾಲ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಿಸಿಬಿ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ. ಎಷ್ಟೇ ಪ್ರಭಾವಿಗಳಿರಲಿ, ಮುಲಾಜಿಲ್ಲದೆ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ ಎಂದರು. ತಮ್ಮ ಜಿಲ್ಲಾ ವ್ಯಾಪ್ತಿಯ ಚೆಕ್‌ಪೋಸ್ಟ್‌ ಗಳನ್ನು ಬಿಗಿಪಡಿಸಿಕೊಳ್ಳುವಂತೆ ಈಗಾಗಲೇ ಗಡಿ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಗಡಿ ಠಾಣೆಗಳಲ್ಲಿ ಸಿಬಂದಿ ಹೆಚ್ಚಳ ಸೇರಿದಂತೆ ಇತರ ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next