ಬೆಂಗಳೂರು: ನೆರೆ ರಾಜ್ಯದಿಂದ ಮಾದಕ ವಸ್ತು ಅಫೀಮು ತಂದು ನಗರದಲ್ಲಿ ವಿದ್ಯಾರ್ಥಿಗಳು, ಟೆಕ್ಕಿಗಳಿಗೆ ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಆರೋಪಿಯನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುದ್ದಿನಪಾಳ್ಯ ನಿವಾಸಿ ಚಲಾರಂ(45) ಬಂಧಿತ. ಆರೋಪಿಯಿಂದ 700 ಗ್ರಾಂ ಅಫೀಮು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಮಲ್ಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲೇಶ್ವರದ 18ನೇ ಕ್ರಾಸ್‌ನ ಆಟದ ಮೈದಾನದ ಹತ್ತಿರ ಬ್ಯಾಗ್‌ವೊಂದರಲ್ಲಿ ಅಫೀಮು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಬ್ಯಾಗ್‌ನಲ್ಲಿದ್ದ 200 ಗ್ರಾಂ ಅಫೀಮು ಹಾಗೂ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಆತನ ಮನೆಯಲ್ಲಿದ್ದ 500 ಅಫೀಮು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ: ಉಪ್ಪಿನಂಗಡಿ: ಹಿಜಾಬ್ ಧರಿಸಿ ಕಾಲೇಜಿಗೆ ಬಂದ 6 ವಿದ್ಯಾರ್ಥಿನಿಯರ ಅಮಾನತು
ರಾಜಸ್ಥಾನ ಮೂಲದ ಆರೋಪಿ, ನಗರಕ್ಕೆ ಉದ್ಯೋಗ ಅರಸಿ ಬಂದಿದ್ದ. ಆದರೆ, ಹಣ ಗಳಿಸುವ ದುರುದ್ದೇಶದಿಂದ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದಾನೆ. ಆಗಾಗ್ಗೆ ರಾಜಸ್ಥಾನಕ್ಕೆ ಹೋದಾಗ ಅಫೀಮು ಖರೀದಿಸಿ ರೈಲಿನ ಮೂಲಕ ತಂದು ಇಲ್ಲಿ ವ್ಯಸನಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದ. ಸದ್ಯ ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.