Advertisement

ಜಾಗತಿಕ ಸಿನಿ ಲೋಕದಲ್ಲಿ ಡ್ರಗ್ಸ್ ದಂಧೆ; ಮನ್ರೋ ಸಾವಿಗೆ ಡ್ರಗ್ಸ್ ಕಾರಣ

09:35 AM Sep 02, 2020 | Nagendra Trasi |

ಸ್ಯಾಂಡಲ್‌ವುಡ್‌ನ‌ಲ್ಲಿ ನಡೆಯುತ್ತಿದೆ ಎನ್ನಲಾದ ಡ್ರಗ್ಸ್ ದಂಧೆಯ ಸುದ್ದಿ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಮಾದಕ ದ್ರವ್ಯಗಳ ವ್ಯಸನಕ್ಕೆ ಚಂದನವ ನದ ಕೆಲ ತಾರೆಯರು, ಕಿರುತೆರೆ ನಟರು, ಗಾಯಕರು ಸಿಲುಕಿದ್ದಾರಾ? ಈ ಜಾಲದ ವ್ಯಾಪ್ತಿ ಎಷ್ಟು ದೊಡ್ಡದು ಎನ್ನುವ ಕುರಿತು ಚರ್ಚೆಗಳು ಆರಂಭವಾಗಿವೆ. ಈ ಹೊತ್ತಲ್ಲೇ, ಅತ್ತ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿಗೂ ಡ್ರಗ್ಸ್‌ ಮಾಫಿಯಾ ನಂಟಿದೆಯೇ ಎನ್ನುವ ಕುರಿತೂ ತನಿಖೆಗಳು ಆರಂಭವಾಗಿವೆ. ಹಾಗೆ ನೋಡಿದರೆ ಮಾದಕ ದ್ರವ್ಯ ವ್ಯಸನವೆನ್ನುವುದು ಕೇವಲ ಒಂದು ಚಿತ್ರರಂಗಕ್ಕಷ್ಟೇ ಸೀಮಿತವಾಗಿಲ್ಲ.

Advertisement

ತೆಲುಗು, ಮಲಯಾಳಂ, ಬೆಂಗಾಲಿ, ಮರಾಠಿ ಚಿತ್ರರಂಗದಲ್ಲೂ ಈ ವಿಷಯ ಸದ್ದು ಮಾಡಿದೆ. ಮುಖ್ಯವಾಗಿ ಬಾಲಿವುಡ್‌ನ‌ಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ದೂರದ ಹಾಲಿವುಡ್‌ನ‌ಲ್ಲಂತೂ ಕಳೆದ ಏಳು ದಶಕಗಳಲ್ಲಿ ನೂರಾರು ತಾರೆಯರು ಡ್ರಗ್ಸ್‌ಗಳಿಂದ ಜೀವ ಕಳೆದುಕೊಂಡಿದ್ದಾರೆ!

ಒಂದು ಕಾಲದಲ್ಲಿ ಭೂಗತ ಲೋಕದೊಂದಿಗೆ ಬೆಸೆದುಹೋಗಿದ್ದ ಬಾಲಿವುಡ್‌ಗೆ ಈಗಲೂ ಡ್ರಗ್ಸ್‌ ಮಾಫಿಯಾದೊಂದಿಗೆ ಅವಿನಾಭಾವ ನಂಟಿದೆ ಎನ್ನಲಾಗುತ್ತದೆ. ಒಂದು ಸಮಯದಲ್ಲಂತೂ ಮಾದಕ ವ್ಯಸನಿ ತಾರೆಯರ ಸಂಖ್ಯೆಯೂ ದಂಡಿಯಾಗಿಯೇ ಇತ್ತು. ಮಾದಕ ವ್ಯಸನ ಎಂದಾಕ್ಷಣ ಮೊದಲು ನೆನಪಾಗುವ
ಹೆಸರೇ ಸಂಜಯ್‌ ದತ್‌ ಅವರದ್ದು. ಶಾಲಾದಿನಗಳಲ್ಲೇ ಮಾದಕ ವ್ಯಸನಕ್ಕೆ, ಮದ್ಯ, ಸಿಗರೇಟ್‌ ಚಟಕ್ಕೆ ದಾಸರಾದ ಸಂಜಯ್‌ ದತ್‌, ಈ ಕಾರಣದಿಂದಲೇ ತಮ್ಮ ವೃತ್ತಿ ಜೀವನವನ್ನು ಹಾಳುಮಾಡಿಕೊಳ್ಳುವ ಹಂತ ತಲುಪಿದವರು. ಕೊನೆಗೆ ವರ್ಷಗಟ್ಟಲೇ ರಿಹ್ಯಾಬಿಲಿಟೇಷನ್‌ ಸೆಂಟರ್‌ಗಳಿಗೆ ಅಲೆದಾಡಿ ಚಿಕಿತ್ಸೆ ಪಡೆದ ಮೇಲೆ
ದಾಸ್ಯದಿಂದ ಹೊರ ಬರುವಂತಾಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಡ್ರಗ್ಸ್‌ ದಾಸ್ಯದಿಂದ ಮುಕ್ತವಾಗಲು ಸಂಜಯ್‌ ದತ್‌ಗೆ ಬರೋಬ್ಬರಿ 10
ವರ್ಷಗಳು ಹಿಡಿದವಂತೆ.

“ಮುಂಬೈ ಬ್ಲ್ಯಾಕ್‌’ ಬಾಲಿವುಡ್‌ಗೆ ಕಾಲಿಟ್ಟಾಗ:
ಬಾಲಿವುಡ್‌ನ‌ಲ್ಲಿ ಡ್ರಗ್ಸ್‌ ಜಾಲ ವಿಸ್ತರಿಸಲಾರಂಭಿಸಿದ್ದು 70 ರ ದಶಕದಲ್ಲಿ ಎನ್ನುತ್ತದೆ ನಾರ್ಕಾಟಿಕ್ಸ್‌ ಕಂಟ್ರೋಲ್‌ ಬ್ಯೂರೋ. ಆ ಸಮಯದಲ್ಲಿ ಮುಂಬೈನಲ್ಲಿ ಭೂಗತ  ಪಾತಕಿ ಗಳ ಹಾವಳಿ ಆರಂಭವಾಗತೊಡಗಿತ್ತು. ಬಾಲಿವುಡ್‌ ಮಂದಿಯ ಬಳಿ ಹಣವಿತ್ತು, ಮಾಫಿಯಾಗಳ ಬಳಿ ಡ್ರಗ್ಸ್‌ ಇತ್ತು. ಅಲ್ಲಿಂದ ಆರಂಭವಾಯಿತು ಈ ಅಪವಿತ್ರ ನಂಟು. ಮಾಫಿಯಾಗಳಾದ ಕರೀಮಲಾಲ ಮತ್ತು ಝುಮಾಖಾನ್‌ ಚರಸ್ವಾಲ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಡ್ರಗ್ಸ್‌ ಮಾಫಿ ಯಾದ ಜತೆಗೂಡಿ ಮೆರುವಾನಾ/ಗಾಂಜಾವನ್ನು ಇತರೆ ರಾಸಾಯನಿಕಗಳೊಂದಿಗೆ ಬೆರೆಸಿ “ಮುಂಬೈ ಬ್ಲ್ಯಾಕ್‌ ‘ ಎನ್ನುವ ಹೆಸರಿನಲ್ಲಿ ಮಾರಾಟ ಮಾಡಲಾರಂಭಿಸಿದರು.

Advertisement

ಆರಂಭದಲ್ಲಿ ಮುಂಬೈನ ಗಲ್ಲಿಗಳಲ್ಲಿ ರಹಸ್ಯವಾಗಿ ಮಾರಾಟವಾಗಲಾರಂಭಿಸಿದ ಮುಂಬೈ ಬ್ಲ್ಯಾಕ್‌ ಕೆಲವೇ ಸಮಯದಲ್ಲಿ ಬಾಲಿವುಡ್‌ನ‌ ಪಾರ್ಟಿಗಳಲ್ಲಿ ಪ್ರಮುಖ
ವಸ್ತುವಾಗಿಬಿಟ್ಟಿತು. ರೇವ್‌ ಪಾರ್ಟಿಗಳು, ಪಬ್‌ಗಳು ಮುಂಬೈ ಬ್ಲ್ಯಾಕ್‌ ಇಲ್ಲದೇ ಅಪೂರ್ಣ ಎನ್ನುವ ಹಂತ ತಲುಪಿತ್ತು.

ಪಂಜಾಬಿ ರ್ಯಾಪ್‌ಗ್ಳಲ್ಲಿ ಡ್ರಗ್ಸ್‌, ಗಾಡಿ, ಪೈಸಾ!:
ನೀವು ಇತ್ತೀಚೆಗೆ ಕೆಲ ವರ್ಷಗಳಿಂದ ಬರುತ್ತಿರುವ ಪಂಜಾಬಿ ಹಾಡುಗಳನ್ನು (ರ್ಯಾಪ್‌) ಕೇಳಿನೋಡಿ. ಬಹುತೇಕ ಹಾಡುಗಳಲ್ಲಿ ಡ್ರಗ್ಸ್‌, ಮದ್ಯಪಾನ, ಐಷಾರಾಮಿ ಕಾರುಗಳು, ಸೆಕ್ಸ್‌ ವಿಚಾರವನ್ನೇ ವೈಭವೀಕರಿಸಲಾಗಿರುತ್ತದೆ. ಇದೆಲ್ಲ ಸಮಾಜದಲ್ಲಿನ ವಸ್ತುಸ್ಥಿತಿಯ ಪ್ರತಿಫ‌ಲವನಷ್ಟೇ ಅಲ್ಲದೇ ಬೇರೇನೂ
ಅಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹಿರಿಯ ಗಾಯಕ ದಲೇರ್‌ ಮೆಹಂದಿ.

ದಾವೂದ್‌ ನಂಟು
ಬಾಲಿವುಡ್‌ ಅಷ್ಟೇ ಅಲ್ಲ, ದಿನಗಳೆದಂತೆ, ವಿವಿಧ ಚಿತ್ರರಂಗಗಳು, ಸಿರಿವಂತರ ವಲಯದಲ್ಲಿ ಡ್ರಗ್ಸ್‌ ಜಾಲ ವಿಸ್ತರಿಸುತ್ತಲೇ ಹೋಯಿತು. ಈ ದಂಧೆಯನ್ನು ಭಾರ
ತೀಯ ಸಿನೆಮಾ ರಂಗದಲ್ಲಿ ಹೆಚ್ಚು ಹರಡಿದವನೆಂದರೆ ಇಕ್ಬಾಲ್‌ ಮಿರ್ಚಿ. ಇನ್ನು ಯಾವಾಗ ಈ ದಂಧೆಯಲ್ಲಿ ಕಾಂಚಾಣ ಕುಣಿದಾಡುತ್ತದೆ ಎಂದು ತಿಳಿಯಿತೋ,
ಆಗಷ್ಟೇ ಮುಂಬೈ ಅಂಡರ್‌ ವರ್ಲ್ಡ್ ನಲ್ಲಿ ನೆಲೆ ಹುಡುಕಿಕೊಳ್ಳುತ್ತಿದ್ದ ಶೇಖ್‌ ದಾವೂದ್‌ ಇಬ್ರಾಹಿಮ್‌ ಕಸ್ಕರ್‌, ಅಲಿಯಾಸ್‌ ದಾವೂದ್‌ ಇಬ್ರಾಹಿಂ ಈ ವ್ಯವಹಾರದಲ್ಲಿ
ಧುಮುಕಿಬಿಟ್ಟ. ದಾವೂದ್‌ ಆ ಸಮಯದಲ್ಲಿ ಬಾಲಿವುಡ್‌ನ‌ ಪಾರ್ಟಿ ಗಳಲ್ಲಿ ಕಾಣಿಸಿ ಕೊಳ್ಳುತ್ತಲೇ ಇದ್ದ. ಆ ಪಾರ್ಟಿಗಳಿಗೆಲ್ಲ ಆತನಿಂದ ಭರಪೂರ ಪ್ರಮಾಣದಲ್ಲಿ
ಮಾದಕ ದ್ರವ್ಯ ಸರಬರಾಜಾಗ ತೊಡಗಿತು. ದಾವೂದ್‌ ಅಷ್ಟೇ ಅಲ್ಲದೇ ಛೋಟಾ ಶಕೀಲ್‌, ಅಬು ಸಲೇಮ್, ಛೋಟಾರಾಜನ್‌, ಎಜಾಝ್ ಲಕಡಾವಾಲಾ, ಅರುಣ ಗೌಳಿ…ಮುಂತಾದವರೆಲ್ಲ ಈ ದಂಧೆಯಲ್ಲಿ ಮುಳುಗಿದ್ದವರೇ!

ಈಗಲೂ ದಾವೂದ್‌ ಪಾಕಿಸ್ತಾನದ ಕರಾಚಿಯಲ್ಲಿ ಕುಳಿತುಕೊಂಡೇ ಡ್ರಗ್ಸ್‌ ವ್ಯವಹಾರ ನಡೆಸುತ್ತಿದ್ದಾನೆ. ಡಿ ಕಂಪನಿಯ ಬಹುತೇಕ ಆದಾಯದ ಮೂಲವೇ
ಮಾದಕ ದ್ರವ್ಯ ಎನ್ನುತ್ತಾರೆ ಪರಿಣತರು. ದಾವೂದ್‌ ಪಾಕಿಸ್ತಾನದ ಜತೆಗೂಡಿ ದುಬೈ, ಲಂಡನ್‌, ಸಿಂಗಾಪೂರ, ಶ್ರೀಲಂಕಾ, ನೇಪಾಳ ಹಾಗೂ ಆಫ್ರಿಕನ್‌ ರಾಷ್ಟ್ರಗಳಲ್ಲಿ ಡ್ರಗ್ಸ್‌ ದಂಧೆ ನಡೆಸುತ್ತಿದ್ದಾನೆ. ಆಫ್ಘಾನಿಸ್ತಾನ ಹತ್ತಿರವಿರು ವುದರಿಂದ ಕಚ್ಚಾ ವಸ್ತುಗಳ ಕೊರತೆ ಅವನಿಗಿಲ್ಲ!

ಹಾಲಿವುಡ್‌ನ‌ ಮಾತೇ ಬೇಡ!
ಹಾಲಿವುಡ್‌ನ‌ಲ್ಲಿ ಮಾದಕ ದ್ರವ್ಯ ವ್ಯಸನದಿಂದ ಹೈರಾಣಾದವರ ಪಟ್ಟಿ ಮಾಡಿದರೆ ಪುಟಗಟ್ಟಲೇ ಆಗುತ್ತದೆ. ಡ್ರಗ್‌ ಓವರ್‌ಡೋಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆಯೂ ಅಧಿಕವಿದೆ. ವಿಶ್ವವಿಖ್ಯಾತ ಮಾರ್ಲಿನ್‌ ಮನ್ರೊ, ಸಂಗೀತಗಾರರಾದ ಜಿಮ್ಮಿ ಹೆಂಡ್ರಿಕ್ಸ್‌, ಜಿಮ್‌ ಮಾರಿಸನ್‌ನಿಂದ ಹಿಡಿದು, ಪಾಪ್‌ ಐಕಾನ್‌ ಮೈಕೆಲ್‌
ಜಾಕ್ಸನ್‌, ಎಮಿ ವೈನ್‌ಹೌಸ್‌, ವಿಟ್ನಿ ಹೂಸ್ಟನ್‌ವರೆಗೂ 1950ರ ದಶಕದಿಂದ ನೂರಾರು ಸ್ಟಾರ್‌ಗಳು ಡ್ರಗ್ಸ್‌ಗೆ ಬಲಿಯಾಗಿದ್ದಾರೆ. ಹಾಲಿವುಡ್‌ಗೆ ಅತಿಯಾದ ಡ್ರಗ್ಸ್‌ ಚಟ ಹಚ್ಚಿಸುವಲ್ಲಿ ಕೊಲಂಬಿಯಾದ ಅಂದಿನ ಕುಖ್ಯಾತ ಡ್ರಗ್ಸ್‌ ದೊರೆ ಪ್ಯಾಬ್ಲೋ ಎಸ್ಕೋಬಾರ್‌ ಕಾರಣ ಎನ್ನಲಾಗುತ್ತದೆ. ಕೊಲಂಬಿಯಾದ ಡ್ರಗ್‌ ಕಾರ್ಟೆಲ್‌ಗ‌ಳ ಹಾವಳಿ ತಗ್ಗುತ್ತಿದ್ದಂತೆಯೇ, ಮೆಕ್ಸಿಕೋದಲ್ಲಿ ಡ್ರಗ್‌ ಕಾರ್ಟೆಲ್‌ಗ‌ಳ ಹಾವಳಿ ಅಧಿಕವಾಯಿತು. ಈಗ ಮೆಕ್ಸಿಕೋದಿಂದ ಕಳ್ಳಮಾರ್ಗದ ಮೂಲಕ ಅಮೆರಿಕ ಸೇರುತ್ತಿರುವ ಮಾದಕ ದ್ರವ್ಯಗಳು, ಸುಲಭವಾಗಿ ಹಾಲಿವುಡ್‌ಗೂ ಟಿಕೆಟ್‌ ಪಡೆಯುತ್ತಿವೆ. ಓಪ್ರಾ ವಿನ್‌ಫ್ರೆ, ರಾಬರ್ಟ್‌ ಡೌನಿ ಜೂನಿಯರ್‌, ಸ್ಟೀಫ‌ನ್‌ ಕಿಂಗ್‌, ಮ್ಯಾಥ್ಯೂ ಪೆರ್ರಿ, ಏಂಜೆಲಿನಾ ಜೋಲಿ ಸೇರಿದಂತೆ ಅನೇಕ ತಾರೆಯರು ಒಂದಲ್ಲ ಒಂದು ಸಮಯದಲ್ಲಿ ಕೋಕೇನ್‌ನ ದಾಸರಾಗಿದ್ದವರೇ!

ಎಲ್‌ಟಿಟಿಇಯದ್ದೂ ಇದೇ ಆಗಿತ್ತು ದಂಧೆ
ಎಲ್‌ಟಿಟಿಇ ಕೂಡ ಈ ಮಾದಕ ದ್ರವ್ಯಗಳ ವ್ಯವಹಾರದಲ್ಲಿ ತೊಡಗಿತ್ತು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಪಂಜಾಬ್‌  ನಿಂದ ಅಕ್ರಮವಾಗಿ ಸಾಗಣೆಯಾಗುತ್ತಿದ್ದ ಮಾದಕ ದ್ರವ್ಯಗಳು ಟುಟಿಕಾರಿನ್‌, ರಾಮೇಶ್ವರಂ ಮತ್ತು ಕೊಚ್ಚಿ ಮೂಲಕ ಅಂದು ಎಲ್‌ಟಿಟಿಇ ಹಿಡಿತದಲ್ಲಿದ್ದ ವೆಲೆಟ್ಟಿತೊರೈಗೆ ಸಾಗಣೆಯಾಗುತ್ತಿತ್ತು.

ನಾರ್ಕಾಟಿಕ್‌ ಕಂಟ್ರೋಲ್‌ ಬ್ಯೂರೋದ ಪ್ರಕಾರ ಎಲ್‌ಟಿಟಿಇ ಅತಿ ಬಲಿಷ್ಠವಾಗಿದ್ದ ವೇಳೆಯಲ್ಲಿ ಅದು ಭಾರತದ ಡ್ರಗ್‌ ಮಾಫಿಯಾದೊಂದಿಗೆ ಜೋರಾಗಿಯೇ ವಹಿವಾಟು ನಡೆಸುತ್ತಿತ್ತಂತೆ. ದುರಂತವೆಂದರೆ, ಅಂದು ಎಲ್‌ಟಿಟಿಇಗೆ ಶ್ರೀಲಂಕಾದ ಮಾದಕ ದ್ರವ್ಯ ತಡೆ ಘಟಕದ ಕೆಲ ಅಧಿಕಾರಿಗಳೇ ಸಹಕರಿಸುತ್ತಿದ್ದರು! ಮುಂಬೈ ಭೂಗತಲೋಕದಿಂದ ಪ್ರೇರಣೆ ಪಡೆದ ಎಲ್‌ಟಿಟಿಇ ಶ್ರೀಲಂಕಾದಲ್ಲಿನ ಸಿನೆಮಾ ಇಂಡಸ್ಟ್ರಿಗೆ, ಹೈಪ್ರೊಫೈಲ್ ಮಂದಿಗೆ ಮಾದಕ ದ್ರವ್ಯ ರವಾನಿಸುತ್ತಿತ್ತಂತೆ!

ಏಷ್ಯಾದಲ್ಲಿ ಆಫ್ಘಾನಿಸ್ತಾನವೇ ಡ್ರಗ್ಸ್‌ ಕೇಂದ್ರ
ಒಂದೊಮ್ಮೆ ಉಗ್ರಗಾಮಿಗಳ ಸ್ವರ್ಗವಾಗಿದ್ದ ಅಫ್ಘಾನಿಸ್ಥಾನ ಚಿಕ್ಕ ಪ್ರಮಾಣದಲ್ಲಿ ಅಫೀಮ್‌ ಉತ್ಪಾದಿಸುತಿದ್ದ ರಾಷ್ಟದಿಂದ ಪ್ರಪಂಚದ ಅತಿಕುಖ್ಯಾತ ಕಾರ್ಟೆಲ್‌ ಆಗಿ ಬದಲಾಗಿದ್ದರ ಹಿಂದೆ ತಾಲಿಬಾನಿಗಳು, ಪಾಕಿಸ್ತಾನಿ ಸೇನೆ, ಅಮೆರಿಕನ್‌ ಸೇನೆಯ ಕೈವಾಡವೂ ಇದೆ. ಪಾಕಿಸ್ತಾನದ ಸೇನೆಯ ಕೆಲವು ಹಿರಿಯ ಸದಸ್ಯರಂತೂ ಈ ವ್ಯವಹಾರದಿಂದ ಕೋಟ್ಯಧಿಪತಿಗಳಾಗಿದ್ದಾರೆ.

ಉಡ್ತಾ ಪಂಜಾಬ್‌
700 ಕೋಟಿ ವಾರ್ಷಿಕ ಆದಾಯದ ಸಂಗೀತದ ಇಂಡಸ್ಟ್ರಿ ಹೊಂದಿರುವ ಪಂಜಾಬ್‌, ಮಾದಕ ದ್ರವ್ಯಕ್ಕೆ ಕುಖ್ಯಾತಿ ಪಡೆದಿದೆ. ಕೆಲ ವರ್ಷಗಳಿಂದಂತೂ ಪಂಜಾಬ್‌ನ ಯುವಕರು ಯಾವ ಮಟ್ಟಕ್ಕೆ ಡ್ರಗ್ಸ್‌ ದಾಸರಾಗುತ್ತಿದ್ದಾರೆ ಎಂದರೆ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕುವ ವಿಷಯವೇ ಮುನ್ನೆಲೆಯಲ್ಲಿತ್ತು.

ರ್ಯಾಪ್‌ ಹಾಡುಗಳಿಗೆ ಜಗದ್ವಿಖ್ಯಾತವಾಗಿರುವ ಪಂಜಾಬಿ ಮ್ಯೂಸಿಕ್‌ ಇಂಡಸ್ಟ್ರಿ ರಾತ್ರೋರಾತ್ರಿ ಹಲವಾರು ಸ್ಟಾರ್‌ಗಳನ್ನು ಹುಟ್ಟುಹಾಕುತ್ತಿದೆ. ಕೋಟ್ಯಧಿಪತಿ ಸಂಗೀತಗಾರರ ದಂಡೇ ಸೃಷ್ಟಿಯಾಗಿಬಿಟ್ಟಿದೆ. “ಸ್ಟಾರ್‌ ಆಗುವುದೆಂದರೆ ಸುಲಭವಲ್ಲ. ಸ್ಟಾರ್‌ಗಿರಿ ಹಲವು ಅಪಾಯಗಳನ್ನೂ ಜತೆಗೆ ಹೊತ್ತುತರುತ್ತದೆ. ಒಬ್ಬ ವ್ಯಕ್ತಿ ಹಿಟ್‌ ಆದ ಅಂದರೆ, ಕೂಡಲೇ ಆತನ ವಲಯ ಬದಲಾಗಿಬಿಡುತ್ತದೆ. ನಿತ್ಯ ಪಾರ್ಟಿಗಳಿಗೆ ಆಹ್ವಾನಿಸುವವರು ಹೆಚ್ಚಿಬಿಡುತ್ತಾರೆ. ಇಂಥವರಿಗಾಗಿಯೇ ಕಾದು ಕುಳಿತಿರುವ ಡ್ರಗ್ಸ್‌ ಮಾಫಿಯಾಗಳು ಇವರ ಸ್ನೇಹ ಸಂಪಾದಿಸಿ ಮಾದಕ ದ್ರವ್ಯದ ದಾಸ್ಯಕ್ಕೆ ಕೆಡವಿಬಿಡುತ್ತವೆ’ ಎನ್ನುತ್ತಾರೆ ಪಂಜಾಬ್‌ನ ಹಿರಿಯ ಪೊಲೀಸ್‌ ಅಧಿಕಾರಿ ಡಾ. ಬಲಬೀರ್‌ ಸಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next