ಬೆಂಗಳೂರು: ಕೆನಡಾದಿಂದ ಗಾಂಜಾ ಬೆರೆಸಿದ ಚಾಕೊಲೇಟ್, ಮಾದಕ ವಸ್ತು ಒಳಗೊಂಡ ಸಿಗರೇಟ್‌ಗಳನ್ನು ಅಕ್ರಮವಾಗಿ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಜಾಲವನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಯಲಿಗೆ ಎಳೆದಿದೆ.
ಈ ಜಾಲದಲ್ಲಿ ಸಕ್ರಿಯಗೊಂಡು ಕಾಲೇಜು ವಿದ್ಯಾರ್ಥಿಗಳು, ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೊಲ್ಕತ್ತಾ ಮೂಲದ ಅತೀಫ್ಸ ಲೀಂ (26), ರೋಹಿತ್ ದಾಸ್ (26) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಸುಮಾರು ಒಂದುಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿಗಳಿಗೆ ಕೊಲ್ಕತ್ತಾ, ಮುಂಬೈ ಸೇರಿ ಇತರೆ ನಗರಗಳ ಮಾದಕ ವಸ್ತು ಮಾರಾಟ ಜಾಲದ ಸಂಪರ್ಕವಿದ್ದು, ಅಲ್ಲೂ ಮಾದಕವಸ್ತು ಸರಬರಾಜು ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಜಾಲದ ಕುರಿತುಕೂಲಂಕಶ ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಕೆನಡಾದಲ್ಲಿ ಕಿಂಗ್‌ಪಿನ್: ಹೈಡ್ರೋ ಗಾಂಜಾ, ಆಶಿಷ್ ಆಯಿಲ್ ಇರುವಂತಹ ಇ-ಸಿಗರೇಟ್ ಗಳನ್ನು ಕೆನಡಾ ಕಂಪನಿಯೊಂದು ತಯಾರಿಸುತ್ತದೆ. ಈ ದಂಧೆ ನಡೆಸುವ ವ್ಯಕ್ತಿ ಅತೀಫ್ ಸಲೀಂಗೆ ಡಾರ್ಕ್‌ವೆಬ್ ಆನ್‌ಲೈನ್ ತಾಣದಲ್ಲಿ ಪರಿಚಿತನಾಗಿದ್ದ. ಬಳಿಕ ಅತೀಫ್, ವಿಕ್ಕರ್ ಮೀ ಆ್ಯಪ್ ಮೂಲಕ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ. ಕೆನಡಾದಿಂದ ದಂಧೆಕೋರ, ಮಕ್ಕಳ ಹಾಲಿನ ಪೌಡರ್ ಡಬ್ಬಗಳಲ್ಲಿ ಹೈಡ್ರೋಗಾಂಜಾ, ಸೇರಿ ಇನ್ನಿತರೆ ಮಾದಕ ವಸ್ತುಗಳನ್ನು ಇಟ್ಟುಕೊಂಡು ವಿಮಾನದಲ್ಲಿ ಕಳುಹಿಸಿಕೊಡುತ್ತಿದ್ದ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಕ್ಕಳ ಹಾಲಿನ ಪೌಡರ್ ಡಬ್ಬಗಳನ್ನು ಶೋಧ ಮಾಡಿದರೂ ಗೊತ್ತಾಗದ ಹಾಗೆ ಡಬ್ಬದ ಒಳಗಡೆ ವಸ್ತುಗಳನ್ನು ತುಂಬಿರುತ್ತಿದ್ದ. ಹೀಗಾಗಿ ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿ ಮಾದಕ ವಸ್ತು ಅತೀಫ್ಗೆ ತಲುಪುತ್ತಿತ್ತು.
ಕೊರಿಯರ್ ಮೂಲಕ ಮನೆ ಬಾಗಿಲಿಗೆ: ಕೆನಡಾದಿಂದ ಬಂದ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ಕೊಲ್ಕತ್ತಾ, ಮುಂಬೈ ಸೇರಿ ಇತರೆ ನಗರಗಳ ದಂಧೆಕೋರರಿಗೆ ಇ-ಕಾಮರ್ಸ್ ಸಂಸ್ಥೆಯೊಂದರ ಕವರ್‌ನಲ್ಲಿರಿಸಿ ಕೊರಿಯರ್ ಮೂಲಕ ತಲುಪಿಸುತ್ತಿದ್ದ. ಬೆಂಗಳೂರಿನಲ್ಲಿ ಮಾರಾಟ ಮಾಡಲು ಆರಂಭಿಸಿದ ಅತೀಫ್, ಪರಿಚಿತ ಗ್ರಾಹಕರಿಗೆ ಕೊರಿಯರ್ ಮೂಲಕವೇ ಚಾಕೊಲೇಟ್ ಗಾಂಜಾ, ಇತರೆ ಮಾದಕ ವಸ್ತು ಕಳುಹಿಸಿ ಹಣ ಗಳಿಸುತ್ತಿದ್ದ. ಆರೋಪಿ ಅತೀಫ್, ಆರಂಭದಲ್ಲಿ ಕೆಲವರಿಗೆ ಚಾಕೊಲೇಟ್, ಜೆಲ್ಲಿಗಳನ್ನು ನೀಡಿ ಅಭ್ಯಾಸ ಮಾಡಿಸುತ್ತಿದ್ದ. ಅದನ್ನು ಸೇವಿಸಿ ಅಭ್ಯಾಸವಾದ ಬಳಿಕ ಅವರೇ ಗ್ರಾಹಕರಾಗಿ ಪರಿವರ್ತನೆಯಾಗುತ್ತಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ಅತೀಫ್ನಿಂದ ಒಂದು ಸ್ಕೋಡಾ ಕಾರು, ಒಂದು ಲಕ್ಷ ರೂ. ನಗದು, ಬೈಕ್ ಸೇರಿ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಿಟ್‌ಕಾಯಿನ್ ಮೂಲಕ ವ್ಯವಹಾರ : ಬಿಸಿಎ ಪದವೀಧರ ಅತೀಫ್ ಸಲೀಂ, ಸುದ್ದುಗುಂಟೆ ಪಾಳ್ಯದ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದಾನೆ. ಐಶಾರಾಮಿ ಜೀವನ ಶೈಲಿ ಆತನದ್ದಾಗಿದ್ದು, ಆತನ ಕುಟುಂಬ ಕೊಲ್ಕತ್ತಾದಲ್ಲಿ ನೆಲೆಸಿದೆ. ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅತೀಫ್ ಸ್ವತಃ ಮಾದಕ ವ್ಯಸನಿಯಾಗಿದ್ದ, ಬಳಿಕ ತಾನೇ ಮಾರಾಟಮಾಡುವ ದಂಧೆ ಶುರು ಮಾಡಿದ್ದ. ಕೆನಡಾ ಮೂಲದ ದಂಧೆಕೋರನ ಜತೆ ಮಾದಕ ವಸ್ತು ಖರೀದಿಗೆ “ಬಿಟ್ ಕಾಯಿನ್’ ವ್ಯವಹಾರದ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದ. ಅತೀಫ್ ಹೆಸರಿನಲ್ಲಿ ದೇಶದ ವಿವಿಧ ನಗರಗಳಿಗೆ ಕೊರಿಯರ್‌ಗಳು ರವಾನೆಯಾಗುತ್ತಿದ್ದವು. ಆತನ ಹೆಸರಿಗೂ ಬರುತ್ತಿದ್ದವು. ಆದರೆ ನಿಖರ ವಿಳಾಸ ಮಾತ್ರ ದಾಖಲಾಗುತ್ತಿರಲಿಲ್ಲ. ಈ ಬಗ್ಗೆ ದೊರೆತ ಮಾಹಿತಿ ಆಧರಿಸಿ ಆತನ ಹಿನ್ನೆಲೆ ಕೆದಕಲು ಆರಂಭಿಸಿದಾಗ ವಿದೇಶದಿಂದಲೂ ಆತನ ಹೆಸರಿಗೆ ಲೆಕ್ಕವಿಲ್ಲದಷ್ಟು ಕೊರಿಯರ್‌ಗಳು ಬಂದಿರುವುದು ಗೊತ್ತಾಯಿತು. ಬಳಿಕ ದೂರವಾಣಿ ಸಂಖ್ಯೆ ಆಧರಿಸಿ ಆತ ವಾಸವಿದ್ದ ಅಪಾರ್ಟ್‌ಮೆಂಟ್ ಕದ ತಟ್ಟಿದಾಗ ಭಾರೀ ಪ್ರಮಾಣದ ಮಾದಕ ವಸ್ತುಗಳ ಜತೆಯೇ ರೆಡ್ ಹ್ಯಾಂಡಾಗಿಸಿಕ್ಕಿಬಿದ್ದಿದ್ದಾನೆ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಹಿರಿಯ ಅಧಿಕಾರಿ ತಿಳಿಸಿದರು.
ಆರೋಪಿ ಬಳಿ ಪತ್ತೆಯಾಗಿರುವ ಮಾದಕ ವಸ್ತುಗಳನ್ನು ಇ-ಕಾಮರ್ಸ್ ಸಂಸ್ಥೆಯೊಂದರ ಪ್ಯಾಕೇಜ್‌ನಲ್ಲಿರಿಸಿ ಸಾಗಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಪರಿಶೀಲನೆ ನಡೆಸದೇ ವಸ್ತುಗಳನ್ನು ಸರಬರಾಜು ಮಾಡಿರುವ ಸಂಬಂಧ ಆ ಕಂಪನಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ಹಾಗೂ ತಪಾಸಣೆ ನಡೆಸಲು ಸೂಚಿಸಲಾಗುವುದು.
–ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ