ಬೆಂಗಳೂರು: “ಡಾರ್ಕ್ ವೆಬ್’ನಲ್ಲಿ ಮಾದಕವಸ್ತು ಖರೀದಿಸಿ ಕಾಲೇಜು ವಿದ್ಯಾರ್ಥಿಗಳು, ಖಾಸಗಿ ಕಂಪೆನಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ರಾಹುಲ್ ತುಳಸಿರಾಮ್ ಶರ್ಮಾ (28), ತಮಿಳುನಾಡು ಹೊಸೂರಿನ ಬಾಲಾಜಿ ಸಿ. ಬಂಧಿತರು. ಆರೋಪಿಗಳಿಂದ 1. 39 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳು, ಲ್ಯಾಪ್‌ಟಾಪ್ ಹಾಗೂ 27.50 ಲಕ್ಷ ರೂ. ನಗದು ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿಗಳಿಬ್ಬರು ಹಲವು ವರ್ಷಗಳಿಂದ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದಾರೆ.
ಡಾರ್ಕ್‌ವೆಬ್ ಮೂಲಕ ಇಬ್ಬರು ಪರಿಚಿತರಾಗಿದ್ದಾರೆ. ಮಾದಕ ವಸ್ತುಗಳನ್ನು ಖರೀದಿಸಿ ಪರಿಚಯಸ್ಥ ಕಾಲೇಜು ವಿದ್ಯಾರ್ಥಿಗಳು, ಖಾಸಗಿ ಕಂಪೆನಿ ಉದ್ಯೋಗಿಗಳಿಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಪಿಯುಸಿ ವ್ಯಾಸಂಗ ಮಾಡಿರುವ ರಾಹುಲ್ ಕೆಲ ವರ್ಷಗಳ ಹಿಂದೆ ನಗರಕ್ಕೆ ಆಗಮಿಸಿದ್ದು ಮಾದಕ ವಸ್ತು ಸೇವನೆ ಕಲಿತುಕೊಂಡಿದ್ದಾನೆ. ಬಳಿಕ ತಾನೇ ಪೆಡ್ಲರ್ ಆಗಿ ಬದಲಾಗಿದ್ದಾನೆ. ದುಶ್ಚಟಗಳು ಹಾಗೂ ವಿಲಾಸಿ ಜೀವನ ನಡೆಸುವ ಸಲುವಾಗಿ ಮಾದಕ ವಸ್ತು ಮಾರಾಟಕ್ಕಿಳಿದಿದ್ದ. ಸೇಲಂನನಲ್ಲಿ ಮೊದಲು ಚಿನ್ನಾಭರಣ ಮಾರಾಟ ಮಳಿಗೆ ಹೊಂದಿದ್ದ ಬಾಲಾಜಿ ವ್ಯವಹಾರದಲ್ಲಿ ನಷ್ಟವುಂಟಾಗಿದ್ದರಿಂದ ಸುಲಭವಾಗಿ ಹಣ ಗಳಿಸಲು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ.
ಇದನ್ನೂ ಓದಿ:ಸಮಯ ಮತ್ತೆ ಮರಳಿ ಸಿಗಲ್ಲ….ಸಮಯ ಪಾಲನೆಯಿಂದ ನಮಗೇನು ಲಾಭ?
ಈತನಿಗೆ ಡಾರ್ಕ್‌ವೆಬ್‌ನಲ್ಲಿ ರಾಹುಲ್ ಪರಿಚಯ ಆದ ಬಳಿಕ ಬೆಂಗಳೂರಿಗೆ ಸ್ಥಳಾಂತರಗೊಂಡು ದಂಧೆ ನಡೆಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಪೈಪ್ ಲೈನ್ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಇನ್ಸ್‌ಪೆಕ್ಟರ್ ಪಿ.ಶಿವಕುಮಾರ್, ಪಿಎಸ್‌ಐ ವಿದ್ಯಾಶ್ರೀ ಎಸ್. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ರಾಹುಲ್‌ನನ್ನು ಬಂಧಿಸಿ 334 ಎಲ್‌ಇಡಿ ಸ್ಟ್ರಿಪ್ಸ್ ಜಪ್ತಿ ಮಾಡಲಾಗಿತ್ತು. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಬಾಲಾಜಿಯನ್ನು ಬಂಧಿಸಿ ಆತನಿಂದ ಉಳಿದ ಡ್ರಗ್ಸ್ ಹಾಗೂ ನಗದು ಜಪ್ತಿ ಮಾಡಲಾಗಿದೆ. ಆರೋಪಿಗಳಿಬ್ಬರನ್ನು ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಪಡೆದಿದ್ದು ತನಿಖೆ ಮುಂದುವರಿಸಲಾಗಿದೆ ಅಧಿಕಾರಿ ಹೇಳಿದರು.