Advertisement

ಸ್ಯಾನಿಟರಿ ಪ್ಯಾಡ್‌ನ‌ಲ್ಲಿ ಮಾದಕವಸ್ತು ಸಾಗಾಟ

12:57 AM Jun 19, 2019 | Team Udayavani |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಸ್ಯಾನಿಟರಿ ಪ್ಯಾಡ್‌ನ‌ಲ್ಲಿ ಬಚ್ಚಿಟ್ಟಿದ್ದ ಡ್ರಗ್ಸ್‌ ಪತ್ತೆಹಚ್ಚಿದ ಮಾದಕ ವಸ್ತು ನಿಯಂತ್ರಣ ಘಟಕದ ಬೆಂಗಳೂರು ವಿಭಾಗ (ಎನ್‌ಸಿಬಿ), ರಾಜಧಾನಿಯಲ್ಲಿನ ಅಂತಾರಾಷ್ಟ್ರೀಯ ಡ್ರಗ್ಸ್‌ ಜಾಲ ಬಯಲಿಗೆಳೆದಿದೆ.

Advertisement

ಜಾಲದಲ್ಲಿ ಸಕ್ರಿಯಗೊಂಡಿದ ಖುಶ್ಬೂ ಶರ್ಮಾ, ಮಂಗಳೂರು ಮೂಲದ ಮೊಹಮದ್‌ ಆಸೀಫ್ (22) ಅಬು ತಾಹೀರ್‌, ಮೊಹಮದ್‌ ಅಫ್ಜಲ್‌ ಎಂಬವರನ್ನು ಬಂಧಿಸಿರುವ ಅಧಿಕಾರಿಗಳು, ಆರೋಪಿಗಳಿಂದ ಮೆಟಾಫಿಟಮಿನ್‌, ಹಶೀಶ್‌, ಲಿರಿಕಾ ಮಾದಕ ಮಾತ್ರೆ ಸೇರಿದಂತೆ ವಿವಿಧ ಮಾದರಿಯ ಲಕ್ಷಾಂತರ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ.

ಆರೋಪಿಗಳು ಬೆಂಗಳೂರಿನಲ್ಲಿದ್ದುಕೊಂಡೇ ದೆಹಲಿ, ಗೋವಾ, ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಡ್ರಗ್ಸ್‌ ದಂಧೆ ಹಾಗೂ ಕತಾರ್‌, ದೋಹಾ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಸಂಗತಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು ತನಿಖೆ ಮುಂದುವರಿಸಿರುವುದಾಗಿ ಎನ್‌ಸಿಬಿ ಆಧಿಕಾರಿಗಳು ತಿಳಿಸಿದ್ದಾರೆ.

ಜೂ.15ರಂದು ವಿಮಾನ ನಿಲ್ದಾಣದಲ್ಲಿ ಕಾರೊಂದರಲ್ಲಿ ಡ್ರಗ್ಸ್‌ ಸರಬರಾಜು ಮಾಡುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಎನ್‌ಸಿಬಿ ಅಧಿಕಾರಿಗಳು, ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಾರೊಂದರಲ್ಲಿದ್ದ ಬಂದಿಳಿದ ಖುಶ್ಬೂ ಶರ್ಮಾಳನ್ನು ತಪಾಸಣೆಗೊಳಪಡಿಸಿದ್ದಾರೆ.

ಮಹಿಳೆ ಹೊಂದಿದ್ದ ಹ್ಯಾಂಡ್‌ ಬ್ಯಾಗ್‌ನಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ಸ್‌ನಲ್ಲಿ ಬಚ್ಚಿಟ್ಟಿದ್ದ 510 ಗ್ರಾಂ ಮೆಟಾಫಿಟಮಿನ್‌, ಹಾಗೂ 572 ಲಿರಿಕಾ ಮಾದಕ ಮಾತ್ರೆಗಳು ಕಂಡು ಬಂದಿದ್ದು, ಆಕೆಯನ್ನು ವಶಕ್ಕೆ ಪಡೆಯಲಾಗಿತ್ತು. ಮಹಿಳೆಯನ್ನು ವಿಚಾರಣೆಗೊಳಪಡಿಸಿದಾಗ ಜಾಲದ ಇಬ್ಬರು ಕಿಂಗ್‌ಪಿನ್‌ಗಳು ಆಸ್ಟ್ರೀನ್‌ ಟೌನ್‌ನಲ್ಲಿ ಅಪಾರ ಪ್ರಮಾಣದ ಡ್ರಗ್ಸ್‌ ಶೇಖರಿಸಿಟ್ಟಿರುವುದು ಗೊತ್ತಾಗಿದೆ.

Advertisement

ಈ ಮಾಹಿತಿ ಆಧರಿಸಿ ಮತ್ತೂಂದು ತಂಡ ಆಸ್ಟಿನ್‌ ಟೌನ್‌ನಲ್ಲಿರುವ ಲಿಂಡನ್‌ ಸ್ಟ್ರೀಟ್‌ನಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿ 2.850 ಕೆ.ಜಿ ಹಶೀಶ್‌ ದ್ರವ್ಯ, 13.680 ಕೆ.ಜಿ ಹಶೀಶ್‌, 330 ಗ್ರಾಂ ಮೆಟಾಫಿಟಮಿನ್‌, 572 ಲಿರಿಕಾ ಮಾತ್ರೆ ಜಪ್ತಿ ಮಾಡಿ ಆರೋಪಿಗಳಾದ ಮೊಹಮದ್‌ ಅಫ್ಜಲ್‌, ಅಬು ತಾಹೀರ್‌, ಮೊಹಮದ್‌ ಆಸೀಫ್, ಖುಶ್ಬೂ ಶರ್ಮಾಳನ್ನು ಬಂಧಿಸಿ ಎನ್‌ಡಿಪಿಎಸ್‌ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯಪ್ರಾಚ್ಯ ದೇಶಗಳ ಭಾರತೀಯ ಮೂಲದ ಪ್ರಜೆಗಳಿಗೆ ಡ್ರಗ್ಸ್‌ ಸರಬರಾಜು ಮಾಡುವ ಆರೋಪಿಗಳು, ಆರೋಪಿ ಖುಶ್ಬೂ ಶರ್ಮಾಳನ್ನು ದೋಹಾಗೆ ಕಳುಹಿಸಿಕೊಡಲು ನಿರ್ಧರಿಸಿದ್ದರು. ಕೆಲ ದಿನಗಳ ನಂತರ ಮೊಹಮದ್‌ ಆಸೀಪ್‌ನನ್ನು ಕಳುಹಿಸಿಕೊಡಲು ನಿರ್ಧರಿಸಿದ್ದರು ಎಂಬ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ.

ಆಸೀಪ್‌ ಹಾಗೂ ಖುಶ್ಬೂ ಶರ್ಮಾಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಮುಖ ಆರೋಪಿಗಳಾದ ಅಫ್ಜಲ್‌ ಹಾಗೂ ತಾಹೀರ್‌ನನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next