ಬೆಂಗಳೂರು: ಗಾಂಜಾ ಮಾರಾಟಗಾರ ಮೋಸ್ಟ್ ವಾಂಟೆಡ್ ಡ್ರಗ್ಸ್ ಪೆಡ್ಲರ್ ಜೊಲ್ಲು ಇಮ್ರಾನ್ ಸಹಚರರನ್ನು ಮಾಲು ಸಮೇತ ಬಂಧಿಸುವಲ್ಲಿ ದೇವರ ಜೀವನಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿ.ಜೆ.ಹಳ್ಳಿ ನಿವಾಸಿ ಸೈಯದ್ ತನ್ನು ಅಲಿಯಾಸ್ ತನ್ನು ಅಲಿಯಾಸ್ ಲಿಂಬು ಬಂಧಿತ. ಆರೋಪಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1.30 ಕೋಟಿ ರೂ. ಮೌಲ್ಯದ 205 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ.
ಆರೋಪಿ ಇತ್ತೀಚಿಗೆ ಡಿ.ಜೆ.ಹಳ್ಳಿಯ ಸಕ್ಕರೆ ಮಂಡಿ ಬಳಿ ಸಾರ್ವಜನಿಕರಿಗೆ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಖಚಿತ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ ಆತನ ಮನೆ ಶೋಧಿಸಿದಾಗ 205 ಕೆ.ಜಿ. ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
ವೃತ್ತಿಯಲ್ಲಿ ಡ್ರಗ್ಸ್ ಪೆಡ್ಲರ್ ಆಗಿರುವ ಸೈಯದ್ ತನ್ನು ವಿರುದ್ಧ ಐದಾರು ಎನ್‌ಡಿಪಿಎಸ್, ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ವಾರೆಂಟ್ ಕೂಡ ಜಾರಿ ಆಗಿತ್ತು. ಈ ಹಿನ್ನೆಲೆಯಲ್ಲಿ ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿತ್ತು. ಈ ಮಧ್ಯೆ ಆರೋಪಿ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿ ಮಾಲು ಸಮೇತ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದರು.
ಈತ ಮೋಸ್ಟ್ ವಾಟೆಂಡ್ ಡ್ರಗ್ಸ್ ಪೆಡ್ಲರ್ ಜೋಲ್ಲು ಇಮ್ರಾನ್ ಸಹಚರನಾಗಿದ್ದಾನೆ. ಜೋಲ್ಲು ಇಮ್ರಾನ್ ವಿರುದ್ಧ 18 ವಾರೆಂಟ್‌ಗಳು ಜಾರಿ ಆಗಿತ್ತು. ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಎರಡು ತಿಂಗಳ ಹಿಂದೆ ನೂರಾರು ಕೆ.ಜಿ. ಗಾಂಜಾ ಸಮೇತ ಆರೋಪಿಯನ್ನು ಬಂಧಿಸಲಾಗಿತ್ತು. ಸದ್ಯ ಜೈಲಿನಲ್ಲಿದ್ದಾನೆ. ಅಲ್ಲಿದುಕೊಂಡೆ ಆಂಧ್ರಪ್ರದೇಶದ ಡೀಲರ್‌ಗಳಿಂದ ತನ್ನ ಸಹಚರ ಸೈಯದ್ ತನ್ನ ಮೂಲಕ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾನೆ ಎಂದು ಪೊಲೀಸರು ಹೇಳಿದರು.
ಠಾಣಾಧಿಕಾರಿ ಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಡಿ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.