Advertisement

ಮಂಗಳೂರಿಗೆ ಮಸ್ಕತ್‌ನಿಂದ ಡ್ರಗ್ಸ್‌

03:25 AM Sep 03, 2020 | Hari Prasad |

ಮಂಗಳೂರು: ಡ್ರಗ್ಸ್‌ ಜಾಲ ಕರಾವಳಿಯಲ್ಲಿಯೂ ಸಕ್ರಿಯವಾಗಿದೆ.

Advertisement

ಆದರೆ ಸ್ಯಾಂಡಲ್‌ವುಡ್‌ನ‌ಲ್ಲಿ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್‌ ಜಾಲಕ್ಕೂ ಮಂಗಳೂರಿಗೂ ಸಂಬಂಧವಿದೆಯೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ.

ಮಧ್ಯಪ್ರಾಚ್ಯದ ಮಸ್ಕತ್‌ನಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಮಾದಕ ವಸ್ತು ಎಂಡಿಎಂಐ ಸಿಂಥೆಟಿಕ್‌ ಡ್ರಗ್ಸ್‌ ಪೂರೈಕೆ ಆಗುತ್ತಿದೆ ಎನ್ನುವ ಸಂಗತಿ ಮಂಗಳೂರಿನ ಪೊಲೀಸ್‌ ತನಿಖೆಯಿಂದ ಬೆಳಕಿಗೆ ಬಂದಿದ್ದು, ಈ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ.

(ಮಸ್ಕತ್‌ನಲ್ಲಿರುವ ಅನಿವಾಸಿ ಭಾರತೀಯರ (ಮಂಗಳೂರಿನ ಮಂದಿ) ತಂಡವೊಂದು ಬೆಂಗಳೂರಿಗೆ ಮಾದಕ ದ್ರವ್ಯ ರವಾನಿಸುತ್ತಿದ್ದು, ಅದನ್ನು ಬೆಂಗಳೂರಿನ ಮಧ್ಯವರ್ತಿಗಳು ಸಂಗ್ರಹಿಸಿ ಮಂಗಳೂರಿಗೆ ಪೂರೈಕೆ ಮಾಡುತ್ತಿದ್ದಾರೆ ಎಂದು ತನಿಖೆಯಿಂದ ಗೊತ್ತಾಗಿದೆ.

ಮಂಗಳೂರಿನಲ್ಲಿ ಡ್ರಗ್ಸ್‌ ವ್ಯವಹಾರ ನಡೆಸುತ್ತಿದ್ದ ಅಖೀಲೇಶ್‌ ಮತ್ತು ಸಹಕಾರ ನೀಡಿದ ಸಾಹಿಲ್‌ನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಆದರೆ ಮುಖ್ಯ ಆರೋಪಿಗಳು ಮಾತ್ರ ಇನ್ನೂ ಪತ್ತೆಯಾಗಿಲ್ಲ.

Advertisement

ಮಂಗಳೂರು ಸಹಿತ ಕರಾವಳಿ ಜಿಲ್ಲೆಗಳಲ್ಲಿ ಮಾದಕ ವಸ್ತು ಗಾಂಜಾ ಹೆಚ್ಚು ಬಳಕೆಯಲ್ಲಿದ್ದು, ಈ ಬಗ್ಗೆ ಆಗಿಂದಾಗ್ಗೆ ಪ್ರಕರಣಗಳು ದಾಖಲಾಗುತ್ತಿವೆ. ಇದರ ಹೊರತಾಗಿ ಇತೀಚಿನ ವರ್ಷಗಳಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ (ಮಿಥಿಲಿನ್‌ ಡಯೋಕ್ಸಿ ಮೆತಂಫೆಟ್‌- ಆಮೈನ್‌) ಬಳಕೆ ಪ್ರಕರಣಗಳು ವರದಿಯಾಗುತ್ತಿವೆ.

ವಿದ್ಯಾರ್ಥಿ ಮತ್ತು ಯುವ ಸಮುದಾಯವನ್ನು ಗುರಿಯಾಗಿರಿಸಿ ಮಂಗಳೂರಿಗೆ ಮಾದಕ ವಸ್ತು ಪೂರೈಕೆ ಆಗುತ್ತಿದ್ದು, ಈಗ ಕಾಲೇಜುಗಳು ಬಂದ್‌ ಆಗಿರುವ ಕಾರಣ ನಗರದಲ್ಲಿ ಡ್ರಗ್ಸ್‌ ವ್ಯವಹಾರ ಈ ಹಿಂದಿನಂತೆ ನಡೆಯುತ್ತಿಲ್ಲ ಎಂದು ಪೊಲೀಸರು ಉದಯವಾಣಿಗೆ ತಿಳಿಸಿದ್ದಾರೆ.

ಆ್ಯಪ್‌ ಮೂಲಕ ವ್ಯವಹಾರ
ಡ್ರಗ್ಸ್‌ ವ್ಯವಹಾರ ವಾಟ್ಸ್‌ಆ್ಯಪ್‌ ಮತ್ತು ಇತರ ಆ್ಯಪ್ ಗಳ ಮೂಲಕ ನಡೆಯುತ್ತಿದೆ. ಮಧ್ಯವರ್ತಿಗಳು ಮತ್ತು ಗ್ರಾಹಕರು ವಾಟ್ಸ್‌ ಆ್ಯಪ್‌ ಸಂದೇಶ ಅಥವಾ ಕರೆ ಮಾಡುವ ಮೂಲಕ ವ್ಯವಹಾರ ನಡೆಸುತ್ತಾರೆ. ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಗಳಲ್ಲಿ 11 ಮಾದಕ ಪದಾರ್ಥ ಪ್ರಕರಣಗಳು ದಾಖಲಾಗಿದ್ದು, 50 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ಮತ್ತು ಇತರ ಸೊತ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಮಂಗಳೂರಿನ ಡ್ರಗ್ಸ್‌ ಪ್ರಕರಣಕ್ಕೆ ಹಲವು ವರ್ಷಗಳ ಇತಿಹಾಸವಿದೆ. 9 ವರ್ಷಗಳ ಹಿಂದೆ 2011ರಲ್ಲಿ ಡ್ರಗ್ಸ್‌ ಸೇವನೆಯ ಚಟ ಬೆಳೆಸಿಕೊಂಡಿದ್ದ ಪಿಯು ವಿದ್ಯಾರ್ಥಿನಿ ಓರ್ವಳನ್ನು ಮುಂಬಯಿಗೆ ಕರೆದೊಯ್ಯುವ ಯತ್ನವನ್ನು ಕೊನೆಯ ಹಂತದಲ್ಲಿ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಲ್ಲಿ ತಡೆ ಹಿಡಿಯಲಾಗಿತ್ತು. ಈ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ಈ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾಗಿ ಸುಮಾರು 6 ತಿಂಗಳು ಜೀವನ್ಮರಣ ಹೋರಾಟ ನಡೆಸಿ ಕೊನೆಗೂ ಚೇತರಿಸಿಕೊಂಡಿದ್ದಳು.

ಹೀಗೆ ಡ್ರಗ್ಸ್‌ ಜಾಲ ವ್ಯಾಪಕವಾಗಿದ್ದ ಬಗ್ಗೆ ಆಗ ಮಂಗಳೂರಿನಲ್ಲಿ ಶಾಸಕರಾಗಿದ್ದ ಹಾಗೂ ವಿಧಾನ ಸಭೆಯ ಅರ್ಜಿಗಳ ಸಮಿತಿಯ ಅಧ್ಯಕ್ಷರಾಗಿದ್ದ ಎನ್‌. ಯೋಗೀಶ್‌ ಭಟ್‌ ಅವರಿಗೆ ಹಲವಾರು ದೂರು ಅರ್ಜಿಗಳು ಸಲ್ಲಿಕೆಯಾಗಿದ್ದವು.
ಹಾಗಾಗಿ ಅರ್ಜಿಗಳ ಸಮಿತಿಯು ಡ್ರಗ್ಸ್‌ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ ಡ್ರಗ್ಸ್‌ ಹಾವಳಿ ತಡೆಯಲು ಹಲವು ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡಿತ್ತು.

ಬೆಂಗಳೂರಿನ ಡ್ರಗ್ಸ್‌ ದಂಧೆಗೂ ಮಂಗಳೂರಿನ ಡ್ರಗ್ಸ್‌ ಜಾಲಕ್ಕೂ ಸಂಬಂಧ ಇನ್ನೂ ದೃಢಪಟ್ಟಿಲ್ಲ. ಆದರೆ ಮಂಗಳೂರಿನ ಡ್ರಗ್ಸ್‌ ಜಾಲಕ್ಕೆ ಬೇರೆ ಸಂಪರ್ಕ ಮೂಲಗಳಿವೆ. ಅದನ್ನು ಭೇದಿಸಲು ಕ್ರಮ ಕೈಗೊಳ್ಳಲಾಗಿದೆ. ಮಸ್ಕತ್‌ನಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಡ್ರಗ್ಸ್‌ ರವಾನೆ ಆಗುತ್ತಿದ್ದು, ಮುಖ್ಯ ಆರೋಪಿಗಳ ಬಂಧನಕ್ಕೆ ಕಾರ್ಯತಂತ್ರ ರೂಪಿಸಲಾಗುತ್ತಿದೆ.
– ವಿಕಾಸ್‌ ಕುಮಾರ್‌, ಪೊಲೀಸ್‌ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next