ಬೆಂಗಳೂರು: ವಾಟ್ಸ್‌ಆ್ಯಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಇಬ್ಬರು ಆರೋಪಿಗಳು ಹುಳಿಮಾವು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಎಮಾನ್ಯೂವೆಲ್ ಅಫಾನ್ (43), ಉಚ್ಚೆನ್ನ ಲಿವನ್ಸ್ (36) ಬಂಧಿತರು. 82.57 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳಾದ 1,281 ಎಕ್ಟಸೀ ಪಿಲ್ಸ್, 463 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಅನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳು ನೈಜೇರಿಯಾದಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಬೆಂಗಳೂರಿಗೆ ತರುತ್ತಿದ್ದರು. ಬಳಿಕ ಬನ್ನೇರುಘಟ್ಟ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆಗಳಲ್ಲಿ ಬಿಡಿ, ಬಿಡಿಯಾಗಿ ವಿದ್ಯಾರ್ಥಿಗಳು, ಮಾದಕ ವ್ಯಸನಿಗಳಿಗೆ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಬೇಗೂರು ಕೊಪ್ಪ ರಸ್ತೆ ಬಳಿ ಮಾರಾಟ ಮಾಡುತ್ತಿದ್ದಾಗ ಹುಳಿಮಾವು ಪೊಲೀಸರಿಗೆ ಇವರ ಸುಳಿವು ಸಿಕ್ಕಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ವಾಟ್ಸ್‌ಆ್ಯಪ್ ಮೂಲಕ ತಮ್ಮ ಗ್ರಾಹಕರನ್ನು ಸಂಪರ್ಕಿಸುತ್ತಿದ್ದರು. ಇವರು ಸೂಚಿಸುವ ಸ್ಥಳಕ್ಕೆ ಹೋಗಿ ಗ್ರಾಹಕರು ಡ್ರಗ್ಸ್ ಖರೀದಿಸುತ್ತಿದ್ದರು. ಕೆಲವೊಮ್ಮೆ ಸಣ್ಣ ಬಟ್ಟೆಯಲ್ಲಿ ಡ್ರಗ್ಸ್ ಕಟ್ಟಿ ನಿರ್ದಿಷ್ಟ ಸ್ಥಳದಲ್ಲಿ ಎಸೆದು ಅದರ ಲೊಕೇಶನ್‌ಗಳನ್ನು ಗ್ರಾಹಕರಿಗೆ ಕಳುಹಿಸುತ್ತಿದ್ದರು. ಪೊಲೀಸರಿಗೆ ತಮ್ಮ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಆರೋಪಿಗಳು ಈ ತಂತ್ರರೂಪಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಬಂಧಿತರ ಪೈಕಿ ಓರ್ವನ ವೀಸಾ ಅವಧಿ ಮುಕ್ತಾಯಗೊಂಡಿದೆ. ಇಬ್ಬರೂ ಡ್ರಗ್ಸ್ ದಂಧೆ ನಡೆಸಲೆಂದೇ ಬೆಂಗಳೂರಿಗೆ ಆಗಮಿಸಿದ್ದರು. ಇದೀಗ ಇವರ ಮೊಬೈಲ್ ಜಪ್ತಿ ಮಾಡಿರುವ ಪೊಲೀಸರು ಇವರಿಂದ ಡ್ರಗ್ಸ್ ಖರೀದಿಸುತ್ತಿದ್ದ ಗ್ರಾಹಕರಿಗೆ ಶೋಧ ಮುಂದುವರೆಸಿದ್ದಾರೆ.