ಬೆಂಗಳೂರು: ನಗರದ ಮೂರು ಪ್ರತ್ಯೇಕ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜಿರಿಯಾ ಮೂಲದ ವ್ಯಕ್ತಿ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಕೇನ್ ಮಾರಾಟ ಮಾಡುತ್ತಿದ್ದ ನೈಜಿರಿಯಾ ಮೂಲದ ಭುಕ್ವು ಗಾಡ್ವಿನ್(36) ಎಂಬಾತನನ್ನು ಸುದ್ದುಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಈತನಿಂದ 25 ಗ್ರಾಂ ತೂಕದ ಕೊಕೇನ್ ವಶಕ್ಕೆ ಪಡೆಯಲಾಗಿದೆ. ಕೋಕೇನ್ ಅನ್ನು ಅಕ್ರಮವಾಗಿ ವಿದೇಶಗಳಿಂದ ನಗರಕ್ಕೆ ತರಿಸಿ ಅದನ್ನು ಶ್ರೀಮಂತರ ಮಕ್ಕಳು, ದೊಡ್ಡ ಮಟ್ಟದ ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ. ಇತ್ತೀಚೆಗೆ ಆರೋಪಿ ಬನ್ನೇರುಘಟ್ಟ ರಸ್ತೆಯಲ್ಲಿ ಕೋಕೇನ್ ಮಾರಾಟ ಮಾಡಲು ಯತ್ನಿಸುವಾಗ ಮಾಲು ಸಮೇತ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೂಂದು ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಚಾಮರಾಜಪೇಟೆ ನಿವಾಸಿ ಆಸೀಫ್ ಅತಾವುಲ್ಲಾ(51) ಬಂಧಿಸಿ, ಆತನಿಂದ 50 ಸಾವಿರ ರೂ. ಮೌಲ್ಯದ 1 ಕೆ.ಜಿ. ಗಾಂಜಾ, ಮೊಬೈಲ್ ಫೋನ್, ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿ ಮೈಸೂರು ರಸ್ತೆಯ ಗೋಪಾಲನ್ ಸಿನಿಮಾಸ್, ಸರ್ಕಾರಿ ಶಾಲೆ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಮಾಲು ಸಮೇತ ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಗಾಂಜಾ ಮಾರಾಟಗಾರರ ಬಂಧನ: ಇದೇ ವೇಳೆ ಶಾಲಾ-ಕಾಲೇಜುಗಳ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ವರನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಸೂರಜ್ ಕುಮಾರ್ ಕಾಮತ್ (38), ಒಡಿಶಾದ ಪೂರ್ಣ ಚಂದ್ರನಾಥ್(45), ಉತ್ತರ ಪ್ರದೇಶದ ವಿಜಯ್‌ಕುಮಾರ್ ಪಾಲ್(35), ಕಮಲೇಶ್ ಕುಮಾರ್ ಯಾದವ್(24) ಬಂಧಿತರು. ಆರೋಪಿಗಳಿಂದ 8 ಕೆ.ಜಿ.ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಆರೋಪಿಗಳು ಪೂರ್ಣಚಂದ್ರನಾಥ್ ಮೂಲಕ ಒಡಿಶಾದಿಂದ ಕಡಿಮೆ ಬೆಲೆಗೆ ಗಾಂಜಾವನ್ನು ರೈಲಿನಲ್ಲಿ ಕೆ.ಆರ್.ಪುರಂ ರೈಲ್ವೆ ನಿಲ್ದಾಣಕ್ಕೆ ತರಿಸುತ್ತಿದ್ದರು. ನಂತರ ವಿಜಯ್‌ಕುಮಾರ್ ತನ್ನ ಆಟೋದಲ್ಲಿ ಮಾದಕ ವಸ್ತು ಇಟ್ಟುಕೊಂಡು, ಬಳಿಕ ಸೂರಜ್‌ನ ಮನೆಯಲ್ಲಿ ಸಣ್ಣ-ಸಣ್ಣ ಪ್ಯಾಕೆಟ್‌ಗಳನ್ನು ಮಾಡಿ ಶಾಲಾ, ಕಾಲೇಜುಗಳ ಬಳಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಅಲ್ಲದೇ, ಕೆಲ ಬೀಡಾಸ್ಟಾಲ್ ಅಂಗಡಿಗಳಿಗೂ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.