ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ‘ ಭಾಷೆ’ ಯ ಸಮಸ್ಯೆ ಎದುರಾಗಿದೆ. ಡ್ರಗ್ ಪೂರೈಕೆ ಮಾಡುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ಆಫ್ರಿಕಾ ಮೂಲದ ಲೂಮ್ ಪೆಪ್ಪರ್ ಆಫ್ರಿಕನ್ ಭಾಷೆಯಲ್ಲಿ ಮಾತನಾಡುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಪ್ರಕರಣದಲ್ಲಿ ಎ7 ಆರೋಪಿಯಾಗಿರುವ ಲೂಮ್ ಪೆಪ್ಪರ್ ಆಫ್ರಿಕಾ ಮೂಲದವನಾಗಿದ್ದು, ಸೆಲೆಬ್ರೆಟಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯ ಈತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆದರೆ ಈತನಿಗೆ ಇಂಗ್ಲೀಷ್ ಬರುವುದಿಲ್ಲ ಎನ್ನುವುದೇ ಸಮಸ್ಯೆಯಾಗಿದೆ.
ಪೊಲೀಸರು ಇಂಗ್ಲೀಷ್ನಲ್ಲಿ ಕೇಳಿದ ಪ್ರಶ್ನೆಗೆ ಈತ ತನಗೆ ಇಂಗ್ಲೀಷ್ ಬರುವುದಿಲ್ಲ ಎಂದು ಹೇಳುತ್ತಿದ್ದು, ಈತನ ಅರ್ಧಂಬರ್ಧ ಇಂಗ್ಲೀಷ್ ಭಾಷೆ ಕೂಡ ಪೊಲೀಸರಿಗೆ ಅರ್ಥವಾಗುತ್ತಿಲ್ಲ. ಇಂಗ್ಲೀಷ್ ಭಾಷೆ ಗೊತ್ತಿಲ್ಲದ ಈತ ಹೇಗೆ ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದ ಎನ್ನುವ ಸಂಶಯ ಕಾಡುತ್ತಿದೆ. ಈತ ಇಂಗ್ಲೀಷ್ ಬಾರದೆಂಬಂತೆ ನಾಟಕವಾಡುತ್ತಿರುವ ಸಂಶಯವೂ ಇದೆ. ಈತನಿಗೆ ಇಂಗ್ಲೀಷ್ ಬರುತ್ತೆ ಎಂದು ಆರೋಪಿ ರವಿಶಂಕರ್ ಹೇಳಿದ್ದ. ಆದರೆ ಲೂಮ್ ನಾಟಕವಾಡುತ್ತಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಲಾರಿ – ಕಾರು ಅಪಘಾತ: ಲಾರಿ ಚಾಲಕನ ಮೇಲೆ ಮೊಳಕಾಲ್ಮೂರು ತಹಶಿಲ್ದಾರ್ ಹಲ್ಲೆ
ಸದ್ಯ ಪೊಲೀಸರು ಆಫ್ರಿಕನ್ ಭಾಷೆ ತಿಳಿದಿರುವ ಅನುವಾದಕರನ್ನು ಕರೆಸಿ ವಿಚಾರಣೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.