Advertisement
ಆನ್‌ಲೈನ್‌ನ ಮೂಲಕ ಹಣಕಾಸು ವ್ಯವಹಾರ ನಡೆಸಿ, ಲೊಕೇಷನ್ ಕಳುಹಿಸಿ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ರಾಜಸ್ಥಾನ ಮೂಲದ ಮೂವರು ಸೇರಿ ನಾಲ್ವರು ಕೊಡಿಗೇಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ರಾಜಸ್ಥಾನದ ನೇಮಿಚಂದ್ (40), ಓಂಪ್ರಕಾಶ್ (35), ಪ್ರೇಮರಾಜ್(40) ಮತ್ತು ಬೆಂಗಳೂರಿನ ಥಣಿಸಂದ್ರ ನಿವಾಸಿ ಮಲ್ಲೇಶ್(35) ಬಂಧಿತರು. ಆರೋಪಿಗಳಿಂದ ಮೂರು ಲಕ್ಷ ರೂ. ಮೌಲ್ಯದ 61 ಗ್ರಾಂ ತೂಕದ ಹೆರಾಯಿನ್, ಮೂರು ಮೊಬೈಲ್, ಒಂದು ಕಾರು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
Related Articles
Advertisement
ಇತ್ತೀಚೆಗೆ ಒಡಿಶಾದಿಂದ ಭಾರೀ ಪ್ರಮಾಣದಲ್ಲಿ ಮಾದಕ ವಸ್ತು ತಂದು ನಗರದಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಠಾಣಾಧಿಕಾರಿ ಬಿ.ಗೋವಿಂದರಾಜು, ಪಿಎಸ್‌ಐ ಡಿ.ಕೆ.ಶ್ರೀಶೈಲಾ, ಎಂ.ಎಲ್.ಸುಷ್ಮಾ, ಕೆ.ಸಿ.ಹೇಮಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಟ್-ಎನ್‌ಡಿಪಿಎಸ್ ಅಡಿ ಬಂಧನ:
ಪದೇಪದೆ ಮಾದಕ ವಸ್ತು ಮಾರಾಟ ದಂಧೆಯಲ್ಲಿ ಭಾಗಿಯಾಗುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಪಿಟ್ – ಎನ್‌ಡಿಪಿಎಸ್ ಕಾಯ್ದೆ ಅಡಿ ಬಂಧಿಸಿದ್ದಾರೆ. ಬಿಹಾರ ಮೂಲದ ಅಖೀಲೇಶ್ ಕುಮಾರ್(30) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ನಿರಂತರವಾಗಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗುತ್ತಿದ್ದ. ಇತ್ತೀಚೆಗೆ ಡ್ರಗ್ಸ್ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಜಾಮೀನು ಪಡೆದು ಬಿಡುಗಡೆ ಬಳಿಕ ಕೋರ್ಟ್‌ನ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಅಲ್ಲದೆ, ತನ್ನ ಸಹಚರರ ಮೂಲಕ ಡ್ರಗ್ಸ್ ದಂಧೆ ನಡೆಸುತ್ತಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.