Advertisement
ಕೇರಳ ರಾಜ್ಯ ಅಬಕಾರಿ ಇಲಾಖೆ ನಡೆಸಿದ ರಹಸ್ಯ ತನಿಖೆಯಲ್ಲಿ ಈ ವಿವರಗಳು ತಿಳಿದುಬಂದಿವೆ. ಕೆಲವು ಕಾಲೇಜುಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದ್ದು, ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ವ್ಯಸನತೀವ್ರ ವಾಗಿದೆ. ಹಿಂದೆ ಕಾಲೇಜುಗಳಲ್ಲಿ ಮಾತ್ರ ಇದ್ದ ಮಾದಕ ದ್ರವ್ಯ ವ್ಯಸನ ಈಗ ಶಾಲೆಗಳಿಗೂ ಕಾಲಿರಿಸಿದೆ. ಶಾಲಾ ಚೀಲಗಳಲ್ಲಿ ಗಾಂಜಾ, ಎಂಡಿಎಂಎಯಂತಹ ಮಾದಕ ದ್ರವ್ಯಗಳು ಕಂಡುಬರುತ್ತಿವೆ.
Related Articles
Advertisement
ಜತೆಗೂಡಿದ ವ್ಯಸನ- ಲೈಂಗಿಕ ದೌರ್ಜನ್ಯಮಾದಕ ದ್ರವ್ಯ ವ್ಯಸನಿಗಳಾದ ಶಾಲಾ ಕಾಲೇಜು ಯುವಕರನ್ನು ಉಪಯೋಗಿಸಿಕೊಂಡು ಬಾಲಕಿಯರನ್ನು ಜಾಲದೊಳಕ್ಕೆ ತರುವ ತಂತ್ರಗಾರಿಕೆಯೂ ನಡೆಯುತ್ತಿದೆ ಎಂದು ಕೇರಳ ಪೊಲೀಸ್ ಮೂಲಗಳು ತಿಳಿಸಿವೆ. ಇಂತಹ ಸಂದರ್ಭಗಳಲ್ಲಿ ದ್ರವ್ಯ ವ್ಯಸನದ ಜತೆಗೆ ಲೈಂಗಿಕ ದೌರ್ಜನ್ಯವೂ ಜತೆಗೂಡಿರುತ್ತದೆ. ವ್ಯಸನಕ್ಕೆ ದಾಸರಾದ ಬಾಲಕಿಯರು ಮಾದಕ ದ್ರವ್ಯಗಳನ್ನು ಗಿಟ್ಟಿಸಿಕೊಳ್ಳುವುದಕ್ಕಾಗಿ ಮತ್ತೆ ಮತ್ತೆ ತಾವಾಗಿ ಈ ಲೈಂಗಿಕ ದೌರ್ಜನ್ಯಕ್ಕೆ ಬಲಿಬೀಳುವ ಮಟ್ಟಕ್ಕಿಳಿಯುತ್ತಾರೆ. ಕೇರಳ ಪೊಲೀಸ್ ಮೂಲಗಳು ಹೇಳುವ ಪ್ರಕಾರ ರಾಜ್ಯ ಈಗ ಹಲವು ವರ್ಷಗಳಿಂದ ಪಂಜಾಬ್ ಎದುರಿಸುತ್ತಿರುವಂತಹ ಪರಿಸ್ಥಿತಿಯಲ್ಲಿದೆ. ತನ್ನ ಸ್ವಂತ ನಾಡಾದ ಕೇರಳದ ಎಳೆಯರನ್ನು ಮಾದಕ ದ್ರವ್ಯ ಮಾಫಿಯಾದಿಂದ ದೇವರಾದರೂ ರಕ್ಷಿಸಬಲ್ಲನೇ ಎಂಬುದೇ ಈಗಿರುವ ಪ್ರಶ್ನೆ. ಅಧ್ಯಾಪಕರೇನು ಹೇಳುತ್ತಾರೆ?
ಕಾಸರಗೋಡು ಭಾಗದ, ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಧ್ಯಾಪಕರೊಬ್ಬರು ಈ ಭಾಗದಲ್ಲಿಯೂ ಶಾಲಾ ಕಾಲೇಜು ಮಕ್ಕಳಲ್ಲಿ ಮಾದಕ ದ್ರವ್ಯ ವ್ಯಸನ ವ್ಯಾಪಕವಾಗಿದೆ ಎನ್ನುತ್ತಾರೆ. 100 ಮಂದಿಯಲ್ಲಿ ಒಂದಿಬ್ಬರು ವಿದ್ಯಾರ್ಥಿಗಳು ಮಾದಕ ದ್ರವ್ಯಕ್ಕೆ ಬಲಿಯಾಗಿರು ವುದನ್ನು ಗಮನಿಸಬಹುದು. ಇಂತಹವರು ತರಗತಿಯಲ್ಲಿ ನಿದ್ರಿಸುವ, ಮಾತನಾಡಿದರೆ ಕೋಪಗೊಳ್ಳುವ ಸ್ವಭಾವದವರಾಗಿರುತ್ತಾರೆ. ಶಾಲೆ ಪರಿಸರದ ಸಣ್ಣ ಅಂಗಡಿಗಳಲ್ಲಿ ಸಣ್ಣ ಪ್ಯಾಕೆಟ್‌ಗಳಲ್ಲಿ ಮಾದಕ ಪದಾರ್ಥ ಲಭ್ಯವಾಗುತ್ತದೆ. ಮೊದಲಿಗೆ ಮಕ್ಕಳಿಗೆ ಹಣ ಸಹಿತ ಮಾದಕ ಪದಾರ್ಥ ನೀಡಿ ಬಲೆಗೆ ಬೀಳಿಸಲಾಗುತ್ತದೆ. ಬಳಿಕ ಅವರಿಗೆ ಅದರ ಸೇವನೆ ಅನಿವಾರ್ಯವಾಗುತ್ತದೆ. ಕೇಳಿದಷ್ಟು ಹಣ ನೀಡಿ ಖರೀದಿಸಿ ಸೇವಿಸುತ್ತಾರೆ. ಅಲ್ಲದೆ ಅವರಿಗೆ ಒಂದಷ್ಟು ಪಾಕೆಟ್ ಮನಿ ನೀಡಿ ಅವರ ಮೂಲಕವೇ ಇತರ ವಿದ್ಯಾರ್ಥಿಗಳಿಗೆ ಹಂಚಿ ಅವರನ್ನೂ ಜಾಲಕ್ಕೆ ಸೇರಿಸಿಕೊಳ್ಳುತ್ತಾರೆ. ಬೆಳಗ್ಗೆ ಬರುವಾಗಲೇ ಸೇವಿಸಿ ಕೊಂಡು ಬರುವ ಮಕ್ಕಳೂ ಇರುತ್ತಾರೆ. 11 ಗಂಟೆ ವೇಳೆಗೆ, ಮಧ್ಯಾಹ್ನದ ಬಳಿಕ ಶೌಚಾಲಯಕ್ಕೆ ಹೋಗುವ ನೆಪದಲ್ಲಿ ಅಲ್ಲಿಗೆ ಹೋಗಿ ಸೇವಿಸಿ ಬರುವವರೂ ಇದ್ದಾರೆ. ಇದಕ್ಕಾಗಿ ಶೌಚಾಲಯಗಳ ಗೋಡೆಯ ಸಣ್ಣ ಕಿಂಡಿಗಳು, ಬಿರುಕುಗಳಲ್ಲಿ ದಾಸ್ತಾನು ಇಡುವವರೂ ಇಡುತ್ತಾರೆ. ನಿರ್ದಿಷ್ಟ ವೇಳೆಗೆ ಸೇವನೆಗೆ ಅವಕಾಶ ಸಿಗದಿದ್ದರೆ ಅಂತಹ ವಿದ್ಯಾರ್ಥಿಗಳು ಚಡಪಡಿಸಲಾರಂಭಿಸುತ್ತಾರೆ. ಮಾತನಾಡಿದರೆ ಕೋಪಿಸಿಕೊಳ್ಳುತ್ತಾರೆ. ಸಾಧು ಸ್ವಭಾವದ ಶಿಕ್ಷಕರಾಗಿದ್ದರೆ ಅವರ ಮೇಲೆ ಹಲ್ಲೆಗೆ ಮುಂದಾಗುವುದೂ ಇದೆ. ಪುಡಿ ರೂಪದ ಗಾಂಜಾದ ಬಳಕೆ ಹೆಚ್ಚಿದೆ; ಅದಕ್ಕೂ ಹೆಚ್ಚಿನ ಮಾರಕವಾದ ಎಂಡಿಎಂಎ ಬಳಕೆಯ ಮಾಹಿತಿಯೂ ದೊರಕಿದೆ ಎನ್ನುತ್ತಾರೆ ಅವರು. ಹಲವು ಮಕ್ಕಳು ಮಾದಕ ದ್ರವ್ಯ ಸೇವನೆ ಮಾಡದೆ ಇರುವಾಗ ಪ್ರಶ್ನಿಸಿದರೆ “ನಾವು ಆ ಜಾಲದೊಳಕ್ಕೆ ಬಿದ್ದಿದ್ದೇವೆ; ಬಿಡಲು ಸಾಧ್ಯವಾಗುತ್ತಿಲ್ಲ’ ಎಂದು ದುಃಖೀಸುತ್ತಾರೆ. ಈ ನಿಟ್ಟಿನಲ್ಲಿ ಶಾಲೆ ಆರಂಭದ ದಿನಗಳಲ್ಲಿ ಪ್ರತೀ ವರ್ಷ ಕೌನ್ಸೆಲಿಂಗ್ ತರಗತಿ ನಡೆಸುತ್ತೇವೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಅಥವಾ ಸಂಪನ್ಮೂಲ ವ್ಯಕ್ತಿಗಳು ಬಂದು ಕೌನ್ಸೆಲಿಂಗ್ ನಡೆಸಿ ಕೊಡುತ್ತಾರೆ. ಇಂತಹ ಪ್ರಕರಣ ತಿಳಿದುಬಂದಲ್ಲಿ ವಿದ್ಯಾರ್ಥಿಯನ್ನು ಕರೆದು ಕೌನ್ಸೆಲಿಂಗ್‌ಗೆ ಒಳಪಡಿಸಲಾಗುತ್ತದೆ. ಹೆತ್ತವರಿಗೆ ಮಾಹಿತಿ ಯನ್ನು ನೀಡಲಾಗುವುದು. ಆದರೆ ನಮ್ಮ ಪ್ರದೇಶದ ಮಕ್ಕಳ ಅಪ್ಪಂದಿರು ಹೆಚ್ಚಾಗಿ ವಿದೇಶದಲ್ಲಿ ಇರುವುದರಿಂದ ಮನೆಯವರಿಗೆ ತಿಳಿಸಿದರೂ ಪ್ರಯೋಜನವಾಗುವುದು ಕಡಿಮೆ ಎನ್ನುತ್ತಾರೆ ಈ ಅಧ್ಯಾಪಕರು.