ಇನ್ನೂ ಹುಡುಗ. ದುಡಿಯುವ ಉಮ್ಮಸ್ಸು. ಅದಕ್ಕೆ ಅಪ್ಪ, ಅಮ್ಮ, ಪತ್ನಿಯ ಸಾಥ್. ಬಾಳೆಕಾಯಿ ಚಿಪ್ಸ್ ತಯಾರಿಸಿ ಮಾರುವುದು ಇವರು ಮಾಡುತ್ತಿದ್ದ ವೃತ್ತಿ. ಕೃಷಿಕರಾದರೂ ಚಿಪ್ಸ್‌ಗೆ ಬೇಕಾದ ಬಾಳೆಕಾಯಿ ಖರೀದಿಸುತ್ತಿದ್ದರು. ಆದರೆ, ಗುಣಮಟ್ಟ ಕೊರತೆ ಹಾಗೂ ಬೆಲೆ ಹೆಚ್ಚಿದ ಕಾರಣ ಬಾಳೆಯನ್ನು ನಾವೇ ಏಕೆ ಬೆಳೆಯಬಾರದು ಎಂದು ಯೋಚಿಸಿದರು. ಆನಂತರ ತಡಮಾಡಲಿಲ್ಲ. ಜಿ9 ಬಾಳೆ ತರಿಸಿ ಎಂಟು ವರ್ಷದ ಹಿಂದೆ ಬೇಸಾಯ ಮಾಡಿದರು. ಆಧುನಿಕ ಕ್ರಮ ಅನುಸರಿಸಿದರೂ ಬೆಳೆ ಕೈ ಕೊಟ್ಟಿತು. ತಳಿಯ ಸಮಸ್ಯೆಯಿಂದಲೇ ಗುಣಮಟ್ಟ ಬರಲೇ ಇಲ್ಲ. ಕಳೆದ ವರ್ಷ ಜಿ9 ಬಾಳೆಗೆ ದರ ತೀವ್ರ ಕುಸಿತ ಆಗಿತ್ತು. ಈಗ ಬೆಳೆದರೆ ಮುಂದೆ ದರ ಬಂದೀತು, ದರ ಇಲ್ಲ ಎಂದು ರೈತರು ಇದನ್ನು ಬೆಳೆಯುವುದಿಲ್ಲ ಹಾಗಾಗಿ, ನಾವೇ ಏಕೆ ಬೆಳೆಯಬಾರದು ಎಂದು ಆಲೋಚಿಸಿದರು. ಅದಕ್ಕೂ ಕಳೆದ ಜುಲೈನಲ್ಲಿ ಮುಹೂರ್ತ ಕೂಡಿ ಬಂತು.
ಈಗ ಇವರ ತೋಟ ನೋಡಬೇಕು. ಬಾಳೆಯ ಕೊಯ್ಲು ನಡೆಯುತ್ತಿದೆ. ದರವೂ ಕೇಜಿಗೆ 17-18 ರೂ. ಇದೆ. ಕಳೆದ ವರ್ಷ 1 ರೂ.ಗೆ ಕೇಳುವವರಿಲ್ಲದ ಬಾಳೆಗೆ ಈಗ ದುಪ್ಪಟ್ಟು ದುಪ್ಪಟ್ಟು ಬೆಲೆ. ತೋಟದಲ್ಲೂ ನಳ ನಳಿಸುವ ಬಾಳೆ ಗೊನೆಗಳು. ಬೆಳೆ ತೆಗೆದ ಮೊದಲ ವರ್ಷವೇ ಎಕರೆಗೆ ನಾಲ್ಕು ಲಕ್ಷ ರೂ.ಗೂ ಅಧಿಕ ಆದಾಯ. ಬಾಳೆಕಾಯಿ ಚಿಪ್ಸ್ ವಹಿವಾಟೂ ಜೋರು. ಅದರ ಅರ್ಥ ಡಬಲ್ ಧಮಾಕಾ.
ಶಿರಸಿಯಿಂದ ಹುಲೇಕಲ್ ಮಾರ್ಗದ ನೀರ್ನಳ್ಳಿ ಕತ್ತರಿಯ ಪಕ್ಕದಲ್ಲೇ ತಿರುಗಿ ಐವತ್ತು ಅಡಿ ತೆರಳಿದರೆ ಸಿಗುವುದು ಕಲಗಾರ. ಇಲ್ಲಿನ ಯುವ ರೈತ ಶ್ರೀಧರ ಹೆಗಡೆ ಅವರ ಈ ವರ್ಷದ ಯಶೋಗಾಥೆ ಇದು. ಅಪ್ಪ ಸೀತಾರಾಮ ಹೆಗಡೆ. ಓದಿದ್ದು ಬಿಎ ಹಾಗೂ ಡಿಪ್ಲಮಾ ಮುಗಿಸಿ ಮನೆಗೆ ಬಂದ ಹುಡುಗನಿಗೆ ಗ್ರಾಮೋದ್ಯೋಗದಲ್ಲಿ ಉಮೇದು. ಅಡಿಕೆ ತೋಟದ ಜೊತೆ ಚಿಪ್ಸ್ ಉದ್ದಿಮೆ ಆರಂಭ. ಈಗ ಶಿರಸಿ ಪೇಟೆ ದಾಟಿ, ಮಂಗಳೂರು, ಧಾರವಾಡ, ಬೆಂಗಳೂರು, ಹುಬ್ಬಳ್ಳಿಗಳಿಗೂ ಮಾರುಕಟ್ಟೆ ವಿಸ್ತಾರವಾಗಿದೆ. ಈ ಉದ್ಯಮಕ್ಕೆ ಬೇಕಿರುವದು ವರ್ಷಕ್ಕೆ ಟನ್ ಗಟ್ಟಲೇ ಬಾಳೆಕಾಯಿ.
ಈ ವರ್ಷ ಇವರ ತೋಟದಿಂದಲೇ ಬೆಳೆದ ಬಾಳೆಕಾಯಿ ಚಿಪ್ಸ್ ಆಗಿ ಮಾರುಕಟ್ಟೆಗೆ ತೆರಳುತ್ತದೆ. ಕಳೆದ ಒಂದು ವರ್ಷದಿಂದ ಹರಿಸಿದ ಬೆವರ ಹನಿಗೆ ಇದೀಗ ಬೆಲೆ ಬಂದಿದೆ. ಕಳೆದ ಜೂನ್‌ನಲ್ಲಿ ಇದ್ದ 6 ಎಕರೆ ಭತ್ತದ ಗದ್ದೆಯಲ್ಲಿ ನಾಲ್ಕೂವರೆ ಎಕರೆ ಭತ್ತದ ಗದ್ದೆ ಸಿಗಿದರು. ಕಾಲುವೆ ತೋಡಿದರು. ಆರಡಿ ಅಗಲದ ಕಾಲುವೆಯಲ್ಲಿ ಎರಡು ಅಡಿಗೆ, ಮೂರು ಅಡಿಗೆ ಒಂದರಂತೆ ಬಾಳೆ ಗಿಡ ನೆಟ್ಟರು. ಬನವಾಸಿಯ ಸಂದೀಪ ಅವರಿಂದ 1600 ಜಿ9 ಬಾಳೆ ಸಸಿ ತರಿಸಿಕೊಂಡರು. ಎಕರೆಗೆ 650 ಗಿಡಗಳು ಕುಳಿತವು. ಐದಡಿಗೆ ಬಳೆ ನೆಡುವುದು ವಾಡಿಕೆ. ಆದರೆ, 25-30 ಕೆ.ಜಿ ಬಾಳೆಗೊನೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಎಂದರಿತ ಶ್ರೀಧರ ಹೆಗಡೆ ಒತ್ತಟ್ಟಾಗಿ ಬಾಳೆ ನೆಟ್ಟು ಅಗತ್ಯ ಪೋಷಕಾಂಶ ಕೊಟ್ಟರು. ಈಗ ಬಾಳೆ ನಗುತ್ತಿದೆ. ಕಳೆದವರ್ಷದ ಜುಲೈ 19ಕ್ಕೆ ನಾಟಿ ಮಾಡಿದ್ದ ಬಾಳೆಯ ಪ್ರಥಮ ಕೊಯ್ಲು ಮುಗಿದಿದೆ.
ಎಷ್ಟು ಡಿಎಪಿ, ದಡ್ಡಿ ಗೊಬ್ಬರ ಕೊಡಬೇಕು, ಎಷ್ಟು ಪೋಟ್ಯಾಶ್ ಒದಗಿಸಬೇಕು? ನೀರು ಕಡಿಮೆ ಆಯಿತಾ? ಡ್ರಿಪ್ ವ್ಯವಸ್ಥೆ ಹೇಗೆ? ಎಂದೆಲ್ಲ ಶಂಕೆಗೆ ಶಿರಸಿಯ ಹಾರ್ಟಿ ಕ್ಲಿನಿಕ್‌ನ .ಎಂ.ಹೆಗಡೆ ಶಿಂಗನಮನೆ ಅವರು ಮಾಹಿತಿ ನೀಡಿದರು. ದಿನಕ್ಕೆ 25 ಲೀ. ನೀರು ಕೊಟ್ಟು, ಅಗತ್ಯ ಪೋಷಕಾಂಶಗಳನ್ನೂ ನೀಡಿದರು. ಬಾಳೆ ಗಿಡಕ್ಕೆ 15 ರೂ. ಕೊಟ್ಟು ಗೊಬ್ಬರ, ನಿರ್ವಹಣೆ ಸೇರಿ ಒಟ್ಟೂ 5 ಲಕ್ಷ ರೂ. ವ್ಯಯಿಸಿದ್ದಾರೆ. ಅಪ್ಪನ ಕೆಲಸ ನಿರಂತರವಾಗಿ ಬಾಳೆಯ ನಡುವೆ ನಡೆದಿದೆ ಎನ್ನುವ ಮಾತನ್ನೂ ಹೇಳಲು ಮರೆಯುವದಿಲ್ಲ ಶ್ರೀಧರ.
ಶ್ರೀಧರ ಅವರು ಒತ್ತಟ್ಟಾಗಿ ಬಾಳೆ ನಾಟಿ ಮಾಡಿದ್ದರಿಂದ ಶೇ.35ರಿಂದ 40ರಷ್ಟು ಬಾಳೆ ಕೊನೆಗಳೂ ಹೆಚ್ಚು. ನಿರಂತರ ಪೋಷಕಾಂಶಗಳನ್ನೂ ಕೊಟ್ಟಿದ್ದರಿಂದ ಇಳುವರಿಯಲ್ಲೂ ವ್ಯತ್ಯಾಸ ಆಗಿಲ್ಲ. ಗಾಳಿಗೆ ಬೀಳುವ ಮರಗಳ ಸಂಖ್ಯೆ ಕೂಡ ಕಡಿಮೆ ಎಂಬುದು ಇವರ ಅನುಭವದ ಮಾತು.
ಬಾಳೆಕಾಯಿ ಸಿಪೆುದ ಹಾಲಿನ ಇಳುವರಿ ಕೂಡ ಹೆಚ್ಚಳವಾಗಿದೆ. ಜಾನುವಾರುಗಳಿಂದ ಗೊಬ್ಬರ ಜಾಸ್ತಿ. ವರ್ಷಕ್ಕೆ 20 ಟ್ರ್ಯಾಕ್ಟರ್ ಗೊಬ್ಬರ ಖರೀದಿಸುವುದೂ ತಪ್ಪಿದೆ ಎನ್ನುವಾಗ ಶ್ರೀಧರ ಮೊಗದಲ್ಲಿ ನಗು ಕಾಣುತ್ತದೆ.
ರಾಘವೇಂದ್ರ, ಬೆಟ್ಟಕೊಪ್ಪ