ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವಾರದಿಂದ ತರಕಾರಿ ಬೆಲೆ ಗಗನಮುಖಿ ಆಗುತ್ತಿದ್ದು, ಬೆಲೆ ಏರಿಕೆ ಬಿಸಿಗೆ ಗ್ರಾಹಕರನ್ನ ಕಂಗಾಲಾಗುವಂತೆ ಮಾಡಿದೆ. ಬರದ ಪರಿಣಾಮ ಜಿಲ್ಲಾದ್ಯಂತ ತರಕಾರಿಗಳ ಉತ್ಪಾದನೆ ಯಲ್ಲಿ ಭಾರೀ ಇಳಿಮುಖ ಕಂಡಿದ್ದು ಬೆಲೆ ಏರು ಮುಖವಾಗಲು ಕಾರಣವಾಗಿದೆ.
ಜಿಲ್ಲಾದ್ಯಂತ ವಾಡಿಕೆ ಮಳೆ ಶೇ.85 ರಷ್ಟು ಕೊರತೆ ಆಗಿರುವ ಪರಿಣಾಮ ರಾಗಿ, ಶೇಂಗಾ, ತೊಗರಿ, ಅಲಸಂದಿ, ಅವರೆ, ಜೋಳ ಮತ್ತಿತರ ಕೃಷಿ ಬೆಳೆಗಳು ಸಂಪೂರ್ಣ ಶೇ.90ರಷ್ಟು ಹಾನಿಯಾಗಿವೆ. ಇದೀಗ ಜಿಲ್ಲೆಯಲ್ಲಿ ತರಕಾರಿ ಬೆಳೆಗಳಿಗೂ ಕೂಡ ಬರ ತಟ್ಟಿದ್ದು ಸದ್ದಿಲ್ಲದೇ ಏರಿಕೆ ಆಗುತ್ತಿರುವ ತರಕಾರಿ ಬೆಲೆ ಗ್ರಾಹಕರ ಕೈ ಸುಡುತ್ತಿದೆ.
ತರಕಾರಿ ಉತ್ಪಾದನೆ ಕುಸಿತ: ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ತರಕಾರಿ ಬೆಲೆ ಏರಿಕೆ ಆಗುವುದು ಅಪರೂಪ, ಏಕೆಂದರೆ ಮಳೆಗಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೈತರು ತರಕಾರಿ ಬೆಳೆಯುತ್ತಾರೆ. ಜೊತೆಗೆ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಕೂಡ ಮನೆಗೆ ಬೇಕಾದ ತರಕಾರಿ ಬೆಳೆಗಳನ್ನು ಬಿತ್ತನೆ ಮಾಡಿ ಬೆಳೆಯುತ್ತಾರೆ. ಇದರಿಂದ ಮಳೆಗಾಲದಲ್ಲಿ ತರಕಾರಿ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ. ಆದರೆ ಪರಿಸ್ಥಿತಿ ಈಗ ಸಂಪೂರ್ಣ ವಿರುದ್ಧವಾಗಿದ್ದು, ಮಳೆ ಕೊರತೆ ಪರಿಣಾಮ ಜಿಲ್ಲೆಯಲ್ಲಿ ತರಕಾರಿ ಉತ್ಪಾದನೆಯಲ್ಲಿ ತೀವ್ರ ಕುಸಿತದ ಪರಿಣಾಮ ಮಾರುಕಟ್ಟೆಯಲ್ಲಿ ಬೀನ್ಸ್, ಆಲೂಗಡ್ಡೆ, ಮೂಲಂಗಿ, ಕ್ಯಾರೆಂಟ್, ಹಾಗಲಕಾಯಿ, ಹಸಿ ಮೆಣಸಿಣಕಾಯಿ ಬೆಲೆ ಮತ್ತೆ ಗಗನಮುಖೀಯಾಗಿದ್ದು ಕೆಜಿ 40, 50 ರೂ. ಅಸುಪಾಸಿಗೆ ಬಂದು ನಿಂತಿದೆ. ಸದ್ಯ ಮಾರುಕಟ್ಟೆಯಲ್ಲಿ ಟೊಮೇಟೊ ಮಾತ್ರ ಕೆಜಿ 10 ರೂ. ಸಿಗುತ್ತಿರುವುದು ಬಿಟ್ಟರೆ, ಉಳಿದೆಲ್ಲಾ ತರಕಾರಿ ಬೆಳೆಗಳು ತನ್ನ ಬೆಲೆ ಹೆಚ್ಚಿಸಿಕೊಂಡು ಗ್ರಾಹಕರನ್ನು ಚಿಂತೆಗೀಡು ಮಾಡಿದ್ದು, ತರಕಾರಿ ದರ ಸಮರಕ್ಕೆ ಈಗ ಅಕ್ಕಿ, ಬೇಳೆ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ.
ಕೊತ್ತಂಬರಿ ಸೊಪ್ಪು ಕಟ್ಟು 200 ರೂ.: ಮಾರುಕಟ್ಟೆಯಲ್ಲಿ ತರಕಾರಿ ಬೆಳೆಗಳ ಬೆಲೆಗಿಂತ ವಿವಿಧ ಸೊಪ್ಪುಗಳ ಬೆಲೆ ಕೂಡ ದುಪ್ಪಟ್ಟುಗೊಂಡಿದೆ. ದಂಟು, ಪಾಲಾಕ್, ಮಿಂತ್ಯೆ, ಅರವೆ, ಸಬ್ಬಕ್ಕಿ ಮತ್ತಿತರ ಸೊಪ್ಪುಗಳ ಬೆಲೆ ಕಟ್ಟು 25 ರಿಂದ 30ರ ರುಗೆ ಮಾರಾಟವಾಗುತ್ತಿವೆ. ಕೊತ್ತಂಬರಿ ಸೊಪ್ಪ ಕಟ್ಟು ಸದಸ್ಯ 200 ರೂ. ಗಡಿ ದಾಟಿದೆ. ತರಕಾರಿ ಬೆಲೆ ಹೆಚ್ಚಾಗಿದೆಯೆಂದು ಸೊಪ್ಪು ಖರೀದಿ ಮಾಡುವರಿಗೂ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಮಾರುಕಟ್ಟೆಗೆ ಬೇಡಿಕೆಗೆ ತಕ್ಕಂತೆ ತರಕಾರಿ ಬರುತ್ತಿಲ್ಲ ಎನ್ನುವ ಮಾತು ತರಕಾರಿ ಮಾರುವ ಚಿಲ್ಲರೆ ವ್ಯಾಪಾರಸ್ಥರಿಂದ ಕೇಳಿ ಬರುತ್ತಿದೆ. ಇದರಿಂದ ತರಕಾರಿ ಬೆಲೆ ವಾರದಿಂದ ಗಗನಮುಖೀಯಾಗಿ ಗ್ರಾಹಕರನ್ನು ಕಂಗಾಲಾಗಿಸಿದೆ. ಕೆಜಿ ಶುಂಠಿ 250, ಈರುಳ್ಳಿ 40 ರೂ. ಕೆಜಿ: ಜಿಲ್ಲೆಯಲ್ಲಿ ಮಳೆ ಕೊರತೆ ಹಿನ್ನಲೆಯಲ್ಲಿ ಬರ ಆವರಿಸಿರುವ ಪರಿಣಾಮ ಮಾರುಕಟ್ಟೆಯಲ್ಲಿ ಮತ್ತೆ ಶುಂಠಿ ಬೆಲೆ ಗಗನಕ್ಕೇರುತ್ತಿದೆ. ತಿಂಗಳ ಹಿಂದೆ 300ರಿಂದ 350 ರೂ. ಗಡಿ ದಾಟಿದ್ದ ಶುಂಠಿ ಕೆಜಿ ಹಲವು ದಿನಗಳ ಹಿಂದೆ ಕುಸಿದಿತ್ತು. ಈಗ ಮತ್ತೆ ಶುಂಠಿ ಬೆಲೆ ಏರಿಕೆ ತೊಡಗಿದೆ. ಗುಣಮಟ್ಟದ ಶುಂಠಿ ಮಾರುಕಟ್ಟೆಗೆ ಬರುತ್ತಿಲ್ಲ. ಇರುವ ಶುಂಠಿ ಬೆಲೆಯೆ ಕೆಜಿ 250 ರೂಗೆ ಮಾರಾಟ ಆಗುತ್ತಿದೆ. ಇನ್ನೂ ಈರುಳ್ಳಿ ಬೆಲೆ ಕೂಡ ಕೆಜಿ 40 ರೂಗೆ ಮಾರಾಟ ಆಗುತ್ತಿದೆ. 25 ರಿಂದ 30 ರೂ. ಅಸುಪಾಸಿನಲ್ಲಿದ್ದ ಈರುಳ್ಳಿ ಮತ್ತೆ ಬೆಲೆ ಹೆಚ್ಚಿಸಿಕೊಂಡು ಗ್ರಾಹಕರಲ್ಲಿ ಕಣ್ಣೀರು ತರಿಸುತ್ತಿದೆ. ಬೆಳ್ಳುಳ್ಳಿ ಸದ್ಯ ಮಾರುಕಟ್ಟೆಯಲ್ಲಿ ಕೆಜಿ 200 ರೂ. ಇದೆ.
ಬೆಳೆಗ್ಗೆ 5 ಗಂಟೆಗೆ ಮಾರುಕಟ್ಟೆಗೆ ಹೋದರೆ ಮಾತ್ರ ಖರೀದಿಗೆ ತರಕಾರಿ ಸಿಗುತ್ತೆ, ಸ್ವಲ್ಪ ತಡವಾದರೂ ತರಕಾರಿ ಸಿಗುತ್ತಿಲ್ಲ. ಮಳೆ ಕೊರತೆಯಿಂದ ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ. ಟೊಮೇಟೊ ಬಿಟ್ಟರೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಸೇರಿದಂತೆ ಸೊಪ್ಪು, ತರಕಾರಿ ಬೆಳೆಗಳು ಏರಿಕೆ ಆಗುತ್ತಿವೆ.
– ಶ್ರೀನಾಥ್, ತರಕಾರಿ ವ್ಯಾಪಾರಿ, ಚಿಕ್ಕಬಳ್ಳಾಪುರ.
– ಕಾಗತಿ ನಾಗರಾಜಪ್ಪ