Advertisement

ವೈಶಾಖದಲ್ಲಿ ನೀರಿಗೆ ಬರ; ಮಳೆಗಾಲದಲ್ಲಿ ನೆರೆ!

10:34 PM Apr 10, 2021 | Team Udayavani |

ಮಳೆಗಾಲದಲ್ಲಿ ನೆರೆಯ ಹಾವಳಿ ವೈಶಾಖದಲ್ಲಿ ನೀರಿಲ್ಲದೆ ಪರದಾಟ… ಇದು ನಾವುಂದ ಗ್ರಾಮದ ಸೌಪರ್ಣಿಕಾ ನದಿ ತೀರದ ಸಾಲ್ಬುಡಾ, ಬಾಂಗ್‌, ಕುದ್ರು, ಕೆಳಾಬದಿ ಪ್ರದೇಶದಲ್ಲಿ ರೈತರು ವರ್ಷವೂ ಅನುಭವಿಸುವ ವೈರುಧ್ಯದ ಪರಿಸ್ಥಿತಿ.

Advertisement

ಕುಂದಾಪುರ: ಮಳೆಗಾಲದಲ್ಲಿ ನಿರಂತರ ಮಳೆಯಿಂದಾಗಿ ವಾರಗಟ್ಟಲೆ ಗದ್ದೆ, ಇನ್ನಿತರ ಕೃಷಿ ಭೂಮಿ, ಮನೆಯಂಗಳವೆಲ್ಲ ನೆರೆಗೆ ತುತ್ತಾದರೆ, ಈಗ ಬೇಸಗೆಯಲ್ಲಿ ನೀರಿಲ್ಲದೆ ಭತ್ತದ ಗದ್ದೆಗಳೆಲ್ಲ ಹಡಿಲು ಬಿಡಬೇಕಾದ ಸ್ಥಿತಿ ಉಂಟಾಗಿದೆ.

ಪ್ರತಿ ವರ್ಷದ ಮಳೆಗಾಲ ದಲ್ಲಿ ಸಾಲುºಡಾ ಭಾಗದಲ್ಲಿ ನಾಟಿ ಮಾಡಿದ ನೂರಾರು ಎಕರೆ ಗದ್ದೆ ನೆರೆಗೆ ತುತ್ತಾಗುತ್ತವೆ. ವಾರಗಟ್ಟಲೆ ನೆರೆ ನೀರು ನಿಂತು, ಭತ್ತದ ಪೈರೆಲ್ಲ ಕೊಳೆತು ಹೋಗುತ್ತವೆ. ನಾಟಿಯೆಲ್ಲ ಮಾಡಿ, ಕಟಾವು ಮಾಡುವ ಸಮಯದಲ್ಲಿ ಏನು ಸಿಗದ ಪರಿಸ್ಥಿತಿ ಇಲ್ಲಿನ ಕೃಷಿಕರದ್ದಾಗಿದೆ. ಇನ್ನು ಮುಂಗಾರಲ್ಲಿ ಆದ ನಷ್ಟವನ್ನು ಸುಗ್ಗಿಯಲ್ಲಾದರೂ ಸರಿ ಮಾಡಿಕೊಳ್ಳುವ ಅಂದರೆ, ಎರಡನೇ ಬೆಳೆ ಬೆಳೆಯಲು ನೀರೆ ಇರುವುದಿಲ್ಲ.

ಒಂದೇ ಬೆಳೆ – ಅದೂ ಸಿಗುವುದಿಲ್ಲ…
ಸಾಲ್ಬುಡಾ, ಕೆಳಾಬದಿ, ಕುದ್ರು, ಬಾಂಗ್‌ ಪ್ರದೇಶಗಳು ನದಿಯ ತೀರದಲ್ಲೇ ಇದ್ದರೂ, ಇಲ್ಲಿ ಬೆಳೆಯುವುದು ಕೇವಲ ಒಂದೇ ಬೆಳೆ. ಸುಮಾರು 200ರಿಂದ 250 ಎಕರೆ ಗದ್ದೆ ಪ್ರದೇಶವಿದೆ. ಮುಂಗಾರಲ್ಲಿ ಬೆಳೆ ಬೆಳೆದರೂ, ನೆರೆಗೆ ತುತ್ತಾಗಿ ಸಿಕ್ಕಿದ್ದಷ್ಟೇ ಲಾಭ ಅನ್ನುವ ಪರಿಸ್ಥಿತಿ. ಇನ್ನು ಸುಗ್ಗಿಯಲ್ಲಿ ಈ ಬಾರಿ ವ್ಯವಸಾಯ ಮಾಡಿದ್ದು ಒಬ್ಬರು ಮಾತ್ರ. ಇನ್ನುಳಿದವರ್ಯಾರೂ ನೀರಿಲ್ಲದೆ ಬೇಸಾಯ ಮಾಡುವ ಧೈರ್ಯ ಮಾಡಿಲ್ಲ. ಕೆಲವೆಡೆಗಳಲ್ಲಿ ನೀರಿದ್ದರೂ ಉಪ್ಪು ನೀರಿನ ಅಂಶ ಜಾಸ್ತಿಯಿದೆ. ಇದು ಈ ವರ್ಷದ ಕಥೆ ಮಾತ್ರವಲ್ಲ. ಕಳೆದ 5-6 ವರ್ಷಗಳಿಂದ ಇದೇ ಕಥೆ. ಇಲ್ಲಿನ ರೈತರು ಪ್ರತಿ ವರ್ಷ ನೂರಾರು ಎಕರೆ ಗದ್ದೆಗಳನ್ನು ಹಡಿಲು ಬಿಟ್ಟು ಕೂರುವಂತಾಗಿದೆ. ಹಿಂದೆ ಕಲ್ಲಂಗಡಿ, ನೆಲಗಡಲೆ, ಅಲಸಂಡೆ, ಉದ್ದು ಸಹಿತ ಅನೇಕ ಬೆಳೆಗಳನ್ನು ಮಾಡುತ್ತಿದ್ದರು.

ನದಿ ದಂಡೆಗೆ ಪ್ರಯತ್ನ
ಪ್ರತಿ ಮಳೆಗಾಲದಲ್ಲಿ ತೊಂದರೆಗೆ ತುತ್ತಾಗುವ ನಾವುಂದದ ಸಾಲ್ಬುಡಾ, ಕುದ್ರು, ಕುರು, ಯಡ್ತರೆಯ ಪ್ರದೇಶ ಸೇರಿದಂತೆ ಸಾಕಷ್ಟು ಕಡೆ ನೆರೆ ಉಂಟಾಗುವ ಜಾಗಗಳನ್ನು ಗುರುತಿಸಲಾಗಿದ್ದು, ಅಲ್ಲಿ ನದಿ ದಂಡೆ ಸಂರಕ್ಷಣೆ ನಿರ್ಮಿಸಿ, ಜನರಿಗೆ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಆದಷ್ಟು ಬೇಗ ಈ ಕುರಿತಂತೆ ಅಂದಾಜು ಪಟ್ಟಿ ತಯಾರಿಸಿ, ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು.

Advertisement

– ಬಿ.ವೈ. ರಾಘವೇಂದ್ರ, ಸಂಸದರು

ಎಲ್ಲರಿಗೂ ಮನವಿ
ಸಾಲ್ಬುಡಾ, ಕೆಳಾಬದಿ ಭಾಗದಲ್ಲಿ ನದಿ ದಂಡೆ ನಿರ್ಮಿಸಬೇಕು ಎನ್ನುವುದಾಗಿ ಕಳೆದ ಹಲವು ವರ್ಷಗಳಿಂದ ಸಂಬಂಧಪಟ್ಟ ಎಲ್ಲ ಶಾಸಕರು, ಸಂಸದರು, ಸಚಿವರಿಗೂ ಮನವಿ ಸಲ್ಲಿಸಿದ್ದೇವೆ. ಮಳೆಗಾಲದಲ್ಲಿ ದ್ವೀಪದಂತಾಗುತ್ತದೆ. ಆಗ ಇಲ್ಲಿಗೆ ಬರುವ ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ಕೊಟ್ಟು ಹೋಗುತ್ತಾರೆ. ಮತ್ತೆ ಬರುವುದು ಮತ್ತೂಂದು ವರ್ಷದ ನೆರೆಗೆ. ಆದರೆ ಭರವಸೆ ಮಾತ್ರ ಈಡೇರುವುದೇ ಇಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗರಾದ ಸುರೇಶ್‌ ಹಾಗೂ ಅರುಣ್‌.

ನದಿ ಕೊರೆತದಿಂದ ಭೀತಿ
ನಾವುಂದ ಗ್ರಾಮದ ಸಾಲ್ಬುಡಾ, ಕೆಳಾಬದಿ, ಶಿವಾಜಿ ಸರ್ಕಲ್‌, ಬಾಂಗ್‌, ಕುದ್ರು ಸೇರಿದಂತೆ ಒಟ್ಟಾರೆ ಈ ಪ್ರದೇಶದಲ್ಲಿ 120 ರಿಂದ 150 ಮನೆಗಳಿವೆ. ಅದರಲ್ಲೂ 75 ಮನೆಗಳು ಈ ಸೌಪರ್ಣಿಕಾ ನದಿ ತೀರಕ್ಕೆ ಹೊಂದಿಕೊಂಡೇ ಇದೆ. ವರ್ಷದಿಂದ ವರ್ಷಕ್ಕೆ ನದಿ ಕೊರೆತ ತೀವ್ರಗೊಳ್ಳುತ್ತಿದ್ದು ತೀರದ ನಿವಾಸಿಗಳು ಆತಂಕದಲ್ಲಿದ್ದಾರೆ. ಕಳೆದ 2-3 ವರ್ಷಗಳಲ್ಲಿ ಈ ಕೊರೆತದ ಪ್ರಮಾಣ ಜಾಸ್ತಿಯಾಗಿದೆ. ಅದರಲ್ಲೂ ಬಂಟ್ವಾಡಿ ಕಿಂಡಿ ಅಣೆಕಟ್ಟು ಆದ ಬಳಿಕ, ಈ ಭಾಗದಲ್ಲಿ ನೀರು ನಿಲ್ಲುವ ಪ್ರಮಾಣ ಜಾಸ್ತಿಯಾಗಿ, ನದಿ ಕೊರೆತ ಹೆಚ್ಚಾಗಿದೆ ಎನ್ನುವುದು ಸ್ಥಳೀಯರ ವಾದ. ಸಾಲುºಡಾದ ರೈಲು ಹಳಿ ಬಳಿಯಿಂದ ಕೆಳಾಬದಿಯವರೆಗೆ ಸುಮಾರು ಒಂದೂವರೆ ಕಿ.ಮೀ.ವರೆಗೆ ನದಿ ದಂಡೆ ನಿರ್ಮಿಸಿದರೆ ಈ ಎಲ್ಲ ಸಮಸ್ಯೆಗೆ ಪರಿಹಾರ ಸಿಗಬಹುದು.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next