Advertisement

ಮೀನಿಗೆ ಬರ: ಗಗನಕ್ಕೆ ಏರುತ್ತಿದೆ ದರ

01:00 AM Feb 01, 2019 | Harsha Rao |

ಕುಂದಾಪುರ: ಮತ್ಸ ಕ್ಷಾಮದಿಂದಾಗಿ ಮೀನಿನ ದರ ಗಗನಕ್ಕೇರುತ್ತಿದೆ. ದಿನನಿತ್ಯ ಹೆಚ್ಚು ಬಳಕೆಯಾಗುವ, ಅಧಿಕ ಬೇಡಿಕೆ ಯಿರುವ ಬಂಗುಡೆ, ಬೂತಾಯಿಗಳ ದರ ಹೆಚ್ಚಾಕಡಿಮೆ ದುಪ್ಪಟ್ಟಾಗಿದೆ. 

Advertisement

ಡಿಸೆಂಬರ್‌ಗಿಂತ ಮೊದಲು 1 ಕೆಜಿಗೆ 80 ರೂ. ಇದ್ದ ಬೂತಾಯಿ (ಬೈಗೆ) ಮೀನಿಗೆ ಈಗ 130ರಿಂದ 150 ರೂ. ಅದೇ ರೀತಿ ಬಂಗುಡೆಗೆ ಕೆಜಿಗೆ 100 ರೂ. ಇದ್ದರೆ, ಈಗ 225- 250 ರೂ.ಗಳಲ್ಲಿ ಹೊರ ರಾಜ್ಯಗಳಿಗೆ ರಫ್ತಾಗುತ್ತಿದೆ; ರಾಜ್ಯದ ಮಾರುಕಟ್ಟೆಯಲ್ಲಿ ಅದಕ್ಕೆ ಕೆಜಿಗೆ 170 – 180 ರೂ. ವರೆಗೆ ರೇಟು. 

ದರ ಏರಿಕೆಗೆ ಕಾರಣವೇನು?
ದೇಶದ ಎಲ್ಲ ಬಂದರುಗಳಲ್ಲಿ ಮೀನಿನ ಕೊರತೆ ದರ ಏರಿಕೆಗೆ ಪ್ರಮುಖ ಕಾರಣ. ಪ್ರತಿಕೂಲ ಹವಾಮಾನ, ಸಮುದ್ರದಲ್ಲಿ ಮೀನಿನ ಪ್ರಮಾಣ ಕಡಿಮೆ ಇರುವುದು ಪ್ರಧಾನ ಕಾರಣ. ಕೇರಳ, ತಮಿಳುನಾಡುಗಳಲ್ಲಿ ಸಿಗುವ ಮೀನಿನ ಪ್ರಮಾಣ ಕಡಿಮೆ ಯಾಗಿರುವುದರಿಂದ ರಾಜ್ಯದ ಕಾರವಾರ, ಮಲ್ಪೆ, ಹೆಜಮಾಡಿ, ಗಂಗೊಳ್ಳಿ, ಮಂಗಳೂರಿನಿಂದ ಅಲ್ಲಿಗೆ ಹೆಚ್ಚು ಮೀನು ರವಾನೆಯಾಗುತ್ತಿದೆ. 

ಕೇರಳದಲ್ಲಿ ರಾಜ್ಯದ ಮೀನಿಗೆ ಭಾರೀ ಬೇಡಿಕೆ ಇದ್ದು, ಕರಾವಳಿಯಲ್ಲಿ ಸಿಕ್ಕ ಬಹುತೇಕ ಮೀನು ಅಲ್ಲಿಗೆ ರಫ್ತಾಗುತ್ತಿದೆ. ಇದರ ಪರಿಣಾಮ ತಟ್ಟಿರುವುದು ಇಲ್ಲಿನ ಮೀನು ಮಾರುಕಟ್ಟೆಗೆ. ಜತೆಗೆ, ನಮ್ಮಲ್ಲೂ ಈ ಬಾರಿ ಮೀನಿನ ಕೊರತೆ ಎದುರಾಗಿದೆ. ಹಿಂದಿನ ವರ್ಷಗಳಲ್ಲಿ ಸಿಗುತ್ತಿದ್ದಷ್ಟು ಮೀನು ಈಗ ಸಿಗುತ್ತಿಲ್ಲ ಎನ್ನುವುದು ಗಂಗೊಳ್ಳಿಯ ಪರ್ಸಿನ್‌ ಮೀನುಗಾರರ ಸಹಕಾರ ಸಂಘದ ರಮೇಶ್‌ ಕುಂದರ್‌ ಅಭಿಪ್ರಾಯ.

ತರಕಾರಿ ದರ ಇಳಿಕೆ
ಮೀನಿನ ದರ ಏರಿಕೆಯಾಗು ವುದರ ಜತೆಗೆ ಕೋಳಿ ಮಾಂಸಕ್ಕೂ ಬೇಡಿಕೆ ಹೆಚ್ಚಿರುವುದರಿಂದ ಅದರ ದರವೂ ಏರಿಕೆಯಾಗು ತ್ತಿದೆ. ತರಕಾರಿ ದರ ಇಳಿಮುಖ ವಾಗುತ್ತಿರುವುದು ಸಮಾಧಾನದ ವಿಷಯ. ಎಲ್ಲ ಬಗೆಯ ತರಕಾರಿಗಳು ಈಗ ಹೇರಳ ಉತ್ಪಾದನೆಯಾಗುತ್ತಿವೆ. 140 ರೂ. ಇದ್ದ ನುಗ್ಗೆಕಾಯಿಗೆ ಈಗ 80 ರೂ., 25-30 ರೂ. ಇದ್ದ ಸೌತೆಗೆ ಈಗ 15 ರೂ., ಅಲಸಂಡೆಗೆ 40 ರೂ., ಟೋಮೆಟೋ 24 ರೂ., ಬೀನ್ಸ್‌ಗೆ 40 ರೂ., ಬೆಂಡೆಕಾಯಿ 40 ರೂ., ಬಿಟ್ರೋಟ್‌ 26 ರೂ. ಇದೆ. ಅಲ್ಪಸ್ವಲ್ಪ ಏರಿಳಿಕೆ ಬಿಟ್ಟರೆ ಬಹುತೇಕ ಅಗ್ಗವೇ. ಊರಿನ ತರಕಾರಿ ಮಾರು ಕಟ್ಟೆಗೆ ಬರಲು ಆರಂಭವಾಗಿರುವ ಕಾರಣ ಬೆಲೆ ಕಡಿಮೆಯಾಗುತ್ತಿದೆ. 

Advertisement

 – ಗಣೇಶ್‌ ಕುಂದಾಪುರ, ತರಕಾರಿ ವ್ಯಾಪಾರಸ್ಥರು 

ಕೊರತೆಯಿಂದ ದರ ಹೆಚ್ಚಳ
ಎಲ್ಲಿಯೂ ಅಗತ್ಯವಿರುವಷ್ಟು ಮೀನು ಸಿಗುತ್ತಿಲ್ಲ. ನಾಡದೋಣಿ, ಟ್ರಾಲರ್‌, ಪರ್ಸಿನ್‌ ಹೀಗೆ ಎಲ್ಲ ವಿಧದ ಬೋಟುಗಳಿಗೂ ಸಿಗುವ ಮೀನಿನ ಪ್ರಮಾಣ ಕಡಿಮೆಯಾಗಿದೆ. ಕರಾವಳಿಯಲ್ಲಿ ಸಿಗುವ ಅಲ್ಪ ಮೀನಿಗೆ ಎಲ್ಲೆಡೆಯಿಂದ ಭಾರೀ ಬೇಡಿಕೆ ಬರುತ್ತಿದೆ. ಹೀಗಾಗಿ ದರ ಏರಿಕೆಯಾಗಿದೆ. 
– ನಾಗ ಖಾರ್ವಿ, ಅಧ್ಯಕ್ಷರು, ಗಂಗೊಳ್ಳಿ ಮೀನುಗಾರರ ಸಹಕಾರ ಸಂಘ 

Advertisement

Udayavani is now on Telegram. Click here to join our channel and stay updated with the latest news.

Next