Advertisement
ಜೇವರ್ಗಿ ತಾಲೂಕಿನ ಯಾಳವಾರ ಗ್ರಾಪಂ ವ್ಯಾಪ್ತಿಯ ಕುಡಚಿ ಗ್ರಾಮದಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿರುವ ಕುಡಚಿ ನಾಲಾ ಹೂಳೆತ್ತುವ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಲಬುರಗಿ ವಿಭಾಗದ ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಸಂಪೂರ್ಣ ಬೆಳೆಹಾನಿಯಾಗಿದೆ ಎಂದರು.
Related Articles
Advertisement
ಈಗಾಗಲೇ ಕುಡಿಯುವ ನೀರಿನ ತೊಂದರೆ ನೀಗಿಸಲು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಗಳಿಗೆ ತಲಾ ಒಂದು ಕೋಟಿ ರೂ.ನಂತೆ ಅನುದಾನ ನೀಡಲಾಗಿದೆ. ಕುಡಿಯುವ ನೀರಿನ ಕಾಮಗಾರಿಗಳನ್ನು ಟಾಸ್ಕ್ಫೋರ್ಸ್ ಸಮಿತಿಯಿಂದ ಆದ್ಯತೆ ಮೇರೆಗೆ ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಕಂಡು ಬಂದಲ್ಲಿ ಅವಶ್ಯಕವಿದ್ದ ಕಡೆ ಮೇವು ಬ್ಯಾಂಕ್ ತೆರೆಯಲು ಸರ್ಕಾರ ಸಿದ್ಧವಿದೆ. ರೈತರು ಯಾವುದೇ ಕಾರಣಕ್ಕೂ ಬರಕ್ಕೆ ಎದೆಗುಂದಿ ತಮ್ಮ ಜಾನುವಾರುಗಳನ್ನು ಮಾರಿಕೊಳ್ಳಬಾರದು ಎಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಈಗಾಗಲೇ 77 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಕಳೆದ 15 ದಿನಗಳಿಂದ ಕಾಮಗಾರಿಗಳನ್ನು ಹೆಚ್ಚಾಗಿ ಪ್ರಾರಂಭಿಸಿದ್ದು, ಸುಮಾರು 23 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳಿಗಾಗಿ ಕಳೆದ ವರ್ಷದ 853 ಕೋಟಿ ರೂ. ಸೇರಿದಂತೆ ಒಟ್ಟು ಈ ವರೆಗೆ 1800 ಕೋಟಿ ರೂ.ಗಳನ್ನು ರಾಜ್ಯಕ್ಕೆ ನೀಡಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವ 958 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ವಾಹನಗಳ ಪರವಾನಗಿ ರದ್ದುಗೊಳಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಕ್ರಮ ಪಡಿತರ ಚೀಟಿ, ಅಕ್ರಮವಾಗಿ ವಸತಿ ನಿಲಯಗಳಲ್ಲಿ ವಾಸಿಸುವವರನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಉದ್ಯೋಗ ಖಾತ್ರಿ ಕೂಲಿಕಾರರೊಂದಿಗೆ ಚರ್ಚಿಸಿದ ಸಚಿವದ್ವಯರು 150 ಮಾನವ ದಿನಗಳನ್ನು ಪೂರೈಸುವವರಿಗೂ ಸಹ ಹೆಚ್ಚಿನ ದಿನಗಳಿಗೆ ಕೂಲಿ ನೀಡಲು ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಕೂಲಿ ಹಣವನ್ನು ಆದಷ್ಟು ಬೇಗ ನಿಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಸಲಾಗುವುದು. ಕಾರಣ ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ರೈತರಿಗೆ ಭರವಸೆ ನೀಡಿದರು.
ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಬಿ. ಪಾಟೀಲ, ಶಾಸಕರಾದ ಡಾ| ಅಜಯಸಿಂಗ್, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಪಂ ಸಿಇಒ ಡಾ| ಪಿ. ರಾಜಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಿತೇಂದ್ರ ಸುಗೂರ ಈ ಸಂದರ್ಭದಲ್ಲಿದ್ದರು.
ನಂತರ ಸಮಿತಿಯು ಜೇವರ್ಗಿ ತಾಲೂಕಿನ ಔರಾದ, ಕಲಬುರಗಿ ತಾಲೂಕಿನ ಫಿರೋಜಾಬಾದ, ಸರಡಗಿ, ಹಾಗರಗುಂಡಗಿ ಗ್ರಾಮಗಳಿಗೆ ಭೇಟಿ ನೀಡಿ ಮಳೆ ಅಭಾವದಿಂದ ಹಾನಿಗೊಳಗಾದ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಸಮುದಾಯ ಕಾಮಗಾರಿ ಕ್ಷೇತ್ರಗಳಿಗೆ ಭೇಟಿ ನೀಡಿತು.
ಖಾತ್ರಿ ಹಣ ಪಾವತಿಗೆ ಪರ್ಯಾಯ ವ್ಯವಸ್ಥೆಕಲಬುರಗಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರ ಎರಡು ತಿಂಗಳಿಂದ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಪರ್ಯಾಯ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ ಎಂದು ಬರ ಅಧ್ಯಯನ ಸಂಪುಟ ಉಪ ಸಮಿತಿ ಅಧ್ಯಕ್ಷ, ಸಹಕಾರ ಸಚಿವ ಬಂಡೆಪ್ಪ ಖಾಶೆಂಟuರ ತಿಳಿಸಿದರು. ಉದ್ಯೋಗ ಖಾತ್ರಿ ಕೂಲಿ ಹಣ ಬಿಡುಗಡೆಗೆ ಒತ್ತಾಯಿಸಿ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಿರತ ಕೂಲಿ ಮಹಿಳಾ ಕಾರ್ಮಿಕರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಬರ ಅಧ್ಯಯನ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಸಂಕಟ ಕಂಡು ನಮಗೂ ಸಂಕಟವಾಗುತ್ತಿದೆ. ಬರದ ಭೀಕರತೆ ವಾಸ್ತವ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನದಟ್ಟು ಮಾಡಿಕೊಳ್ಳಲಾಗಿದ್ದು, ಕೂಲಿ ಕಾರ್ಮಿಕರಿಗೆ ನೆರವಾಗಲು ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಅಭಯ ನೀಡಿದರು. ಉದ್ಯೋಗ ಖಾತ್ರಿಯಡಿ ದುಡಿದ ಕಾರ್ಮಿಕರಿಗೆ ಕೂಲಿ ನೀಡಲು 500 ಕೋಟಿ ರೂ. ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ. ರಾಜ್ಯ ಸರ್ಕಾರಗಳು ಉದ್ಯೋಗ ಖಾತ್ರಿಗೆ ನೇರವಾಗಿ ಅನುದಾನ ನೀಡಲು ಅವಕಾಶ ಇಲ್ಲದೇ ಇರುವ ಕಾರಣ ಯಾವ ವ್ಯವಸ್ಥೆಯಲ್ಲಿ ಪರಿಹಾರ ಒದಗಿಸಬೇಕೆಂಬ ಚಿಂತನೆ ನಡೆದಿದೆ. ರೈತರು, ಕೂಲಿ ಕಾರ್ಮಿಕರನ್ನು ಕೇಂದ್ರ ಸರ್ಕಾರ ಕೈ ಬಿಟ್ಟಿದ್ದರೂ ರಾಜ್ಯ ಸರ್ಕಾರ ಕೈಬಿಡಲ್ಲ. ಅನುದಾನ ಬಿಡುಗಡೆ ಮಾಡುವಂತೆ ಶೀಘ್ರವೇ ಪ್ರಧಾನಿ ಹಾಗೂ ಕೇಂದ್ರದ ಸಚಿವರ ಬಳಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ, ಸಿಎಂ, ಡಿಸಿಎಂ ಹಾಗೂ ಸಚಿವರ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದರು.