Advertisement
ಹೌದು. ಕಳೆದ ವರ್ಷ ಮಳೆಯ ಕೊರತೆ ಎದುರಾದ ಪರಿಣಾಮ ರಾಜ್ಯ ಸರ್ಕಾರವೇ ಜಿಲ್ಲೆಯ ಎಲ್ಲ ಏಳೂ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿತ್ತು. ಕಂದಾಯ ಸಚಿವರು ಸೇರಿದಂತೆ ಜಿಲ್ಲಾ ಸಚಿವರು ಬರ ಅಧ್ಯಯನ ನಡೆಸಿದರು. ಕೇಂದ್ರ ಬರ ಅಧ್ಯಯನ ತಂಡವೂ ಜಿಲ್ಲೆಗೆ ಆಗಮಿಸಿ ಇಲ್ಲಿನ ಜನರ ನರಕಯಾತನೆ, ಜಾನುವಾರುಗಳ ನರಳಾಟ ಕುರಿತು ಕೇಂದ್ರಕ್ಕೆ ವಸ್ತು ಸ್ಥಿತಿ ವರದಿ ನೀಡಿವೆ. ಆದರೂ ಸರ್ಕಾರದಿಂದ ಯಲಬುರ್ಗಾ ಮತ್ತು ಗಂಗಾವತಿ ತಾಲೂಕಿಗಳಿಗೆ ಮಾತ್ರ ಬರ ಪರಿಹಾರ (ಇನ್‌ಪುಟ್ ಸಬ್ಸಿಡಿ) ಬಿಡುಗಡೆಯಾಗಿದೆ. ಕೊಪ್ಪಳ ಹಾಗೂ ಕುಷ್ಟಗಿ ತಾಲೂಕುಗಳಿಗೆ ಇಲ್ಲಿವರೆಗೂ ನಯಾಪೈಸೆ ಬಂದಿಲ್ಲ.
Related Articles
Advertisement
ತೀವ್ರ ಬರಪೀಡತಕ್ಕಷ್ಟೇ ಪರಿಹಾರ! : ಸರ್ಕಾರಗಳ ನಿಯಮವೇ ವಿಚಿತ್ರ ಎನ್ನುವಂತಿವೆ. ಜಿಲ್ಲೆಯಲ್ಲಿ ಬರದ ತೀವ್ರತೆ ತಾಂಡವಾಡುತ್ತಿದೆ. ಒಂದೆಡೆ ಸರ್ಕಾರವೇ ಕುಡಿಯುವ ನೀರು ಸೇರಿದಂತೆ ಬರ ನಿರ್ವಹಣೆಗೆ ಕೋಟಿ ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ರೈತರ ವಿಷಯದಲ್ಲಿ ಹಿಂದೇಟು ಹಾಕುತ್ತಿದೆ. ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ತೀವ್ರ ಬರದ ಪರಿಸ್ಥಿತಿ ಎದುರಿಸುವ ತಾಲೂಕುಗಳಿಗೆ ಮಾತ್ರ ಬರ ಪರಿಹಾರ ಬಿಡುಗಡೆ ಮಾಡಲಾಗಿದೆಯಂತೆ. ಗಂಗಾವತಿ ಮತ್ತು ಯಲಬುರ್ಗಾ ಮಾತ್ರ ಶೇ. 80ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದರಿಂದ ಅವರಿಗೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಕೊಪ್ಪಳ, ಕುಷ್ಟಗಿ ತೀವ್ರ ಬರದ ಪಟ್ಟಿಯಲ್ಲಿಲ್ಲ ಎನ್ನುತ್ತಿವೆ ದಾಖಲೆಯ ಅಂಕಿ-ಅಂಶ.
ಕೊಪ್ಪಳ, ಕುಷ್ಟಗಿಗೆ ಏಕೆ ಅನ್ಯಾಯ?: ಅಚ್ಚರಿಯ ವಿಷಯವೆಂದರೆ, ಕೊಪ್ಪಳ ಮತ್ತು ಕುಷ್ಟಗಿ ತಾಲೂಕು ಅತಿ ಹೆಚ್ಚು ಮಳೆಯ ಕೊರತೆ ಎದುರಿಸುವ ತಾಲೂಕುಗಳಾಗಿವೆ. ಗಂಗಾವತಿ ಭಾಗ ತುಂಗಭದ್ರಾ ಕಾಲುವೆ ನೀರಿನಿಂದ ರೈತರು ಬಿತ್ತನೆ ಪ್ರಕ್ರಿಯೆ ನಡೆಸುತ್ತಾರೆ. ಆದರೆ ಕುಷ್ಟಗಿ, ಕೊಪ್ಪಳದ ಭಾಗದಲ್ಲಿ ಯಾವುದೇ ಮಹತ್ವದ ನೀರಾವರಿ ಸೌಲಭ್ಯಗಳಿಲ್ಲ. ಇಲ್ಲಿನ ರೈತರಿಗೆ ಬರದ ಬಿಸಿ ತಟ್ಟಿಲ್ಲವೇ? ಅವರ ಬೆಳೆ ಹಾನಿ ಅನುಭವಿಸಿಲ್ಲವೇ ? ಸರ್ಕಾರಗಳಿಂದ ಒಬ್ಬ ರೈತನಿಗೆ ನ್ಯಾಯ, ಇನ್ನೊಬ್ಬ ರೈತನಿಗೆ ಏಕೆ ಅನ್ಯಾಯ ಮಾಡುತ್ತಿದೆ. ಈ ಭಾಗದ ರೈತರು ಏನು ಪಾಪ ಮಾಡಿದ್ದಾರೆ. ನಮ್ಮ ಜನಪ್ರತಿನಿಧಿಗೆ ಇದರ ಬಗ್ಗೆ ಅರಿವಿಲ್ಲವೇ? ಅವರು ಈ ಬಗ್ಗೆ ಕಣ್ತೆರೆದು ನೋಡುತ್ತಿಲ್ಲವೆ ಎನ್ನುವ ಮಾತುಗಳು ರೈತಾಪಿ ವಲಯದಿಂದ ಕೇಳಿ ಬಂದಿವೆ.
ಶಾಸಕ, ಸಂಸದರೇ ಕಣ್ತೆರೆದು ನೋಡಿ: ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಯಾವ ಹಂತಕ್ಕೆ ತಲುಪುತ್ತಿದೆ ಎನ್ನುವುದನ್ನು ಕ್ಷೇತ್ರದ ಶಾಸಕರು ಹಾಗೂ ಸಂಸದರು ಒಮ್ಮೆ ಗಮನಿಸಬೇಕಿದೆ. ಕಳೆದ ವರ್ಷ ತೀವ್ರ ಬರ ಎದುರಿಸಿದ ರೈತರಿಗೆ ಸರ್ಕಾರದಿಂದ ನಯಾಪೈಸೆ ಬಿಡುಗಡೆಯಾಗಿಲ್ಲ. ಇದಕ್ಕೆಲ್ಲ ಏನು ಕಾರಣ ಎನ್ನುವುದನ್ನು ತಿಳಿದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ರೈತರಿಗೆ ಅಲ್ಪ ಪರಿಹಾರ ಕೊಡಿಸುವ ಮೂಲಕವಾದರೂ ಅವರಿಗೆ ನೆರವಾಗಿ. ಸುಮ್ಮನೆ ಆರೋಪ, ಪ್ರತ್ಯಾರೋಪ ಮಾಡುವುದಕ್ಕಿಂತ ಎಲ್ಲಿ ತೊಂದರೆ ಆಗಿದೆ ಎನ್ನುವುದನ್ನು ಅರಿತು ರೈತರಿಗೆ ಬರ ಪರಿಹಾರ ಬರುವಂತೆ ಮಾಡಿ ಎನ್ನುತ್ತಿದೆ ಜಿಲ್ಲೆಯ ನಾಗರಿಕ ಸಮುದಾಯ.
ಸರ್ಕಾರ ಗಂಗಾವತಿ ಹಾಗೂ ಯಲಬುರ್ಗಾ ತಾಲೂಕುಗಳಿಗೆ ಮಾತ್ರ ಬರ ಪರಿಹಾರ ಬಿಡುಗಡೆ ಮಾಡಿದೆ. ಕೊಪ್ಪಳ, ಕುಷ್ಟಗಿ ತಾಲೂಕಿಗೆ ಪರಿಹಾರ ಬಿಡುಗಡೆ ಮಾಡಿಲ್ಲ. ಈ ಕುರಿತು ಸಿಎಂ ಅವರ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿದ್ದೇನೆ. ಕೆಲವೊಂದು ನಿಯಮಗಳ ಪ್ರಕಾರ ತೀವ್ರ ಬರ ಎದುರಿಸುವ ತಾಲೂಕಿಗೆ ಮಾತ್ರ ಪರಿಹಾರ ಬಂದಿದೆ ಎಂದಿದ್ದಾರೆ.•ಪಿ. ಸುನೀಲ್ ಕುಮಾರ, ಜಿಲ್ಲಾಧಿಕಾರಿ
•ದತ್ತು ಕಮ್ಮಾರ