Advertisement

ಬರ; ಜನ-ಜಾನುವಾರು ತತ್ತರ

12:19 PM Mar 14, 2019 | Team Udayavani |

ಶಹಾಪುರ: ಕಳೆದ ನಾಲ್ಕು ವರ್ಷದಿಂದ ಬರ ಆವರಿಸಿದೆ. ಬರದ ತೀವ್ರತೆ ಈ ಬಾರಿ ಇನ್ನೂ ಹೆಚ್ಚಾಗಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಜತೆಗೆ ಮೇವಿನ ಕೊರತೆಯೂ ಎದುರಾಗಿದೆ.

Advertisement

ಈಗಾಗಲೇ ಬಿಸಿಲಿನ ಪ್ರಖರತೆ 40 ಡಿಗ್ರಿ ತಲುಪಿದೆ. ಹೀಗಾಗಿ ಜನ ಜಾನುವಾರುಗಳು ಕುಡಿಯಲು ನೀರಿನ ಅಭಾವದಿಂದ ತತ್ತರಿಸಿ ಹೋಗಿದ್ದಾರೆ. ಹಳ್ಳ, ಕೆರೆ-ಕಟ್ಟೆ, ಬಾವಿಗಳು ಬತ್ತಿ ಹೋಗಿವೆ. ಅಂತರ್ಜಲ ಕುಸಿದಿದೆ. ನೂರಾರು ಕೊಳವೆ ಬಾವಿಗಳಲ್ಲಿ ಹನಿ ನೀರು ಬರುತ್ತಿಲ್ಲ. 

ತಾಲೂಕಿನ ಚಾಮನಾಳ, ಸಲಾದಪುರ, ಕಾಡಂಗೇರಾ, ನಡಿಹಾಳ ಮತ್ತು ಹಯ್ನಾಳ ಭಾಗದ ಕೆಲವು ಹಳ್ಳಿಗಳಲ್ಲಿ
ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೊಳವೆ ಬಾವಿಗಳಲ್ಲೂ ಹನಿ ನೀರಿಲ್ಲದ ಕಾರಣ ಆ ಭಾಗದ ಜನರು ಕುಡಿಯುವ ನೀರಿಗಾಗಿ ನಿತ್ಯ ಪರದಾಡುವಂತಾಗಿದೆ.

ನಗರ ಪ್ರದೇಶದಲ್ಲೂ ವಿವಿಧ ವಾರ್ಡಗಳಲ್ಲಿ ಕುಡಿಯುವ ನೀರಿಗಾಗಿ ನಾಗರಿಕರು ರೋಸಿ ಹೋಗಿದ್ದಾರೆ. ನಗರಸಭೆ ವಿರುದ್ಧ ನಿತ್ಯ ಹಲವು ವಾರ್ಡ್‌ಗಳ ಜನರು ಹಿಡಿಶಾಪ ಹಾಕುತ್ತಿರುವುದು ಸಾಮಾನ್ಯವಾಗಿದೆ. ಬರ ನಿರ್ವಹಣೆಗೆ ಜಿಲ್ಲಾಡಳಿತ ಆಯಾ ಇಲಾಖೆಗಳಿಗೆ ಸಾಕಷ್ಟು ಅನುದಾನ ಕಲ್ಪಿಸಲಾಗಿದೆ. ಆದರೆ ಆ ಅನುದಾನ ಸಮರ್ಪಕ ಬಳಕೆಯಾಗಬೇಕಿದೆ. ಜನ ಜಾನುವಾರುಗಳಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕಿದೆ.

18 ಟನ್‌ ಮೇವು ಸಂಗ್ರಹ: ತಾಲೂಕಿನ ದೋರನಹಳ್ಳಿ ಗ್ರಾಮದ ಉಗ್ರಾಣವೊಂದರಲ್ಲಿ 18.29 ಟನ್‌ ಮೇವು ಸಂಗ್ರಹಿಸಲಾಗಿದೆ. ಪ್ರಸ್ತುತ ಯಾವುದೇ ಮೇವಿನ ಕೊರತೆ ಕಂಡು  ಬರುತ್ತಿಲ್ಲ. ಏಪ್ರಿಲ್‌ ಮೊದಲ ವಾರದಲ್ಲಿ ತಾಲೂಕಿನ ಚಾಮನಾಳ ಮತ್ತು ವಡಿಗೇರಾ ಪ್ರದೇಶದಲ್ಲಿ ಮೇವು ಕೊರತೆ ಕಂಡು ಬರಲಿದೆ  ಎಂದು ಪರಿಶೀಲಿಸಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಭಾಗದ ರೈತರು ಮೇವು ಬೇಡಿಕೆ ಇಟ್ಟಲ್ಲಿ ತಕ್ಷಣ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಬೇಕಾಗುವ ಷ್ಟು ಮೇವು ಸಂಗ್ರಹ ಮಾಡಲಾಗಿದೆ. ಬೇಡಿಕೆ ಬಂದಲ್ಲಿ 2 ರೂ.ಕೆ.ಜಿ.ಯಂತೆ ಭತ್ತದ ಒಣ ಮೇವನ್ನು ರೈತರಿಗೆ ಒದಗಿಸಲಾಗುವುದು ಎಂದು ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಷಣ್ಮುಖ ತಿಳಿಸಿದ್ದಾರೆ. 

Advertisement

ಗೋಗಿ, ಚಾಮನಾಳ ಭಾಗ ಬರದಿಂದ ತತ್ತರಿಸಿದ್ದು, ಈ ಭಾಗದಲ್ಲಿ ನೀರಿಗೂ ಮತ್ತು ಮೇವಿಗೂ ಬರ ಇದೆ. ರೈತರಿಗೆ ಮೇವು ಬ್ಯಾಂಕ್‌ ಬಗ್ಗೆ ಯಾವುದೇ ಯಾವುದೇ ಮಾಹಿತಿ ಇಲ್ಲ. ಕಾರಣ ಅಧಿಕಾರಿಳು ಜಾಗೃತಿ ಮೂಡಿಸಬೇಕಿದೆ. ಮೇವಿಲ್ಲದೆ ಜಾನುವಾರುಗಳು ಸೊರಗುತ್ತಿವೆ. ಕೆರೆ, ಕೊಳ್ಳ, ಬಾವಿಗಳು ಬತ್ತಿವೆ. ನೀರು, ಮೇವಿನ ಕೊರತೆಗೆ ಜನ ಜಾನುವಾರುಗಳಿಗೆ ತೊಂದರೆಯಾಗಿವೆ. ಕೂಡಲೇ ಮೇವು ಬ್ಯಾಂಕ್‌ ಆರಂಭಿಸಬೇಕು.  
 ತುಳಜಾರಾಮ, ರೈತ

ದೋರನಹಳ್ಳಿಯಲ್ಲಿ ಮೇವು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಅದು ರೈತರಿಗೆ ಸದುಪಯೋಗವಾಗಬೇಕು. ಹಯ್ನಾಳ (ಬಿ), ಚಾಮನಾಳ ಸೇರಿದಂತೆ ಹಲವೆಡೆ ತಕ್ಷಣ ಮೇವು ಬ್ಯಾಂಕ್‌ ತೆರೆಯಬೇಕು. ಗೋ ಶಾಲೆ ತೆರೆಯುವ ಅಗತ್ಯ ಇದ್ದು, ಕೂಡಲೇ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು.  
ದೇವು ಬಿ. ಗುಡಿ,ಕನ್ನಡ ಸೇನೆ ಹೈ.ಕ ಸಂಚಾಲಕ

ಬರ ನಿರ್ವಹಣೆಗೆ ಮುಂಜಾಗ್ರತವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾಡಳಿತ ಬರ ನಿರ್ವಹಣೆಗೆ ಅನುದಾನ ಕಲ್ಪಿಸಿದೆ. ಈಗಾಗಲೇ ಬರ ನಿರ್ವಹಣೆಗೆ ಸಾಕಷ್ಟು ಕಡೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ನೀರಿನ ಟ್ಯಾಂಕ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅಗತ್ಯ ಬಿದ್ದಲ್ಲಿ ಕೊಳವೆ ಬಾವಿ ಕೊರೆಯಿಸಲಾಗುತ್ತಿದೆ. ಇನ್ನೂ ಬೇಡಿಕೆ ಬಂದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು.
 ಸಂಗಮೇಶ ಜಿಡಗಾ, ತಹಶೀಲ್ದಾರ್‌

„ಮಲ್ಲಿಕಾರ್ಜುನ ಮುದ್ನೂರ

Advertisement

Udayavani is now on Telegram. Click here to join our channel and stay updated with the latest news.

Next