ಬೆಂಗಳೂರು: ರಾಜ್ಯದಲ್ಲಿ ಬರದ ಛಾಯೆ ಮುಂದುವರಿದಿದ್ದು, ಮಳೆ ನಿರಾಶಾದಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ ಮೊದಲ ವಾರದಲ್ಲಿ ಬರ ಘೋಷಣೆ ಮಾಡಲು ನಿರ್ಧರಿಸಲಾಗಿದ್ದು, ನೂರಕ್ಕೂ ಅಧಿಕ ತಾಲೂಕುಗಳು ಬರ ಪಟ್ಟಿಗೆ ಸೇರುವ ಸಾಧ್ಯತೆ ಇದೆ.
ಸಚಿವ ಸಂಪುಟ ಉಪ ಸಮಿತಿಯಲ್ಲಿ ಕೈಗೊಂಡ ತೀರ್ಮಾನದಂತೆ ತೀವ್ರ ಬರಪೀಡಿತ ತಾಲೂಕುಗಳ ಆಯ್ದ ಗ್ರಾಮಗಳಲ್ಲಿ ಬೆಳೆ ಪರಿಸ್ಥಿತಿ ಸಮೀಕ್ಷೆ (ಗ್ರೌಂಡ್ ಟ್ರಾಥ್ ವೆರಿಫಿಕೇಷನ್) ಮಾಡಲಾಗುತ್ತಿದೆ. ಈ ತಿಂಗಳಾಂತ್ಯಕ್ಕೆ ವರದಿ ಪಡೆದು, ಸೆಪ್ಟಂಬರ್ ಮೊದಲ ವಾರದಲ್ಲಿ ಬರ ಪರಿಸ್ಥಿತಿ ಘೋಷಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರದ ಮಾರ್ಗಸೂಚಿ ಪ್ರಕಾರ ಹೋದರೆ ಕೇವಲ 30-40 ತಾಲೂಕುಗಳು ಬರ ಪಟ್ಟಿಗೆ ಸೇರುತ್ತವೆಯಲ್ಲ ವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಸಮೀಕ್ಷೆಯನ್ನು ತೀರಾ ಕಠಿನವಾಗಿ ಮಾಡಬಾರದು. ಉದಾರವಾಗಿ, ರೈತರಿಗೆ ಅನುಕೂಲವಾಗುವಂತೆ ನಡೆಸಬೇಕು ಎಂದು ಸೂಚಿಸಲಾಗಿದೆ. ಅದರಂತೆ ಹೆಚ್ಚು-ಕಡಿಮೆ ನೂರಕ್ಕಿಂತ ಅಧಿಕ ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರುವ ಸಾಧ್ಯತೆ ಇದೆ’ ಎಂದು ಸ್ಪಷ್ಟಪಡಿಸಿದರು.
ರಾಜ್ಯದ 130 ತಾಲೂಕುಗಳಲ್ಲಿ ಮಳೆ ಕೊರತೆ ಕಂಡುಬಂದಿದೆ. ಬೆಳೆ ಪರಿಸ್ಥಿತಿ ಸಮೀಕ್ಷೆ ನಡೆಸುತ್ತಿರುವ ತಂಡಗಳು ಇಂತಹ ಪ್ರತೀ ತಾಲೂಕಿನ ಕನಿಷ್ಠ ತಲಾ ಹತ್ತು ಗ್ರಾಮಗಳಿಗೆ ಭೇಟಿ ನೀಡಿ, ವಾಸ್ತವ ಚಿತ್ರಣ ಸಂಗ್ರಹಿಸಿ ಪ್ರಮಾಣೀಕರಿಸಲು ಸೂಚಿಸಲಾಗಿದೆ. ಆ. 30ರ ಒಳಗೆ ವರದಿ ಬರಲಿದೆ. ಅದನ್ನು ಆಧರಿಸಿ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಿ, ಕೇಂದ್ರದ ಮಾರ್ಗಸೂಚಿಯಲ್ಲಿ ಬರುವ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು. ಜತೆಗೆ ಆ ಪಟ್ಟಿ ಸಹಿತ ವರದಿಯ ಅಂಶಗಳನ್ನು ಕೇಂದ್ರಕ್ಕೂ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದುವರೆಗೆ ಶೇ. 79ರಷ್ಟು ಬಿತ್ತನೆ ಆಗಿದೆ. ಇದರಲ್ಲಿ ಕೆರೆ-ಕಟ್ಟೆಗಳು, ಕೃಷಿ ಹೊಂಡಗಳಿರುವ ಜಮೀನುಗಳಲ್ಲಿ ಬೆಳೆಗಳ ರಕ್ಷಣೆ ತಕ್ಕಮಟ್ಟಿಗೆ ಆಗಿದೆ. ಸಂಪೂರ್ಣವಾಗಿ ಮಳೆ ಆಶ್ರಯಿಸಿರುವ ಪ್ರದೇಶಗಳಲ್ಲಿ ಬೆಳೆ ರಕ್ಷಣೆ ಮಾಡಲಾಗುತ್ತಿಲ್ಲ. ಈಗಾಗಲೇ ಬಹುತೇಕ ಕಡೆ ಬೆಳೆಗಳು ಒಣಗುತ್ತಿವೆ. ಒಂದು ವೇಳೆ ವಾರದಲ್ಲಿ ಮಳೆ ಬಂದರೆ, ಶೇ. 50ರಿಂದ 60ರಷ್ಟು ಬೆಳೆ ರಕ್ಷಣೆ ಆಗುವ ಸಾಧ್ಯತೆ ಇದೆ. ಆದರೆ ಆ ನಿರೀಕ್ಷೆ ಕೂಡ ಹುಸಿಯಾಗುವ ಲಕ್ಷಣಗಳು ಕಾಣುತ್ತಿವೆ. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿರ್ವಹಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.