Advertisement

ಜಿಲ್ಲೆಯ ಬರ ನಿರ್ವಹಣೆಗಿದೆ 6.5 ಕೋಟಿ ರೂ.

09:00 PM Jun 07, 2019 | Team Udayavani |

ದೇವನಹಳ್ಳಿ: ಜಿಲ್ಲೆಯಲ್ಲಿ ಬರ ನಿರ್ವಹಿಸಲು ಜಿಲ್ಲಾಧಿಕಾರಿಗಳ ಖಾತೆಯಲ್ಲಿ 6.5 ಕೋಟಿ ರೂ. ಇರುವುದರಿಂದ ಹಣದ ಕೊರತೆ ಇಲ್ಲ. ಪ್ರತಿ ಜನರಿಗೂ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ನೀಡುವ ಕಾರ್ಯವಾಗಬೇಕು. ಗ್ರಾಮಗಳಲ್ಲಿ ಯಾರೂ ಗೂಳೆ ಹೋಗಬಾರದು ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ ಬಳಿ ಇರುವ ಜಿಲ್ಲಾ ಸಂಕೀರ್ಣ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿನ ಬರ ಹಾಗೂ ನೈಸರ್ಗಿಕ ವಿಪತ್ತುಗಳಿಂದ ಉಂಟಾದ ಪರಿಸ್ಥಿತಿ ನಿರ್ವಹಣೆ ಹಾಗೂ ಇತರೆ ಆಡಳಿತಾತ್ಮಕ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ನಿಖರ ಮಾಹಿತಿಯೊಂದಿಗೆ ಬನ್ನಿ: ಪ್ರತಿ ಗ್ರಾಮದಲ್ಲೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರಿಗೆ ಕೆಲಸ ಸಿಗುವಂತಾಗಬೇಕು. ಸತತ ಬರಗಾಲದಿಂದ ರೈತರು, ಬಡಜನರು ಹಾಗೂ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ಅಧಿಕಾರಿಗಳು ಕಾಟಾಚಾರಕ್ಕೆ ಸಭೆಗಳಿಗೆ ಬರದೇ ನಿಖರ ಮಾಹಿತಿ ನೀಡಬೇಕು. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ವಿತರಿಸಬೇಕು. ಕೃಷಿ, ತೋಟಗಾರಿಕೆ ಕಂದಾಯ ಇಲಾಖೆ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ತಾಲೂಕು ಕಚೇರಿಗೆ ಬರುವ ಜನರೊಂದಿಗೆ ತಹಶೀಲ್ದಾರ್‌ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಸೂಚಿಸಿದರು.

ಸಾಗುವಳಿ ಚೀಟಿ ಬಾಕಿ ಉಳಿಸಿದರೆ ಕ್ರಮ: ಜಿಲ್ಲೆಯಲ್ಲಿ ಸಾಗುವಳಿ ಚೀಟಿಗಳನ್ನು ವಿಲೇವಾರಿ ಮಾಡದಿದ್ದರೆ ತಹಶೀಲ್ದಾರ್‌ ನೇರ ಹೊಣೆಗಾರರು. ಬಾಕಿ ಉಳಿಸಿಕೊಂಡರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಸಾಗುವಳಿ ಚೀಟಿಗಳನ್ನು ಬಾಕಿ ಉಳಿಸಿಕೊಂಡರೆ ತಹಶೀಲ್ದಾರ್‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಳೆ ಬಂದು ಮನೆಗಳು ಹಾಳಾದರೆ 75 ಸಾವಿರ ರೂ.ವರೆಗೆ ಪರಿಹಾರ ನೀಡುವ ಅವಕಾಶ ವಿದೆ. ಮನೆಗಳು ಬಿದ್ದರೆ ಎಷ್ಟು ಅನುದಾನ ನೀಡಬೇಕೆಂಬುವುದರ ಬಗ್ಗೆ ತಹಶೀಲ್ದಾರ್‌ಗಳಿಗೆ ತಿಳಿದಿಲ್ಲ. ಪ್ರಕೃತಿ ವಿಕೋಪಕ್ಕೆ ಮೃತಪಟ್ಟರೆ 5 ಲಕ್ಷ ರೂ.ವರೆಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜನರ ಸಮಸ್ಯೆ ಆಲಿಸಿ: ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕರ್‌ ನೀರು ನೀಡಲಾಗುತ್ತಿದೆ. ಖಾಸಗಿ ಬೋರ್‌ವೆಲ್‌ಗ‌ಳಿಂದಲೂ ನೀರು ಖರೀದಿಸಿ ಪೂರೈಸಲಾಗುತ್ತದೆ. ಅನೇಕ ಅಧಿಕಾರಿಗಳು ಕಚೇರಿಯಲ್ಲಿ ಇರುವುದಿಲ್ಲ. ಪ್ರತಿ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ತೆರಲಿ ಜನರ ಸಮಸ್ಯೆ ಆಲಿಸಬೇಕು. ಸಾಗುವಳಿ ಚೀಟಿಯನ್ನು ಜೂ.17ರ ಒಳಗೆ ನೀಡಬೇಕು. ಶುದ್ದ ಕುಡಿಯುವ ನೀರಿನ ಘಟಕ ಪರಿಶೀಲಿಸಬೇಕು. ನರೆಗಾ ಯೋಜನೆಯಲ್ಲಿ ಇಂಗು ಗುಂಡಿಗಳ ನಿರ್ಮಾಣ, ಚೆಕ್‌ ಡ್ಯಾಂಗಳ ನಿರ್ಮಿಸಿದರೆ ಅನುಕೂಲವಾಗುವುದು.

Advertisement

ವಿಜಯಪುರದಲ್ಲಿ ನೀರಿನ ಸಮಸ್ಯೆ ಇದ್ದು, ಅದರ ಶಾಶ್ವತ ಪರಿಹಾರಕ್ಕೆ ಕ್ರಿಯಾ ಯೋಜನೆ ರೂಪಿಸಬೇಕು. ನೀರಿನ ಟ್ಯಾಂಕರ್‌ ಗಳಲ್ಲಿ ಜಿಪಿಎಸ್‌ ಕಡ್ಡಾಯವಾಗಿ ಅಳಡಿಸಬೇಕು. ಎಲ್ಲ ತಹಶೀಲ್ದಾರ್‌ಗಳ ಹತ್ತಿರ 50 ಲಕ್ಷ ರೂ ಪರಿಹಾರ ಹಣ ಇರಬೇಕು. ಕಡಿಮೆ ಇದ್ದಲ್ಲಿ 48 ಗಂಟೆಗಳಲ್ಲಿ ಅನುದಾನ ಬಿಡುಗಡೆ ಗೊಳಿಸಲಾಗುವುದು. ನೀರು ಇರುವ ರೈತರಿಗೆ ಮೇವಿನ ಕಿಟ್‌ ನೀಡಿ ಮೇವು ಬೆಳೆಯಲು ಅನುಕೂಲ ಮಾಡಿಕೊಡಲಾಗಿದೆ. ಮೇವಿನ ಕಿಟ್‌ಗಳಿಗೆ ಬೇಡಿಕೆ ಇದ್ದರೆ ನೀಡಲಾಗುವುದು ಎಂದರು.

ದೊಡ್ಡ ಬಳ್ಳಾಪುರ ಶಾಸಕ ವೆಂಕಟರಮಣಯ್ಯ ಮಾತನಾಡಿ, ಕೆಎಲ್‌ಡಿಆರ್‌ನಿಂದ 4.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿದ್ದು, ದುರಸ್ತಿ ಮಾಡಿಸಿದರೂ ಪ್ರಯೋಜನವಾಗುತ್ತಿಲ್ಲ. ಆನ್‌ಲೈನ್‌ ಮೂಲಕ ಬಿತ್ತನೆ ಬೀಜ ನೀಡುತ್ತಿದ್ದು, ಮಳೆ ಬರುತ್ತಿರುವುದರಿಂದ ಬಿತ್ತನೆ ಬೀಜ ಸರಿಯಾದ ಸಮಯಕ್ಕೆ ನೀಡಬೇಕು. ಘಾಟಿಯಲ್ಲಿರುವ ವಿಶ್ವೇಶ್ವರಯ್ಯ ಪಿಕಪ್‌ ಡ್ಯಾಂನಲ್ಲಿ ಮೇಲ್ದರ್ಜೆಗೆ ಏರಿಸಿದರೆ ತೂಬಗೆರೆ ಹೋಬಳಿ ಮತ್ತು ದೊಡ್ಡಬಳ್ಳಾಪುರ ನಗರಕ್ಕೆ ನೀರು ಬರುವಂತೆ ಆಗುವುದು ತಕ್ಷಣ ಡಿಪಿಆರ್‌ ಪ್ರಕ್ರಿಯೆ ಮಾಡಿ ಕ್ರಿಯಾ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.

ಸರ್ಕಾರ 3 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಿದೆ. ಟಾಸ್ಕ್ಫೋರ್ಸ್‌ ಅಡಿ ಬೋರ್‌ವೆಲ್‌ ಕೊರೆಸಲಾಗಿದೆ. 63 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಹಾಗೂ 36 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ಗ‌ಳಿಂದ ನೀರು ಒದಗಿಸಲಾಗಿದೆ. 55800 ಮೇವಿನ ಕಿಟ್‌ ವಿತರಿಸಲಾಗಿದೆ. ಪ್ರತಿ ಶನಿವಾರ ನೀರಿನ ಟ್ಯಾಂಕರ್‌ನಲ್ಲಿ ಒಡೆಸಿದ ಬಿಲ್‌ ತರಿಸಿ ಹಣ ಪಾವತಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇರುವುದರಿಂದ ತಕ್ಷಣ ಬರ ಪರಿಹಾರದ ಹಣ ಬಿಡುಗಡೆ ಮಾಡಲಾಗುತ್ತಿದೆ. ಸಾರ್ವಜನಿಕರ ಸಹಕಾರದೊಂದಿಗೆ ಕೆರೆ ಹೂಳೆತ್ತುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ದೇವೇಗೌಡ, ಎಸ್‌.ರವಿ, ಜಿಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್‌.ಲತಾ, ಉಪ ವಿಭಾಗಾಧಿಕಾರಿ ಮಂಜುನಾಥ್‌ ಇದ್ದರು.

ಈವರೆಗೆ ಪರಿಹಾರ ನೀಡಿಲ್ಲ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈತರು ಜಮೀನು ನೀಡಿದ್ದು, ಈವರೆಗೆ ಪರಿಹಾರ ನೀಡಿಲ್ಲ. ಕೃಷಿ ಇಲಾಖೆ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ವಿಜಯಪುರದ 23 ವಾರ್ಡ್‌ಗಳಲ್ಲಿ 15 ವಾರ್ಡ್‌ಗಳಿಗೆ 5 ಟ್ಯಾಂಕರ್‌ಗಳಲ್ಲಿ ನೀರು ನೀಡಲಾಗುತ್ತಿದೆ. ನಗರದ ಮಿನಿ ವಿಧಾನಸೌಧದಲ್ಲಿರುವ ನೋಂದಣಾಧಿಕಾರಿ ಕಚೇರಿಯು ಮೊದಲನೇ ಮಹಡಿಯಲ್ಲಿರುವುದರಿಂದ ಹಿರಿಯರು, ವಿಕಲಚೇತರನ್ನು ಎತ್ತಿಕೊಂಡು ಹೋಗಬೇಕಾಗಿದೆ. ಅದಕ್ಕಾಗಿ ಲಿಫ್ಟ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರಿಗೆ ಶಾಸಕ ನಿಸರ್ಗ ಎಲ್‌.ಎನ್‌.ನಾರಾಯಣ ಸ್ವಾಮಿ ಮನವಿ ಮಾಡಿದರು.

ವಿಜಯಪುರ ನಗರದಲ್ಲಿ ನೀರಿನ ಅಭಾವ ಹೆಚ್ಚು ಇದೆ. ಅಲ್ಲಿ ಯಾವುದಾದರೂ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಒತ್ತನ್ನು ನಿಡಬೇಕು. ನರೆಗಾ ದಲ್ಲಿ ಬಾಕಿ ಇರುವ ಹಣದ ಬಗ್ಗೆ ಮಾಹಿತಿ ನೀಡಬೇಕು. ಅಧಿಕಾರಿಗಳು ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು.
-ಬಿ.ಎನ್‌.ಬಚ್ಚೇಗೌಡ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next