Advertisement

ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಸಲ್ಲ

09:48 AM Feb 03, 2019 | Team Udayavani |

ಲಿಂಗಸುಗೂರು: ತಾಲೂಕಿನಲ್ಲಿ ಬರ ಆವರಿಸಿದೆ. ಅಧಿಕಾರಿಗಳು ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸದೇ ಜಾಗೃತರಾಗಿ ಕರ್ತವ್ಯ ನಿರ್ವಹಿಸಬೇಕು. ಈ ಬಗ್ಗೆ ಅಸಡ್ಡೆ ತೋರಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಶರತ್‌ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಸಿದರು.

Advertisement

ಪಟ್ಟಣದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಶನಿವಾರ ಬರ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು, ಬರ ನಿರ್ವಹಣೆಗಾಗಿ ಅನೇಕ ಸಭೆಗಳನ್ನು ನಡೆಸಲಾಗಿದೆ. ಮಳೆ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ. ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನೀರಿನ ಲಭ್ಯತೆ ಆಧಾರದಲ್ಲಿ ನೀರು ಪೂರೈಸಬೇಕು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಿಂದ ಕಷ್ಟ ಅನುಭವಿಸುವುದಕ್ಕಿಂತ ಈಗಲೇ ಗ್ರಾಮೀಣ ಭಾಗದಲ್ಲಿ ನೀರಿನ ಮಿತ ಬಳಕೆ ಕುರಿತು ಮತ್ತು ನೀರು ಪೋಲಾಗದಂತೆ ಜಾಗೃತಿ ಮೂಡಿಸಬೇಕು. ಇದಕ್ಕೆ ಜನಪ್ರತಿನಿಧಿಗಳು ಸಹಕಾರ ನೀಡಬೇಕು. ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಖಾಸಗಿ ಜಮೀನಿನಲ್ಲಿರುವ ಬೋರವೆಲ್‌ಗ‌ಳನ್ನು ಗುರುತಿಸಿಕೊಳ್ಳಬೇಕು. ಗ್ರಾಮ ಪಂಚಾಯತಿಯ 14ನೇ ಹಣಕಾಸು ಯೋಜನೆಯಡಿ ಅನುದಾನದಲ್ಲಿ ಶೇ.20ರಷ್ಟು ಅನುದಾನವನ್ನು ಕುಡಿಯುವ ನೀರಿಗೆ ಖರ್ಚು ಮಾಡಬೇಕೆಂಬ ನಿಯಮವಿದೆ ಎಂದರು.

ಕರೆ ಸ್ವೀಕರಿಸಿ: ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮೊಬೈಲ್‌ ಕರೆ ಸ್ವೀಕರಿಸಲ್ಲ. ಸ್ವಿಚ್ ಆಫ್‌, ನಾಟ್ ರಿಚೇಬಲ್‌ ಆಗಿರುತ್ತವೆ ಎಂಬ ಬಗ್ಗೆ ಸಾಕಷ್ಟು ದೂರುಗಳಿವೆ. ಈ ರೀತಿ ಮಾಡಿದರೆ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗುತ್ತವೆ. ಆದ್ದರಿಂದ ಪಿಡಿಒಗಳು 24 ಗಂಟೆಯೂ ಮೊಬೈಲ್‌ ಆನ್‌ ಇಡಬೇಕು. ತಾರೇ ಕರೆ ಮಾಡಿದರೂ ಸ್ವೀಕರಿಸಬೇಕು. ಒಂದು ವೇಳೆ ಇಲ್ಲಿನ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದರೆ ನಿಮ್ಮ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಜಿಪಂ ಕಿರಿಯ ಅಭಿಯಂತರ ಮಲ್ಲಿಕಾರ್ಜುನ ಭಾವುಕೆ ಅವರು ದೂರವಾಣಿ ಕರೆ ಸ್ವೀಕರಿಸಲ್ಲ. ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಅಭಿವೃದ್ಧಿ ಕೆಲಸಗಳು ಮಂದಗತಿಯಲ್ಲಿ ಸಾಗಿವೆ. ಕೂಡಲೇ ಇಂತಹವರು ನಮ್ಮ ಕ್ಷೇತ್ರಕ್ಕೆ ಬೇಡ. ಇವರನ್ನು ಅಮಾನತು ಮಾಡುವಂತೆ ಶಾಸಕ ಡಿ.ಎಸ್‌.ಹೂಲಗೇರಿ ಅವರು ಜಿಪಂ ಸಿಇಒ ಅವರನ್ನು ಒತ್ತಾಯಿಸಿದರು.

ಲಿಂಗಸುಗೂರು ತಾಲೂಕಿನ ಕೆಲ ಗ್ರಾಪಂಗಳ ಪಿಡಿಒಗಳ ಮೇಲೆ ಹಲ್ಲೆ, ನಿಂದನೆ ಮಾಡಿರುವ ಪ್ರಕರಣಗಳು ನಡೆಯುತ್ತಿದ್ದರೂ ನೀವೇನು ಮಾಡುತ್ತಿದ್ದಿರಿ? ನೀವು ಇಲ್ಲಿ ಟೀಮ್‌ ಲೀಡರ್‌ ಇದ್ದಂತೆ. ಕೇವಲ ನೋಟಿಸ್‌ ನೀಡಿದರೆ ಸಾಲದು ಅವರ ವಿರುದ್ಧ ಕೇಸು ದಾಖಲಿಸಿ, ಪಿಡಿಒಗಳಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಾ.ಪಂ ಇಒ ಪ್ರಕಾಶ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

ತಾಪಂ ಅಧ್ಯಕ್ಷೆ ಶ್ವೇತಾ ಪಾಟೀಲ, ಮಿಂಚೇರಿ ಗ್ರಾಮದಲ್ಲಿ ಅಶುದ್ಧ ನೀರು ಪೂರೈಸಲಾಗುತ್ತಿದೆ. ಆ ನೀರನ್ನೇ ಜನರು ಕುಡಿಯುವಂತಾಗಿದೆ. ಸಮಸ್ಯೆ ಬಗ್ಗೆ ಕೇಳ್ಳೋಣ ಅಂದರೆ ಕಾಳಾಪುರ ಪಿಡಿಒ ಅವರು ಮೊಬೈಲ್‌ ಕರೆ ಸ್ವೀಕರಿಸುತ್ತಿಲ್ಲ. ಅಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ ಎಂದು ಬಾಟಲಿಯಲ್ಲಿ ತಂದ ಕಲುಷಿತ ನೀರನ್ನು ಡಿಸಿ ಹಾಗೂ ಜಿಪಂ ಸಿಇಒ ಅವರಿಗೆ ನೀಡಿದರು. ಶೀಘ್ರವೇ ಶುದ್ಧೀಕರಣ ಘಟಕ ಅಳವಡಿಸಿ ನೀರು ಶುದ್ಧೀಕರಿಸಿ ಸರಬರಾಜು ಮಾಡುವಂತೆ ಕಾಳಾಪುರ ಗ್ರಾಪಂ ಕಾರ್ಯದರ್ಶಿಗೆ ಸೂಚಿಸಿದರು. ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ, ಜಿಪಂ ಸಿಇಒ ನಲಿನ್‌ ಅತುಲ್‌, ಉಪ ಕಾರ್ಯದರ್ಶಿ ಮಹ್ಮದ್‌ ಯೂಸೂಫ್‌, ಸಹಾಯಕ ಆಯುಕ್ತ ರಾಜಶೇಖರ ಡಂಬಳ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next