Advertisement

Karnataka: ಬರ ನಿರ್ವಹಣೆ: ಕೇಂದ್ರ, ರಾಜ್ಯ ಸರಕಾರಗಳು ಕಾರ್ಯೋನ್ಮುಖವಾಗಲಿ

11:40 PM Sep 27, 2023 | Team Udayavani |

ಪ್ರಸಕ್ತ ವರ್ಷ ದೇಶದ ಬಹುತೇಕ ಎಲ್ಲೆಡೆ ಮುಂಗಾರು ಕೈಕೊಟ್ಟಿದೆ. ಈಗಾಗಲೇ ದೇಶದ ಕೆಲವು ಭಾಗಗಳಿಂದ ನೈಋತ್ಯ ಮಾರುತಗಳು ಹಿಂದೆ ಸರಿಯತೊಡಗಿದ್ದು ನಿಧಾನಗತಿಯಲ್ಲಿ ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಒಟ್ಟಾರೆ ದೇಶದಲ್ಲಿ ಈ ಬಾರಿ ಮಳೆಗಾಲದ ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ಬರಗಾಲದ ಛಾಯೆ ದೇಶದ ಬಹುತೇಕ ಪ್ರದೇಶಗಳನ್ನು ಆವರಿಸಿದೆ.

Advertisement

ದೇಶಾದ್ಯಂತ 500ಕ್ಕೂ ಅಧಿಕ ಜಿಲ್ಲೆಗಳಲ್ಲಿ ಬರಗಾಲದ ಸನ್ನಿವೇಶ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಪೈಕಿ ಬಹುತೇಕ ಜಿಲ್ಲೆಗಳಲ್ಲಿ ಭಾಗಶಃ ಅಥವಾ ತೀವ್ರ ಬರ ಪರಿಸ್ಥಿತಿ ಇದೆ. ದೇಶದ ಶೇ.53ರಷ್ಟು ಜಿಲ್ಲೆಗಳು ಮಧ್ಯಮ ಬರದ ಸ್ಥಿತಿಯಲ್ಲಿದ್ದರೆ ಈಶಾನ್ಯ ಭಾರತ, ಪೂರ್ವ ಭಾರತದ ಕೆಲವು ಭಾಗಗಳು, ಜಮ್ಮು-ಕಾಶ್ಮೀರ ಮತ್ತು ಕರ್ನಾಟಕ ಸಹಿತ ದಕ್ಷಿಣ ಪರ್ಯಾಯ ದ್ವೀಪದ ಬಹುತೇಕ ಭಾಗಗಳು ಸಾಧಾರಣ ಅಥವಾ ತೀವ್ರ ಬರದ ಸ್ಥಿತಿಯಲ್ಲಿವೆ. ಜುಲೈ ಮತ್ತು ಆಗಸ್ಟ್‌ ದೇಶದ ಮುಂಗಾರಿನ ಎರಡು ಪ್ರಮುಖ ತಿಂಗಳುಗಳಾಗಿದ್ದು ಈ ಅವಧಿಯಲ್ಲಿ ಸಾಮಾನ್ಯವಾಗಿ ದೇಶಾದ್ಯಂತ ಉತ್ತಮ ಮಳೆಯಾಗುತ್ತದೆ. ಆದರೆ ಈ ಬಾರಿ ಆಗಸ್ಟ್‌ ತಿಂಗಳಿನಲ್ಲಿ ನೈಋತ್ಯ ಮಾರುತ ಗಳು ಸಂಪೂರ್ಣ ಕೈಕೊಟ್ಟ ಪರಿಣಾಮ ದೇಶದೆಲ್ಲೆಡೆ ಬರದ ಸನ್ನಿವೇಶ ನಿರ್ಮಾಣವಾಗಿದೆ. ಸೆಪ್ಟಂಬರ್‌ ಆರಂಭದಿಂದೀಚೆಗೆ ಒಂದಿಷ್ಟು ಮಳೆ ಸುರಿದರೂ ಆಗಸ್ಟ್‌ ತಿಂಗಳ ಕೊರತೆಯನ್ನು ಪೂರ್ಣವಾಗಿ ನೀಗಿಸಲು ಸಾಧ್ಯವಾಗಿಲ್ಲ.

ಇದರಿಂದಾಗಿ ದೇಶಾದ್ಯಂತ ಜಲಾಶಯಗಳು ಇನ್ನೂ ಭರ್ತಿಯಾಗದಿರುವುದರಿಂದ ಮುಂದಿನ ತಿಂಗಳುಗಳಲ್ಲಿ ಕೃಷಿ ಮತ್ತು ಕುಡಿಯುವ ನೀರಿಗೆ ತೀವ್ರ ಸಮಸ್ಯೆ ತಲೆದೋರುವ ಮತ್ತು ಜಲ ವಿದ್ಯುದಾಗಾರಗಳಲ್ಲಿ ವಿದ್ಯುತ್‌ ಉತ್ಪಾದನ ಪ್ರಮಾಣದಲ್ಲಿ ಇಳಿಕೆಯಾಗಲಿದ್ದು ವಿದ್ಯುತ್‌ ಅಭಾವ ಎದುರಾಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಮಳೆ ಕೊರತೆಯಿಂದಾಗಿ ಮುಂಗಾರು ಹಂಗಾಮಿ ನಲ್ಲಿ ಕೃಷಿ ಬೆಳೆಗಳ ಇಳುವರಿ ಮೇಲೆ ತೀವ್ರತೆರನಾದ ಪರಿಣಾಮ ಬೀಳಲಿರುವುದು ನಿಶ್ಚಿತ. ಕೃಷಿ ಬೆಳೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಆಹಾರ ಧಾನ್ಯಗಳ ಇಳುವರಿ ಕುಂಠಿತಗೊಂಡದ್ದೇ ಆದಲ್ಲಿ ಇವುಗಳ ಸಮರ್ಪಕ ಪೂರೈಕೆ ಕಷ್ಟಸಾಧ್ಯವಾಗಲಿದೆ ಯಲ್ಲದೆ ಬೆಲೆ ಹೆಚ್ಚಳದ ಆತಂಕವೂ ಎದುರಾಗಿದೆ. ಜತೆಯಲ್ಲಿ ಹಣದುಬ್ಬರ ಇನ್ನಷ್ಟು ಏರಿಕೆಯಾಗಿ ದೇಶದ ಆರ್ಥಿಕತೆಗೆ ಬಲುದೊಡ್ಡ ಹೊಡೆತವನ್ನು ನೀಡಲಿದೆ.

ದೇಶದ ಸರಿಸುಮಾರು ಶೇ. 70ರಷ್ಟು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇತ್ತ ತುರ್ತು ಲಕ್ಷ್ಯ ಹರಿಸಬೇಕಿದೆ. ಬೆಳೆ ನಷ್ಟದಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಪರಿಹಾರ, ರೈತರಿಂದ ಕೃಷಿ ಬೆಳೆಗಳ ನೇರ ಖರೀದಿ ಮತ್ತು ಆಹಾರ ಧಾನ್ಯಗಳು ಪೋಲಾಗದಂತೆ ಸಮರ್ಪಕ ದಾಸ್ತಾನು ವ್ಯವಸ್ಥೆ, ಬೆಲೆ ಹೆಚ್ಚಳವಾಗದಂತೆ ಅಗತ್ಯ ಕ್ರಮ, ಲಭ್ಯವಿರುವ ಆಹಾರ ಧಾನ್ಯಗಳ ಸಮರ್ಪಕ ಪೂರೈಕೆ ವ್ಯವಸ್ಥೆ, ಬರ ಪರಿಸ್ಥಿತಿ ಮತ್ತು ಬೆಲೆ ಹೆಚ್ಚಳವನ್ನು ನೆಪವಾಗಿಸಿ ಕಾಳಸಂತೆ ಕೋರರು ಕೃಷಿ ಉತ್ಪನ್ನಗಳನ್ನು ಅಕ್ರಮ ದಾಸ್ತಾನು ಇರಿಸಿಕೊಳ್ಳದಂತೆ ಕಟ್ಟೆಚ್ಚರ ವಹಿಸುವುದು ಮತ್ತಿತರ ಕ್ರಮಗಳನ್ನು ಸರಕಾರಗಳು ಆದ್ಯತೆಯ ಮೇಲೆ ಕೈಗೊಳ್ಳಬೇಕಿದೆ. ಆಗಸ್ಟ್‌ನಲ್ಲಿ ಮುಂಗಾರು ಕೈಕೊಟ್ಟಾಗಲೇ ಎಚ್ಚೆತ್ತುಕೊಳ್ಳ ಬೇಕಿದ್ದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇನ್ನಾದರೂ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next