ಅರಸೀಕೆರೆ: ತಾಲೂಕಿನಲ್ಲಿ ತೀವ್ರ ಬರಗಾಲವಿದ್ದು, ಜಾನುವಾರುಗಳಿಗೆ ನೀರು, ಮೇವಿನ ವ್ಯವಸ್ಥೆ ಕಲ್ಪಿಸುವಂತೆ ಮಾಜಿ ಶಾಸಕ ಎ.ಎಸ್.ಬಸವರಾಜ್ ಹಾಗೂ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಜಿ.ವಿ.ಟಿ. ಬಸವರಾಜು ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ತಹಶೀಲ್ದಾರ್ ಸಂತೋಷ್‌ಕುಮಾರ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ನೀರಿಗೆ ಪರದಾಟ: ಮಾಜಿ ಶಾಸಕ ಎ.ಎಸ್.ಬಸವರಾಜ್ ಮಾತನಾಡಿ, ಗ್ರಾಮೀಣ ಭಾಗದ ಜನತೆಗೆ ನೀರು ಹಾಗೂ ಜಾನುವಾರುಗಳಿಗೆ ಗೋಶಾಲೆ ಹಾಗೂ ಮೇವು ಬ್ಯಾಂಕ್ ತೆರೆಯುವಂತೆ ಮನವಿ ಮಾಡಿದರು.
ತಾಲೂಕು ಆಡಳಿತ ಬರ ಪರಿಸ್ಥಿತಿ ನಿರ್ವಹಣೆಗೆ ಮೀನ ಮೇಷ ಎಣಿಸಿದರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಎಪಿಎಂಸಿ ಮಾಜಿ ಉಪಾಧ್ಯಕ್ಷ ಶಶಿಕುಮಾರ್, ರೈತ ಮೋರ್ಚಾ ಅಧ್ಯಕ್ಷ ಸ್ವಾಮಿ, ಎಸ್ಸಿ ಮೋರ್ಚಾ ಅಧ್ಯಕ್ಷ ಉಮೇಶ್ ಬೋವಿ, ನಗರ ಬಿಜೆಪಿ ಉಪಾಧ್ಯಕ್ಷ ಚಂದ್ರು ಉಪಸ್ಥಿತರಿದ್ದರು.
Advertisement
ಬರಿದಾಗಿರುವ ಕೆರೆ, ಕಟ್ಟೆಗಳು: ಈ ಸಂದರ್ಭದಲ್ಲಿ ಜಿವಿಟಿ ಬಸವರಾಜ್ ಮಾತನಾಡಿ, ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಾ ಬಂದಿರುವ ತಾಲೂಕಿನಲ್ಲಿ ಕೆರೆಕಟ್ಟೆಗಳು ಬರಿದಾಗಿ ದಶಕಗಳೇ ಕಳೆದಿವೆ. ಮತ್ತೂಂದೆಡೆ ಮಳೆಯ ಕೊರತೆಯಿಂದಾಗಿ ಜಾನುವಾರುಗಳಿಗೆ ನೀರು, ಮೇವು ಸಿಗದಂತಾಗಿದ್ದು ರೈತರು ತಾವು ಪ್ರೀತಿಯಿಂದ ಸಾಕಿ ಬೆಳೆಸಿದ ಹಸು ಕರುಗಳಿಗೆ ನೀರು ಮತ್ತು ಮೇವು ಪೂರೈಸಲು ಸಾಧ್ಯವಾಗದೇ ಪರಿತಪಿಸುತ್ತಿದ್ದರಿಂದ ಜಾನುವಾರುಗಳು ಕಸಾಯಿಖಾನೆ ಪಾಲಾಗುತ್ತಿವೆ. ಪರಿಸ್ಥಿತಿ ಹೀಗಿದ್ದರು ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತ ಕೈಕಟ್ಟಿ ಕುಳಿತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಬರ ನಿರ್ವಹಣೆಗೆ ಸಿದ್ಧತೆ
ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಸಂತೋಷ್ ಕುಮಾರ್, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲೂಕಿನ ಬರ ಪರಿಸ್ಥಿತಿ ಯನ್ನು ನಿಬಾಯಿಸಲು ತಾಲೂಕು ಆಡಳಿತ ಈಗಾಗಲೇ ಕಾರ್ಯೋನ್ಮುಖವಾಗಿದೆ. ಈ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಮಾಹಿತಿ ಸಂಗ್ರಹಿಸಿದ್ದು, ಸಮ ರೋಪಾದಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗು ತ್ತಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ ಖಾಸಗಿಯವರ ಕೊಳವೆ ಬಾವಿಯಿಂದ ನೀರು ಖರೀದಿಸಿ ಪೂರೈಸಲಾಗುತ್ತಿದೆ. ಅದೇ ರೀತಿ ಜಾನುವಾರುಗಳಿಗೆ ಮೇವು ಒದಗಿಸಲು ಹೋಬಳಿವಾರು ಮೇವು ಬ್ಯಾಂಕ್ ತೆರೆಯಲು ಸ್ಥಳವನ್ನು ನಿಗದಿಗೊಳಿಸಲಾಗಿದೆ ಎಂದರು.