Advertisement
ಪ್ರಸಕ್ತ ಮುಂಗಾರಿನಲ್ಲಿ ನೂರು ಹಾಗೂ ಹಿಂಗಾರಿನಲ್ಲಿ 156 ತಾಲೂಕುಗಳು ಬರಕ್ಕೆ ತುತ್ತಾಗಿವೆ. ಇದರಿಂದ ಆಹಾರ ಉತ್ಪಾದನೆಯಲ್ಲಿ ಸುಮಾರು 44 ಲಕ್ಷ ಟನ್ ಖೋತಾ ಆಗಿದೆ. ಇದರಿಂದ ಕೃಷಿ ವಲಯದ ಬೆಳವಣಿಗೆ ದರ 2018-19ರಲ್ಲಿ ಶೇ.4.8ಕ್ಕೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ. ಇದು ರಾಜ್ಯದ ಜಿಡಿಪಿಯಲ್ಲಿ ಕೃಷಿ ಮತ್ತು ಕೈಗಾರಿಕಾ ವಲಯಗಳ ಕೊಡುಗೆ ಮೇಲೆ ಪರಿಣಾಮ ಬೀರಿದ್ದು, ಕ್ರಮವಾಗಿ ಶೇ. 10.11 ಹಾಗೂ ಶೇ. 22.01ಕ್ಕೆ ಇಳಿಕೆಯಾಗುವ ಸ್ಪಷ್ಟ ಸೂಚನೆ ಇದೆ ಎಂದು 2018-19ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ ತಿಳಿಸಿದೆ.
Related Articles
Advertisement
ಇದೆಲ್ಲದರ ನಡುವೆ ರಾಜ್ಯದ ನಿವ್ವಳ ತಲಾದಾಯ ಶೇ.12.7ರಷ್ಟು ಏರಿಕೆಯಾಗಿದೆ. 2018-19ನೇ ಸಾಲಿನಲ್ಲಿ ರಾಜ್ಯದ ನಿವ್ವಳ ತಲಾದಾಯ 2,07,062 ರೂ.ಅಂದಾಜಿಸಲಾಗಿದೆ. ಕಳೆದ ವರ್ಷ ಇದು 1,83,737 ರೂ.ಇತ್ತು. ರಾಷ್ಟ್ರೀಯ ನಿವ್ವಳ ತಲಾದಾಯ 2018-19ನೇ ಸಾಲಿನಲ್ಲಿ 1,25,397 ರೂ.ಆಗಲಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಪ್ರಸಕ್ತ ಸಗಟು ಬೆಲೆಗಳ ಸೂಚ್ಯಂಕವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಇನ್ನು ಸೇವಾ ವಲಯ ಬೆಳವಣಿಗೆ ದರ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ.12.2ರಿಂದ ಶೇ.12.3ರಷ್ಟು, ಸಾರ್ವಜನಿಕ ಆಡಳಿತ ಶೇ.21.4, ಇತರ ಸೇವೆಗಳು (ಶಿಕ್ಷಣ, ಆರೋಗ್ಯ ಇತ್ಯಾದಿ) ಶೇ. 14.4, ವ್ಯಾಪಾರ ಮತ್ತು ದುರಸ್ತಿ ಸೇವೆಗಳು ಶೇ.14.1 ಹಾಗೂ ಸ್ಥಿರಾಸ್ತಿ, ವೃತ್ತಿಪರ ಸೇವೆಗಳ ಬೆಳವಣಿಗೆಯು ರಾಜ್ಯದ ಜಿಡಿಪಿ ಶೇ.9.6ರಷ್ಟು ಬೆಳವಣಿಗೆ ಸಾಧಿಸಲು ಪ್ರಮುಖ ಕೊಡುಗೆ ನೀಡಿವೆ. ಅಂದ ಹಾಗೆ ದೇಶದ ಜಿಡಿಪಿ ಶೇ. 7.2ರಷ್ಟು ವೃದ್ಧಿಯಾಗುವ ನಿರೀಕ್ಷೆ ಇದೆ.