ಬೆಂಗಳೂರು: ಮುಂಗಾರಿನಲ್ಲಿ ಬಾರದೆ ಹಿಂಗಾರಿನ ವೇಳೆಗೆ ಬಂದ ಮಳೆ ಈಗ ಕರ್ನಾಟಕದ ಸಂಕಷ್ಟಕ್ಕೆ ಕಾರಣವಾಗಿದೆ. ಆಗಸ್ಟ್ ಅಂತ್ಯದವರೆಗೆ ಮಳೆ ಕೊರತೆಯಿಂದಾಗಿ 61 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಉಂಟಾಗಿದ್ದು, ಕೇಂದ್ರ ಸರಕಾರದ ಪರಿಷ್ಕೃತ ಮಾರ್ಗಸೂಚಿ, ಬರ ಘೋಷಣೆಯನ್ನು ಮಾಡಲಾರದ ಪರಿಸ್ಥಿತಿಗೆ ದೂಡಿದೆ.
ವಿಧಾನಸೌಧದಲ್ಲಿ ಗುರುವಾರ ನಡೆದ ಬರಕ್ಕೆ ಸಂಬಂಧಿಸಿದ ಸಚಿವ ಸಂಪುಟದ ಉಪಸಮಿತಿ ಸಭೆ ಯಲ್ಲಿ ಈ ಇಕ್ಕಟ್ಟಿನ ಸ್ಥಿತಿ ಬಗ್ಗೆ ಚರ್ಚೆಯಾಗಿದೆ. ಸಭೆ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಬರ ಸಂಪುಟದ ಉಪಸಮಿತಿ ಅಧ್ಯಕ್ಷರಾದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು, ಬರ ಘೋಷಣೆ ಸಂಬಂಧ ಸರಕಾರಕ್ಕೆ ಎದುರಾಗಿರುವ “ಸಂಕಷ್ಟ’ವನ್ನು ತೋಡಿಕೊಂಡಿದ್ದಾರೆ.
ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬಾರದೆ ಬೆಳೆ ನಷ್ಟ ಆಗಿರುವ ಜಿಲ್ಲೆಗಳಿಂದ 10 ದಿನಗಳಲ್ಲಿ ಮಾಹಿತಿ ತರಿಸಿಕೊಂಡು ಕೇಂದ್ರ ಸರಕಾರಕ್ಕೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಜಯಚಂದ್ರ ಹೇಳಿದ್ದಾರೆ.
ರಾಜ್ಯದಲ್ಲಿ ಆಗಸ್ಟ್ ತಿಂಗಳಲ್ಲಿ ಭಾರೀ ಮಳೆ ಕೊರತೆ ಇತ್ತು. ಆಗಿನ ಮಳೆ ಪ್ರಮಾಣದ ಕೊರತೆ ಪ್ರಕಾರ ಆ.31ರವರೆಗೆ ರಾಜ್ಯದ 18 ಜಿಲ್ಲೆಗಳ 61 ತಾಲೂಕುಗಳು ಬರಪೀಡಿತ ಪ್ರದೇಶ ವ್ಯಾಪ್ತಿಗೆ ಬರುತ್ತಿದ್ದವು.
ಆದರೆ, ಸೆಪ್ಟಂಬರ್‌ನಲ್ಲಿ ಉತ್ತಮ ಮಳೆ ಬಿದ್ದಿರುವುದರಿಂದ ಈಗ ಆ ತಾಲೂಕುಗಳು ಬರ ವ್ಯಾಪ್ತಿಗೆ ಬರುವುದಿಲ್ಲ. ಮೇಲಾಗಿ ಕೇಂದ್ರ ಸರಕಾರ ಬರಪೀಡಿತ ಪ್ರದೇಶಗಳ ಘೋಷಣೆಗೆ ಸೆಪ್ಟಂಬರ್‌ವರೆಗಿನ ಮಳೆ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಇನ್ನೊಂದು ಕಡೆ ಆಗಸ್ಟ್ ತಿಂಗಳ ಮಳೆ ಕೊರತೆಯಿಂದಾಗಿ ಬೆಳೆ ನಷ್ಟ ಆಗಿದೆ. ಆದರೆ, ಸದ್ಯದ ಸ್ಥಿತಿಯಲ್ಲಿ ಕೇಂದ್ರ ಸರಕಾರದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಪ್ರದೇಶಗಳ ಘೋಷಣೆ ಮಾಡಲು ಅವಕಾಶವಿಲ್ಲ ಎಂದರು.
“ಸೈನಿಕ ಹುಳು’ ಹಾವಳಿ: ರಾಜ್ಯದ ಎಲ್ಲ ಕಡೆ ಜೋಳ ಮತ್ತು ರಾಗಿಗೆ “ಸೈನಿಕ ಹುಳು ಹಾವಳಿ ಹೆಚ್ಚಾಗಿದೆ. ಹಾಗಾಗಿ, “ಮ್ಯಾನ್ ಪ್ರಾಕ್ಟೋಪಾಸ್ ಔಷಧಿ ಎಲ್ಲ ಕಡೆ ದಾಸ್ತಾನು ಇಡಲಾಗಿದ್ದು, ಅಗತ್ಯವಿರುವ ರೈತರಿಗೆ ಶೇ. 50ರ ಸಹಾಯ ಧನದಲ್ಲಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಯಚಂದ್ರ ಇದೇ ವೇಳೆ ತಿಳಿಸಿದರು.