Advertisement

State Govt ಮತ್ತೆ 21 ತಾಲೂಕುಗಳಲ್ಲಿ ಬರ? ರಾಜ್ಯ ಸರಕಾರದಿಂದ ತಾಲೂಕುಗಳ ಸಮೀಕ್ಷೆ

01:16 AM Oct 10, 2023 | Team Udayavani |

ಬೆಂಗಳೂರು: ಮುಂಗಾರು ವೈಫ‌ಲ್ಯದಿಂದ ಈಗಾಗಲೇ ಮೊದಲ ಹಂತದಲ್ಲಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ಮತ್ತು 35 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ಘೋಷಿಸಿರುವ ರಾಜ್ಯ ಸರಕಾರವು ಪ್ರಸ್ತುತ ಮತ್ತೆ 21 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ತಯಾರಿ ನಡೆಸಿದೆ.

Advertisement

ಬರ ಅಧ್ಯಯನ ಪೂರ್ಣಗೊಳಿಸಿ ಬೆಂಗಳೂರಿಗೆ ಮರಳಿದ ಕೇಂದ್ರ ತಂಡದೊಂದಿಗೆ ಸೋಮವಾರ ನಡೆದ ಸಭೆಯ ಬಳಿಕ  ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಎರಡನೇ ಹಂತದಲ್ಲಿ 21 ತಾಲೂಕುಗಳ ಸಮೀಕ್ಷೆ ನಡೆಸಲಾಗುತ್ತಿದೆ. ಇದರ ವರದಿ ಆಧರಿಸಿ ಕೇಂದ್ರ ಸರಕಾರಕ್ಕೆ ಮತ್ತೂಂದು ವರದಿ ಸಲ್ಲಿಸುತ್ತೇವೆ ಎಂದಿದ್ದಾರೆ.

ಚಾಮರಾಜನಗರ, ಕೆ.ಆರ್‌. ನಗರ, ಅಣ್ಣಿಗೇರಿ, ಆಲೂರು, ಹಾಸನ ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಹೆಬ್ರಿ, ಯಳಂದೂರು, ಬೆಳಗಾವಿ, ಖಾನಾಪುರ, ಮುಂಡರಗಿ, ಬ್ಯಾಡಗಿ, ಹಾನಗಲ್‌, ಶಿಗ್ಗಾಂವಿ, ಕಲಘಟಗಿ, ಅಳ್ನಾವರ, ಅರಸೀಕೆರೆ, ಮೂಡಿಗೆರೆ, ತರಿಕೆರೆ, ಪೊನ್ನಂಪೇಟೆ, ಸಿದ್ದಾಪುರ, ದಾಂಡೇಲಿ ತಾಲೂಕುಗಳಲ್ಲಿ ಸಾಧಾರಣ ಬರಗಾಲದ ಪರಿಸ್ಥಿತಿ ಇದೆ ಎಂದು ಕೃಷ್ಣಬೈರೇಗೌಡರು ತಿಳಿಸಿದ್ದಾರೆ.

ಕೇಂದ್ರ ತಂಡಕ್ಕೆ ಮನವರಿಕೆ
ರಾಜ್ಯದಲ್ಲಿರುವ ಹಸಿರು ಬರ ಅಧ್ಯಯನದ ಬಗ್ಗೆ ಕೇಂದ್ರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಡಲಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬೇಸಗೆಯನ್ನು ನಿಭಾಯಿಸುವುದು ಕಷ್ಟವಾಗಲಿದೆ ಎಂದು ಕೇಂದ್ರ ತಂಡವೇ ಅಭಿಪ್ರಾಯಪಟ್ಟಿದೆ. ರಾಜ್ಯ ಸರಕಾರದ ಮನವಿಗೆ ಅದು ಸಕಾರಾತ್ಮಕವಾಗಿ ಸ್ಪಂದಿಸಿದೆ. ಹತ್ತು ದಿನಗಳಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಕೆಯಾಗಲಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ.

ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ಎಂದು ಈಗಾಗಲೇ ಘೋಷಿಸಿಸಲಾಗಿದೆ. ಈ ಪೈಕಿ 11 ತಾಲೂಕುಗಳಿಗೆ ಮೂರು ತಂಡಗಳಾಗಿ ಭೇಟಿ ನೀಡಿದ್ದ ಕೇಂದ್ರ ತಂಡ ಸಮಗ್ರ ಅಧ್ಯಯನ ನಡೆಸಿದೆ. ಬೆಳೆ ಹಾನಿಯ ವಾಸ್ತವ ಪರಿಶೀಲನೆ, ಸ್ಥಳೀಯ ರೈತರು ಮತ್ತು ಜನಪ್ರತಿನಿಧಿಗಳ ಜತೆಗೂ ಚರ್ಚಿಸಿದ್ದಾರೆ. ರಾಜ್ಯ ಸರಕಾರ ಸಲ್ಲಿಸಿರುವ ಮನವಿಯು ವಸ್ತುನಿಷ್ಠವಾಗಿದೆ ಎಂದು ಕೇಂದ್ರ ತಂಡ ಹೇಳಿದೆ ಎಂದರು.

Advertisement

ಹಾನಿ ಅಧಿಕ
ಬರ ಪರಿಶೀಲನೆಯ ಅನಂತರ ಕೇಂದ್ರ ತಂಡವು ನಮ್ಮ ಜತೆ ಚರ್ಚೆ ನಡೆಸಿದೆ. ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿ¨ªಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ ಎಂದು ಸ್ವತಃ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದರು. ಬೆಳೆಯು ಹಸುರಾಗಿ ಕಂಡುಬಂದರೂ ಮಳೆ ಕೊರತೆಯಿಂದ ಉತ್ತಮ ಇಳುವರಿ ಲಭಿಸುವುದು ಕಷ್ಟಸಾಧ್ಯ. ಹೀಗಾಗಿ ರಾಜ್ಯದಲ್ಲಿ ಹಸುರು ಬರವಿದೆ ಎಂಬ ನಮ್ಮ ಅಹವಾಲನ್ನು ಕೇಂದ್ರ ತಂಡ ಆಲಿಸಿದೆ.

ರಾಜ್ಯದ ಸಣ್ಣ-ಅತಿಸಣ್ಣ ರೈತರ ಅಂಕಿಸಂಖ್ಯೆಯ ಬಗ್ಗೆ ಕೇಂದ್ರ ಸರಕಾರದ ಬಳಿ ಇರುವ ಮಾಹಿತಿ ವಸ್ತುನಿಷ್ಠವಾಗಿಲ್ಲ. ಕೇಂದ್ರದ ಮಾಹಿತಿಯ ಪ್ರಕಾರ ರಾಜ್ಯದ ಸಣ್ಣ-ಅತಿಸಣ್ಣ ರೈತರ ಸಂಖ್ಯೆ ಶೇ. 46ರಷ್ಟು ಮಾತ್ರ. ವಾಸ್ತವದಲ್ಲಿ ಇದು ಶೇ. 60ಕ್ಕೂ ಅಧಿಕವಾಗಿದೆ. ಈ ಮಾಹಿತಿಯನ್ನು ಕೇಂದ್ರಕ್ಕೆ ದೃಢಪಡಿಸಲು ಪೂರಕ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಇನ್ನು ಒಂದು ವಾರದಲ್ಲಿ ಈ ಮಾಹಿತಿಯನ್ನು ಕೇಂದ್ರಕ್ಕೆ ನೀಡಲಾಗುವುದು ಎಂದು ವಿವರಿಸಿದರು.

ಕೇಂದ್ರಕ್ಕೆ ಮತ್ತೊಂದು ಪತ್ರ
ಬರ ಘೋಷಣೆಗೆ ಸಂಬಂಧಿಸಿ ಕೇಂದ್ರ ಸರಕಾರದ ಮಾನದಂಡ ಸರಿಯಾಗಿಲ್ಲ. ಈ ಬಗ್ಗೆ ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಕೃಷಿ ಸಚಿವರನ್ನು ಖುದ್ದು ಭೇಟಿ ಮಾಡಿ ಚರ್ಚಿಸಲು ಹಾಗೂ ಬರ ಘೋಷಣೆಗೆ ಸಂಬಂಧಿಸಿ ರಾಜ್ಯದ ಮನವಿ ನೀಡಲು ಅವಕಾಶ ನೀಡುವಂತೆ ಮತ್ತೂಂದು ಪತ್ರ ಬರೆಯಲಾಗುವುದು.

ಕೇಂದ್ರ ಸಚಿವರ ಭೇಟಿಗೆ ಅವಕಾಶ ನೀಡುವಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆಯೇ ಪತ್ರ ಬರೆದು ಒತ್ತಾಯಿಸಿದ್ದರು. ಆದರೆ ಭೇಟಿಗೆ ಅವಕಾಶ ನೀಡಿರಲಿಲ್ಲ. ಆನ್‌ಲೈನ್‌ ಮೂಲಕ ಮನವಿ ಸಲ್ಲಿಸಲು ಸೂಚಿಸಲಾಗಿತ್ತು. ಹೀಗಾಗಿ ಎರಡನೇ ಹಂತದ ಬರ ಘೋಷಣೆ ಮನವಿಯನ್ನಾದರೂ ಖುದ್ದಾಗಿ ಸ್ವೀಕರಿಸುವಂತೆ ಮತ್ತೂಂದು ಪತ್ರ ಬರೆಯಲಾಗುವುದು ಎಂದರು.

ಫ‌ಸಲ್‌ ಬಿಮಾ ಯೋಜನೆಯೂ ರೈತರ ಪರವಾಗಿಲ್ಲ. ಇದರಲ್ಲಿ ಸಾಕಷ್ಟು ಅನಾನುಕೂಲಗಳಿವೆ ಎಂಬುದನ್ನೂ ಕೇಂದ್ರದ ಬರ ಅಧ್ಯಯನ ತಂಡಕ್ಕೆ ಮನದಟ್ಟು ಮಾಡಿದ್ದು, ಅವಕಾಶ ಲಭಿಸಿದಾಗ ಕೇಂದ್ರ ಸಚಿವರಿಗೂ ಈ ಬಗ್ಗೆ ಮತ್ತೂಮ್ಮೆ ಮನವಿ ಮಾಡಲಾಗುವುದು ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next