Advertisement

Backwater agriculture; ಹಿನ್ನೀರ ಕೃಷಿ ಬರದಲ್ಲೂ ಬಾಗಲಕೋಟೇಲಿ ಭರಪೂರ ಬೆಳೆ!

05:17 PM Jun 19, 2023 | Team Udayavani |

ಬಾಗಲಕೋಟೆ: ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಮುಂಗಾರು ಮಳೆ ಇಲ್ಲದೇ ರೈತರು, ತೀವ್ರ ಚಿಂತೆಯಲ್ಲಿದ್ದಾರೆ. ಮಳೆ ಬಾರದ ಕಾರಣ, ಕಬ್ಬು ಬಿಟ್ಟರೆ, ಈ ವರೆಗೆ ಒಂದು ಎಕರೆಯಷ್ಟೂ ಮುಂಗಾರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಆದರೆ, ಇಲ್ಲಿ ಬರವಿದ್ದರೂ ಭರಪೂರ ಬೆಳೆ ತೆಗೆದಿದ್ದಾರೆ ಎಂದರೆ ನಂಬಲೇಬೇಕು !

Advertisement

ಹೌದು, ನೀರಾವರಿ ಪ್ರದೇಶದಲ್ಲಿ ಅಥವಾ ಕೊಳವೆ ಬಾವಿ, ತೆರೆದ ಬಾವಿ, ನದಿ ಪಕ್ಕದ ರೈತರು ಬೇಸಿಗೆ ಕೃಷಿ ಮಾಡುವುದು ಸಾಮಾನ್ಯ. ಆದರೆ, ಬಾಗಲಕೋಟೆ ಸುತ್ತಲಿನ ಪ್ರದೇಶದ ಸಂತ್ರಸ್ತ ರೈತರು, ಬೇಸಿಗೆ ಕೃಷಿಯನ್ನು ವಿಶೇಷವಾಗಿ ಮಾಡುತ್ತಾರೆ. ಅದರಲ್ಲೂ ನೀರು ಸರಿಯುವುದನ್ನೇ ಕಾಯುವ ರೈತರು, ಕೇವಲ 2ರಿಂದ 3 ತಿಂಗಳಲ್ಲಿ ಭರಪೂರ ಬೆಳೆ ಬೆಳೆದುಕೊಂಡು, ಪುನಃ ತಮ್ಮ ಸಾಮಾನ್ಯ ಕೃಷಿಗೆ ಮರಳುತ್ತಾರೆ.

ಬೇಸಿಗೆ ಕೃಷಿಗಾಗಿಯೇ ಬರುತ್ತಾರೆ: ಈ ಬೇಸಿಗೆ ಕೃಷಿಯ ಇನ್ನೊಂದು ವಿಶೇಷವೆಂದರೆ, ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಭೂಮಿ ಕಳೆದುಕೊಂಡ ರೈತರು, ಬಹುತೇಕ ಪುನರ್‌ವಸತಿ ಕೇಂದ್ರಗಳಲ್ಲಿ ವಾಸವಾಗಿದ್ದಾರೆ. ಪ್ರತಿ ಬೇಸಿಗೆಯಲ್ಲಿ ನದಿ ಮತ್ತು
ಹಿನ್ನೀರ ಪ್ರದೇಶ ಖಾಲಿ ಖಾಲಿಯಾಗುವುದನ್ನೇ ಕಾಯುವ, ಈ ಮುಳುಗಡೆ ಸಂತ್ರಸ್ತರು, ಬೇಸಿಗೆ ಕೃಷಿಗಾಗಿ ತಮ್ಮ ಮೂಲ ಹೊಲಕ್ಕೆ ಬರುತ್ತಾರೆ. ಕೆಲವೆಡೆ, ಬೇಸಿಗೆ ಕೃಷಿ ಮಾಡಿಕೊಳ್ಳಲು ಲಾವಣಿ ಕೂಡ ಮಾಡುತ್ತಾರೆ. ಇಂತಹ ಹಿನ್ನೀರ ಬೇಸಿಗೆ ಕೃಷಿ, ಬಾಗಲಕೋಟೆ ಮತ್ತು ಬೀಳಗಿ ತಾಲೂಕಿನಲ್ಲಿ ಅತಿಹೆಚ್ಚು ನಡೆಯುತ್ತದೆ. ಅದರಲ್ಲೂ ಘಟಪ್ರಭಾ ನದಿ ಪಾತ್ರದಲ್ಲೇ ಆಲಮಟ್ಟಿ ಜಲಾಶಯದ ಹಿನ್ನೀರು ಆವರಿಸಿಕೊಳ್ಳುತ್ತಿದ್ದು, ಬೇಸಿಗೆಯಲ್ಲಿ ಅದು ಖಾಲಿ ಖಾಲಿಯಾಗುತ್ತದೆ. ಆಗ ಆ ಭೂಮಿ ಕಳೆದುಕೊಂಡ ಮೂಲ ರೈತರು, ಕೆಲ ಲಾವಣಿ ಮಾಡುವ ರೈತರು, ಬಂದು ಇಲ್ಲಿ ಕೃಷಿ ಮಾಡಿಕೊಳ್ಳುತ್ತಾರೆ.

ಶೇಂಗಾ ಬೆಳೆಯೇ ಹೆಚ್ಚು: ಈ ಹಿನ್ನೀರ ಬೇಸಿಗೆ ಕೃಷಿಯಲ್ಲಿ ರೈತರು ಅತಿಹೆಚ್ಚು ಶೇಂಗಾ ಬೆಳೆಯನ್ನೇ ಬೆಳೆಯುತ್ತಾರೆ. ಕಾರಣ, ಇದು ಅತ್ಯಂತ ಕಡಿಮೆ ಖರ್ಚುದಾಯಕ. ಜತೆಗೆ ಎರಡರಿಂದ ಮೂರು ತಿಂಗಳಲ್ಲೇ ಬೆಳೆ ಕೈಗೆ ಬರುತ್ತದೆ. ಹೀಗಾಗಿ ರೈತರು, ಹೆಚ್ಚಿನ
ಪ್ರಮಾಣದಲ್ಲಿ ಶೇಂಗಾ ಬೆಳೆದು, ಆದಾಯ ಪಡೆಯಲು ಪ್ರಯತ್ನಿಸುತ್ತಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ 1 ಮತ್ತು 2ನೇ
ಹಂತದಲ್ಲಿ ಕಾಲುವೆ ನಿರ್ಮಾಣ, ಪುನರ್‌ವಸತಿ ಕೇಂದ್ರ ಹಾಗೂ ಹಿನ್ನೀರ ಪ್ರದೇಶ ಹೀಗೆ ಮೂರು ಹಂತದಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಹಿನ್ನೀರ ಪ್ರದೇಶದಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಮಾತ್ರ ಮುಳುಗಡೆ ಭೂಮಿ ಎಂದು ಪರಿಗಣಿಸುತ್ತಿದ್ದು, ಉಳಿದದ್ದು ಸ್ವಾಧೀನಗೊಂಡ ಭೂಮಿ ಎಂದು ಪರಿಗಣಿಸಲಾಗುತ್ತದೆ. ನಾರಾಯಣಪುರ ಜಲಾಶಯ, ಆಲಮಟ್ಟಿ ಜಲಾಶಯ, ಭೀಮಾ ಬ್ರಿಡ್ಜ್ ಸೇರಿ ಒಟ್ಟು 1,76,783 ಎಕರೆ ಭೂಮಿ ಮುಳುಗಡೆಯಾಗಿದೆ. ಅದರಲ್ಲೂ ಬಾಗಲಕೋಟೆ ಮತ್ತು ಬೀಳಗಿ ತಾಲೂಕು ವ್ಯಾಪ್ತಿಯಲ್ಲಿ ಆಲಮಟ್ಟಿ ಜಲಾಶಯ ನಿರ್ಮಾಣದಿಂದ ಅತಿಹೆಚ್ಚು ಭೂಮಿ ಮುಳುಗಡೆಯಾಗಿದ್ದು, ಇಲ್ಲಿಯೇ ಹೆಚ್ಚು
ಬೇಸಿಗೆ ಕೃಷಿ ಕೈಗೊಳ್ಳಲಾಗುತ್ತದೆ.

Advertisement

ನಮ್ಮ ಭೂಮಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಬೇಸಿಗೆಯಲ್ಲಿ ಮಾತ್ರ ಮೂರು ತಿಂಗಳು ಸ್ವಲ್ಪ
ನೀರು ಇರುವುದಿಲ್ಲ. ಆಗ ನಾವು ನಮ್ಮ ಮೂಲ ಹೊಲಕ್ಕೆ ಬಂದು, ಬೇಸಿಗೆ ಶೇಂಗಾ ಬೆಳೆಯುತ್ತವೆ. ನೀರು ನಿಂತು ಭೂಮಿ ಹದವಾಗಿರುತ್ತಿದ್ದು, ಫಲವತ್ತೆಯೂ ಇರುತ್ತದೆ. ಹೆಚ್ಚು ಖರ್ಚು ಇಲ್ಲದೇ, ಕೇವಲ ಬಿತ್ತನೆ, ಮಾಡಿ ಕಸ ತೆಗೆದರೆ ಸಾಕು, ಶೇಂಗಾ ಬೆಳೆ ಭರಪೂರ ಬರುತ್ತದೆ. ಇದು ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಕೆಲವರು ತಾವೇ ಕೃಷಿ ಮಾಡಿಕೊಂಡರೆ,
ಕೆಲವರು ಲಾವಣಿ ಮಾಡಲು ಕೊಡುತ್ತಾರೆ.
ಸಿದ್ದಯ್ಯ ಹಿರೇಮಠ ಮತ್ತು ಮಹಾದೇವ ಕರಾಡೆ,
ಕದಾಂಪುರ, ಸಾಳಗುಂದಿ ರೈತರು

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next