Advertisement

ಬರ ಉಪ ಕಸಬುಗಳಿಗೂ ಬಡಿಯಿತು ಗರ

08:38 AM Jul 27, 2017 | |

ದಾವಣಗೆರೆ: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಉಂಟಾಗಿರುವ ಮಳೆಯ ಕೊರತೆ ಬರೀ ಕೃಷಿ ಮಾತ್ರವಲ್ಲ ರೈತರ ಉಪ
ಕಸಬುಗಳ ಮೇಲೂ ತೀವ್ರ ಪರಿಣಾಮ ಬೀರಿದೆ.

Advertisement

ಕೃಷಿ ಜೊತೆಗೆ ರೈತನಿಗೆ ನಿಯಮಿತ ಆದಾಯ ತಂದು ಕೊಟ್ಟು, ಆತನ ಜೀವನ ಹಸನು ಮಾಡಿದ್ದ ಹೈನುಗಾರಿಕೆ, ಮೇಕೆ, ಕುರಿ, ಕೋಳಿ ಸಾಕಣೆ ಮೇಲೂ ಸಹ ಮಳೆ ಕೊರತೆಯ ಪರಿಣಾಮ ಬೀರಿದೆ. ಬಹುಪಾಲು ರೈತರು ಕೈಗೊಳ್ಳುವ ಹೈನುಗಾರಿಕೆಗೆ ಬರ ಒಂದು ರೀತಿ ಗರ ಬಡಿದಂತಾಗಿದೆ. ಸತತ 2 ವರ್ಷಗಳ ಕಾಲ ಭತ್ತ ಬೆಳೆಯದೇ ಇರುವುದರಿಂದ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹೈನುಗಾರಿಕೆಯನ್ನ ಉಪ ಕಸುಬನ್ನಾಗಿಸಿಕೊಂಡಿದ್ದ ರೈತರು ಸಮಸ್ಯೆಗೆ ಈಡಾಗಿದ್ದಾರೆ. ಭತ್ತದ ಹುಲ್ಲಿನ ಅಲಭ್ಯತೆ ಇದಕ್ಕೆ ಪ್ರಮುಖ ಕಾರಣವಾದರೆ, ಮಳೆ ತಡವಾಗಿ ಹಸಿ ಹುಲ್ಲು ಸಾಕಷ್ಟು ಪ್ರಮಾಣದಲ್ಲಿ  ಸಿಗುತ್ತಿಲ್ಲ. ಇದೆಲ್ಲಕ್ಕೂ ಮುಖ್ಯವಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಿಂದ ರೈತರು ಹೈರಾಣಾಗಿದ್ದಾರೆ.

ಪಶು ಸಂಗೋಪನಾ ಇಲಾಖೆಯ ಮಾಹಿತಿಯಂತೆ ಸದ್ಯ ಇರುವ ಮೇವು ಇನ್ನೂ ನಾಲ್ಕು ವಾರಗಳ ಕಾಲ ಬರುತ್ತದೆ.
ನಂತರ ಮೇವಿನ ಕೊರತೆ ಎದುರಾಗಲಿದೆ. ಇತ್ತೀಚಗಷ್ಟೇ ಮಳೆ ಸುರಿದಿರುವುದರಿಂದ ಒಣ ಮೇವಿಗೆ ಇನ್ನು ಮೂರ್ನಾಲ್ಕು ತಿಂಗಳ ಕಾಯಬೇಕಿದೆ. ರಾಸುಗಳಿಗೆ ಮಳೆಗಾಲದಲ್ಲಿ ಶೆ.75ರಷ್ಟು ಹಸಿ ಮೇವು, ಶೇ.25ರಷ್ಟು ಒಣಮೇವು ಬೇಕಾಗುತ್ತದೆ. ಆದರೆ, ಈಗ ಹಸಿ ಮೇವು ಸಹ ಇಲ್ಲವಾಗಿರುವುದರಿಂದ ಶೇ.100ರಷ್ಟು ಒಣ ಮೇವಿಗೆ ರೈತ ಆಶ್ರಯಿಸುವುದು ಅನಿವಾರ್ಯವಾಗಿದೆ.

ಕುರಿಗಾಹಿಗಳ ಸಮಸ್ಯೆಯಂತೂ ಹೇಳತೀರದ್ದು. ಹಿಂಡುಗಟ್ಟಲೇ ಕುರಿ ಕಟ್ಟಿಕೊಂಡರವರಿಗೆ ಹಿಡಿ ಹುಲ್ಲು ಸಿಗದೇ ಇದ್ದಾಗ ಎದುರಾಗುವ ಪರಿಸ್ಥಿತಿ ಬಿಡಿಸಿ ಹೇಳಬೇಕಿಲ್ಲ. ಕುರಿಗಾಹಿಗಳಿಗೆ ತಮ್ಮ ಹಿಂಡಿನ ಹಸಿವು ನೀಗಿಸಲು ಸಿಕ್ಕ ಸಿಕ್ಕ ಕಡೆ ಮೇವು ಹುಡುಕಿಕೊಂಡು ಅಲೆಯುವಂತಾಗಿದೆ. ಮೊದಲೆಲ್ಲಾ ಉತ್ತರ ಕರ್ನಾಟಕ, ಮಹಾರಾಷ್ಟ್ರದ ಕುರಿಗಾಹಿಗಳು ಬೇಸಿಗೆ ವೇಳೆಗೆ ಮಧ್ಯ ಕರ್ನಾಟಕ, ಹೈದರಾಬಾದ್‌ ಕರ್ನಾಟಕದ ಕಡೆ ಮುಖ ಮಾಡುತ್ತಿದ್ದರು. ಹಳ್ಳ, ನದಿ ಹೆಚ್ಚಿರುವ ಪ್ರದೇಶಗಳಲ್ಲಿ ಬೀಡು ಬಿಡುತ್ತಿದ್ದರು. ಆದರೆ, ಈಗ ಮಧ್ಯ ಕರ್ನಾಟಕದ ಕುರಿಗಾಹಿಗಳೇ ಇತರೆ ಭಾಗಗಳಿಗೆ ಹೋಗುವಂತಹ ಸ್ಥಿತಿ ಬಂದಿದೆ. ಹರಪನಹಳ್ಳಿ, ಜಗಳೂರು, ಬಳ್ಳಾರಿ ಭಾಗದ ಕೆಲ ತಾಲೂಕುಗಳ ಕುರಿಗಾಹಿಗಳು ಈಗ ದಾವಣಗೆರೆ, ಹೊನ್ನಾಳಿ, ಚನ್ನಗಿರಿ ತಾಲೂಕುಗಳಲ್ಲಿ ತಮ್ಮ ಕುರಿ ಹಿಂಡುಗಳೊಂದಿಗೆ ಬೀಡು ಬಿಟ್ಟಿರುವುದು ಸಮಸ್ಯೆ ಭೀಕರತೆ ಎಷ್ಟರಮಟ್ಟಿಗಿದೆ ಎಂಬುದನ್ನು ಊಹಿಸಬಹುದು.

ಇನ್ನು ಕುಕ್ಕುಟೋದ್ಯಮದ ಸಮಸ್ಯೆ ಸಹ ಇದೇ ರೀತಿ ಇದೆ. ಮೆಕ್ಕೆಜೋಳ ಬೆಳೆ ಕುಂಠಿತದ ಪರಿಣಾಮ ನೇರ
ಕುಕ್ಕುಟೋದ್ಯಮದ ಮೇಲೆ ಬೀರಿದೆ ಎಂದರೆ ತಪ್ಪಾಗಲಾರದು. ಕೋಳಿ ಸಿದ್ಧ ಆಹಾರ ತಯಾರಾಗುವುದು
ಮೆಕ್ಕೆಜೋಳದಿಂದ. ಮೂರು ವರ್ಷಗಳಲ್ಲಿ ಮೆಕ್ಕೆಜೋಳ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಕುಕ್ಕುಟೋದ್ಯಮದ ಮೇಲೆ ಭಾರೀ ಹೊಡೆತ ಬಿದ್ದಂತಾಗಿದೆ. 100-200ರಿಂದ 1000 ಮರಿಯವರೆಗೆ ಕೋಳಿ ಸಾಕುತ್ತಿದ್ದ ಸಣ್ಣ ಪುಟ್ಟ ರೈತರು ಕೋಳಿ ಶೆಡ್ಡುಗಳಿಗೆ ಬೀಗ ಜಡಿದಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳು
ಮಾತ್ರ ಉದ್ಯಮದಲ್ಲಿ ಮುಂದುವರಿದಿವೆ. ಇದರಿಂದ ಕೋಳಿ ಮಾಂಸದ ಉತ್ಪಾದನೆ ಕಡಿಮೆಯಾಗಿ ಮಾರುಕಟ್ಟೆಯಲ್ಲಿ ಅದರ ಬೆಲೆ ದುಪ್ಪಟ್ಟಾಗಿದೆ. ಆದರೆ, ಇದರ ಫಲ ಮಾತ್ರ ದೊಡ್ಡ ದೊಡ್ಡ ಕಂಪನಿಗಳಿಗೆ ಮಾತ್ರ ಸಿಗುತ್ತಿರುವುದು ಬರದ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
 
ಮೀನುಗಾರಿಕೆಯದ್ದೂ ಇದೇ ಪಾಡಾಗಿದೆ. ಜಿಲ್ಲೆಯಲ್ಲಿನ ಮೀನುಗಾರಿಕೆ ಸಂಪೂರ್ಣ ನೆಲಕಚ್ಚಿದೆ. ಇದೇ ಕಾರಣಕ್ಕೆ
ಈ ಬಾರಿ ಸರ್ಕಾರ ಮೀನುಗಾರರಿಗೆ 96 ಕೆರೆಗಳನ್ನು ಯಾವುದೇ ಶುಲ್ಕ ಪಡೆಯದೆ ಗುತ್ತಿಗೆ ನವೀಕರಣ ಮಾಡಿಕೊಟ್ಟಿದೆ. ನಮ್ಮ ಜಿಲ್ಲೆಯಲ್ಲಿ 2015-16ರಲ್ಲಿ 27.50 ಲಕ್ಷ ಮೀನು ಉತ್ಪಾದನೆ ಮಾಡಲಾಗಿತ್ತು. 2016-17ರಲ್ಲಿ ಕೇವಲ 4 ಲಕ್ಷ ಮೀನು ಉತ್ಪಾದನೆ ಮಾಡಲಾಗಿದೆ. ಮಳೆ ಕೊರತೆಯಿಂದ ಕಳೆದ ಅವಧಿಯಲ್ಲಿ ಯಾವ ಕೆರೆಗೂ ಮೀನು ಮರಿ ಬಿಡಲಾಗಲಿಲ್ಲ. ಜಿಲ್ಲೆಯಲ್ಲಿ 40 ಹೆಕ್ಟೇರ್‌ ಪ್ರದೇಶ ವ್ಯಾಪ್ತಿ ಹೊಂದಿದ 120, 40 ಹೆಕ್ಟೇರ್‌ಗಿಂತ ಕಡಮೆ ವ್ಯಾಪ್ತಿ ಹೊಂದಿರುವ 100 ಕೆರೆ ಇವೆ. ಇವನ್ನು ಗುತ್ತಿಗೆ ನೀಡಿದ್ದ ಇಲಾಖೆಗೆ 42 ಲಕ್ಷ ರೂ.ನ ಆದಾಯ ಪಡೆದುಕೊಂಡಿತ್ತು.
ಆದರೆ, ಮೀನುಗಾರರಿಗೆ ಯಾವುದೇ ಆದಾಯ ಬರಲಿಲ್ಲ. ಇದೇ ಕಾರಣಕ್ಕೆ ಈ ಬಾರಿ ಉಚಿತವಾಗಿ ಗುತ್ತಿಗೆ ನವೀಕರಣ
ಮಾಡಲಾಗಿದೆ.

Advertisement

ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿರುವ 2,600 ಪೂರ್ಣಕಾಲಿಕ, 2900 ಅರೆಕಾಲಿಕ ಮೀನುಗಾರರ ಕುಟುಂಬಗಳು ಇಂದು ಬೇರೆ ಕಸಬು ಮಾಡಿಕೊಂಡು ಜೀವನ ಮಾಡುತ್ತಿವೆ. ಇನ್ನು ತಮ್ಮ ಹೊಲಗಳಲ್ಲಿ ಹೊಂಡ ನಿರ್ಮಿಸಿಕೊಂಡು ಮೀನು ಕೃಷಿಮಾಡುತ್ತಿದ್ದ ರೈತರ ಆದಾಯ ಸಹ ಕ್ಷೀಣಿಸಿದೆ. ಜಿಲ್ಲೆಯ 30 ಹೆಕ್ಟೇರ್‌ ಪ್ರದೇಶದಲ್ಲಿ 50 ಜನ ರೈತರು ಮೀನು ಉತ್ಪಾದನೆ ಮಾಡುತ್ತಾರೆ. ಇದರಿಂದ ವಾರ್ಷಿಕ 1.2 ಕೋಟಿ ರೂ.ನ ವ್ಯವಹಾರ ನಡೆಯುತ್ತಿತ್ತು. ಈ ಬಾರಿ ಈ ವ್ಯವಹಾರ ಸಹ ಇಲ್ಲವಾಗಿದೆ. ಬೋರ್‌ವೆಲ್‌ ಆಶ್ರಿತ ಮೀನುಗಾರಿಕೆಯಿಂದ ಒಂದಿಷ್ಟು ಆದಾಯ ಬಂದಿದೆಯಾದರೂ ಅದೂ ಸಹ ಹೇಳಿಕೊಳ್ಳುವಂತ ಮೊತ್ತವಲ್ಲ. 

ಪಾಟೀಲ ವೀರನಗೌಡ

Advertisement

Udayavani is now on Telegram. Click here to join our channel and stay updated with the latest news.

Next