ದಾವಣಗೆರೆ: ಬರದ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಇದೀಗ ನಗರದ ನಾಗರಿಕರಿಗೆ ಬೋರ್‌ವೆಲ್‌ಗಳಿಂದ ಕುಡಿಯುವ ನೀರು ಸರಬರಾಜು ಮಾಡಬೇಕಿರುವುದರಿಂದ ಮಿತವಾಗಿ ನೀರು ಬಳಸುವಂತೆ ಶಾಸಕ ಶಾಮನೂರು ಶಿವಶಂಕರಪ್ಪ ಮನವಿ ಮಾಡಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಮಳೆ ಬಾರದೇ ರಾಜ್ಯಾದ್ಯಂತ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಇದಕ್ಕೆ ದಾವಣಗೆರೆಯೂ ಹೊರತಲ್ಲ. ನಗರದದಲ್ಲಿ ಇದುವರೆಗೂ ನೀರಿನ ಸಮಸ್ಯೆ ಎದುರಾಗದಂತೆ ಮಹಾನಗರ ಪಾಲಿಕೆ ಕ್ರಮ ವಹಿಸಿದೆ. ಆದರೆ, ಪ್ರಸ್ತುತ ನೀರಿನ ಸಮಸ್ಯೆ ಅಧಿಕವಾಗಿದೆ.
ತುಂಗಭದ್ರಾ ನದಿ, ಕುಂದವಾಡ ಕೆರೆ ಹಾಗೂ ಟಿ.ವಿ. ಸ್ಟೇಷನ್ ಕೆರೆಯಲ್ಲಿ ನೀರಿನ ಕೊರತೆ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ. ಮಹಾನಗರಪಾಲಿಕೆ ವ್ಯಾಪ್ತಿಯ ಶೇ.60ರಷ್ಟು ಭಾಗಕ್ಕೆ ತುಂಗಭದ್ರಾ ನದಿಯಿಂದ ಸರಬರಾಜು ಆಗುತ್ತಿತ್ತು.
ಇದೀಗ ಎರಡನೇ ಹಂತದ ನೀರು ಸರಬರಾಜು ಕೇಂದ್ರದ ರಾಜನಹಳ್ಳಿ ಜಾಕ್‌ವೆಲ್‌ನಲ್ಲಿ ನೀರು ಸಂಪೂರ್ಣ ಬತ್ತಿಹೋಗಿದ್ದು ಈ ಭಾಗದಿಂದ ಸರಬರಾಜು ಆಗುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಇದುವರೆಗೂ ಟ್ಯಾಂಕರ್‌ಗಳಿಂದ ಪ್ರತಿದಿನ ನೀರು ಪೂರೈಸಲಾಗುತ್ತಿತ್ತು.
ಇನ್ನು ಮುಂದೆ ಅದು ಸಹ ಸ್ಥಗಿತಗೊಳ್ಳಲಿದೆ ಅವರು ಹೇಳಿದ್ದಾರೆ. ಸದ್ಯ ಕುಂದವಾಡ ಕೆರೆಯಲ್ಲಿ 1.5 ಮೀಟರ್ ಹಾಗೂ ಟಿ.ವಿ.ಸ್ಟೇಷನ್ ಕೆರೆಯಲ್ಲಿ ಕೇವಲ 2 ಮೀಟರ್ ನೀರು ಮಾತ್ರ ಇದ್ದು, ಈ ನೀರನ್ನು ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಕೆಗೆ ಸೂಚಿಸಲಾಗಿದೆ. ಈಗಾಗಲೇ ನಗರದಲ್ಲಿ 41 ವಾರ್ಡ್‌ಗಳಲ್ಲಿ 571 ಸಬ್‌ಮರ್ಸಿಬಲ್ ಮೋಟರ್ ಅಳವಡಿಸಿದ್ದು, ಬೋರ್‌ವೆರ್‌ಗಳಿಂದ ನೀರು ಕೊಡಬೇಕಿದೆ.
ಚಾಲನೆಯಲ್ಲಿರುವ 395 ಹ್ಯಾಂಡ್‌ಪಂಪ್ ಬೋರ್‌ವೆಲ್ ಗಳ ನೀರು ವ್ಯವಸ್ಥೆಗೆ ಸೂಚನೆ ನೀಡಿದ್ದು, ನಾಗರೀಕರು ನೀರನ್ನು ಮಿತವಾಗಿ ಬಳಸಬೇಕೆಂದು ಶಾಸಕರು ಕೋರಿದ್ದಾರೆ. ಖಾಸಗಿ ಬೋರ್‌ವೆಲ್‌ಗಳ ಮಾಲೀಕರು ತಮ್ಮ ಮನೆ ಅಥವಾ ಅಂಗಡಿ ಸುತ್ತಮುತ್ತಲಿನ ನಿವಾಸಿಗಳಿಗೆ ನೀರು ನೀಡಿ ಸಮಸ್ಯೆಯನ್ನು ನೀಗಿಸಲು ಸಹಕರಿಸುವಂತೆ ವಿನಂತಿಸಿಕೊಂಡಿರುವ ಅವರು,
ನೀರಿನ ಸಮಸ್ಯೆಯನ್ನು ಕೆಲವು ಖಾಸಗಿ ಟ್ಯಾಂಕರ್‌ಗಳ ಮಾಲೀಕರು ದುರುಪಯೋಗ ಪಡಿಸಿಕೊಂಡು ಹೆಚ್ಚಿನ ದರ ವಸೂಲು ಮಾಡುವ ಬಗ್ಗೆ ಈಗಾಗಲೇ ಸಾರ್ವಜನಿಕರ ದೂರು ಬಂದಿದೆ. ಇಂತಹ ಬರ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗುವ ಮಂದಿಗೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲೀಸ್ ವರಿಷ್ಠಾಧಿಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.