ಹಾಸನ: ಅರಸೀಕೆರೆ ತಾಲೂಕಿನಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಜಾನುವಾರುಗಳ ಮೇವು ಪೂರೈಕೆಗೆ ಮೇವು ಬ್ಯಾಂಕ್ ತೆರೆಯಬೇಕು ಹಾಗೂ ಅರಸೀಕೆರೆ ತಾಲೂಕಿನ ಬರಪರಿಹಾರ ಕಾರ್ಯಗಳಿಗೆ ಹೆಚ್ಚು ಅನುದಾನ ನೀಡಬೇಕು ಎಂದು ಆರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಆಗ್ರಹಪಡಿಸಿದರು.
ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತ್ತೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರಸೀಕೆರೆ ತಾಲೂಕಿನ ಬರಪಸ್ಥಿತಿಯ ವಿವರ ನೀಡಿದ ಶಿವಲಿಂಗೇಗೌಡ ಅವರು, ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ಜ್ವರ ಕಾಣಿಸಿಕೊಂಡಿದ್ದರಿಂದ ತಾಲೂಕಿನಲ್ಲಿ ತೆರೆದಿದ್ದ ಗೋಶಾಲೆಗಳನ್ನು ಮುಚ್ಚಲಾಗಿದೆ.
ಮೇವು ಬ್ಯಾಂಕ್‌ಗಳನ್ನು ತೆರೆದು ಜಾನುವಾರುಗಳಿಗೆ ಮೇವು ಪೂರೈಸುವ ಭರವಸೆ ನೀಡಲಾಗಿತ್ತು. ಆದರೆ ಈವರೆಗೆ ಮೇವು ಬ್ಯಾಂಕ್ ತೆರೆದಿಲ್ಲ. ಅರಸೀಕೆರೆ ತಾಲೂಕಿನಲ್ಲಿ ಬರ ಪರಿಸ್ಥಿತಿ ತೀವ್ರವಾಗಿರುವುದರಿಂದ ಜಿಲ್ಲೆಯ ಬರ ಪೀಡಿತ ತಾಲೂಕುಗಳಂತೆ ಅರಸೀಕೆರೆ ತಾಲೂಕಿಗೆ ಅನುದಾನ ನೀಡಿದರೆ ಬರ ನಿರ್ವಹಣೆ ಕಷ್ಟ ವಾಗುತ್ತದೆ. ಆದ್ದರಿಂದ ಅರಸೀಕೆರೆ ತಾಲೂಕಿಗೆ ಹೆಚ್ಚಿನ ಅನುದಾನ ನೀಡಬೇಕು.
ಕನಿಷ್ಟ 50 ಟನ್ ಮೇವನ್ನು ಶೀಘ್ರವಾಗಿ ಸಂಗ್ರಹಿಸಿ ಮೇವು ಬ್ಯಾಂಕ್ ತೆರೆಯಬೇಕೆಂದು ಒತ್ತಾಯಿಸಿದರು. ಶಾಸಕರ ಆಗ್ರಹಕ್ಕೆ ಸ್ಪಂದಿಸಿದ ಸಚಿವ ಎ.ಮಂಜು ಅವರು, ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಅರಸೀಕೆರೆ ತಾಲೂಕಿಗೆ ಮೇವಿಗಾಗಿ ಹೆಚ್ಚುವರಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶಾಸಕರುಗಳಾದ ಎಚ್.ಎಸ್.ಪ್ರಕಾಶ್, ಎಚ್.ಕೆ.ಕುಮಾರಸ್ವಾಮಿ ಮತ್ತು ಸಿ.ಎನ್.ಬಾಲಕೃಷ್ಣ ಅವರೂ ತಮ್ಮ ಕ್ಷೇತ್ರಗಳಲ್ಲಿನ ಬರ ಪರಿಸ್ಥಿತಿ, ಕುಡಿವ ನೀರಿನ ಸಮಸ್ಯೆಗಳನ್ನು ಸಭೆಯ ಮುಂದಿಟ್ಟು ಹೆಚ್ಚಿನ ಅನುದಾನ ಒದಗಿಸಬೇಕು. ಇದೇ ವೇಳೆ ಈ ಹಿಂದೆ ರೈತರಿಗೆ ಬೆಳೆ ವಿಮೆ ಪರಿಹಾರ ಸರಿಯಾಗಿ ದೊರೆತಿಲ್ಲ. ಜಿಲ್ಲೆಯಲ್ಲಿ ಈ ವರ್ಷವೂ ಹಿಂಗಾರು ಮತ್ತು ಮುಂಗಾರು ಮಳೆ ಸಂಪೂರ್ಣ ವಿಫಲವಾಗಿದೆ.
ಬೆಳೆ ಪರಿಹಾರವನ್ನು ಸಕಾಲದಲ್ಲಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಒಕ್ಕೊರಲು ಒತ್ತಾಯ ಮಂಡಿಸಿದರು. ಶಾಸಕರಾದ ಎಚ್.ಎಸ್.ಪ್ರಕಾಶ್ ಮಾತನಾಡಿ, ಕೊಳವೆ ಬಾವಿಗಳನ್ನು ಕೊರೆಯಲು ಈ ಹಿಂದೆ 30 ರಿಂದ 40 ಸಾವಿರ ರೂ.ಅಂದಾಜಿಸಲಾಗಿತ್ತು. ಆದರೆ ಈಗ 300 ಅಡಿಗಳ ಬದಲು 800 ಅಡಿ ಕೊರೆದರೂ ನೀರು ಸಿಗದೆ ಬಿಲ್ಲಿನ ಮೊತ್ತ ಹೆಚ್ಚುತ್ತಿದೆ. ಕೊಳವೆ ಬಾವಿಗಳನ್ನು ಹೆಚ್ಚು ಆಳಕ್ಕೆ ಕೊರೆದ ವ್ಯತ್ಯಾಸದ ಮೊತ್ತವನ್ನು ಪಾವತಿ ಸಬೇಕು ಎಂದು ಒತ್ತಾಯಿಸಿದರು.