ಬೆಂಗಳೂರು: ಕೋವಿಡ್ 19 ವೈರಸ್ ಭೀತಿ ಹಲವು ಉದ್ಯಮಗಳ ಮೇಲೆ ಕರಿನೆರಳು ಬೀರಿದೆ. ದಕ್ಷಿಣ ಭಾರತದ ಹೋಲ್‌ಸೇಲ್ ಬಟ್ಟೆಗಳ ಮಾರಾಟ ಕೇಂದ್ರ ಎನಿಸಿಕೊಂಡಿರುವ ಚಿಕ್ಕಪೇಟೆಯ ಟೆಕ್ಸ್‌ಟೈಲ್ಸ್ ಉದ್ಯ ಮದ ಮೇಲೂ ದೊಡ್ಡ ಹೊಡೆತ ಬಿದ್ದಿದೆ.
ಬೆಂಗಳೂರಿನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಹೋಲ್‌ಸೇಲ್ ಬಟ್ಟೆ ಅಂಗಳಿವೆ. ಅವುಗಳೆಲ್ಲವೂ ದಿನಕ್ಕೆ ಕೋಟ್ಯಂತರ ರೂ.ವ್ಯಾಪಾರ ವಹಿವಾಟು ನಡೆಸುತ್ತಿದ್ದವು. ಕಳೆದ ಹದಿನೈದು ದಿನಗಳಲ್ಲಿ ಹೋಲ್ ಸೇಲ್ ಬಟ್ಟೆ ವ್ಯಾಪಾರ ಶೇ.50- 60 ರಷ್ಟು ಕುಸಿತ ಕಂಡಿದ್ದು,
ಕೋವಿಡ್ 19 ವೈರಸ್ ಆತಂಕದ ಹಿನ್ನೆಲೆಯಲ್ಲಿ ವಹಿವಾಟು ಸ್ಥಗಿತಗೊಂಡಿದೆ ಎಂದು ಚಿಕ್ಕಪೇಟೆಯ ಹೋಲ್‌ಸೇಲ್ ಬಟ್ಟೆ ಡೀಲರ್‌ಗಳು ಹೇಳಿದ್ದಾರೆ. ಕಳೆದ ಎರಡು-ಮೂರು ತಿಂಗಳಲ್ಲಿ ಹೇಳಿಕೊಳ್ಳುವಂತಹ ಬಟ್ಟೆ ವ್ಯಾಪಾರ ಆಗುತ್ತಿರಲಿಲ್ಲ. ಯುಗಾದಿ ಹಬ್ಬದ ವೇಳೆಯಲ್ಲಾದರೂ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ಚಿಕ್ಕಪೇಟೆಯ ಬಟ್ಟೆ ವ್ಯಾಪಾರಸ್ಥರರಿದ್ದರು. ಅದರೆ, ದಿಢೀರ್ ಕಾಣಿಸಿಕೊಂಡ ಕೊರೊನಾ ವ್ಯಾಪಾರಕ್ಕೆ ತಣ್ಣೀರೆರಚಿದೆ.
ಇಡೀ ದಕ್ಷಿಣ ಭಾರತಕ್ಕೆ ಮಾರಾಟ: ಚಿಕ್ಕಪೇಟೆಯಿಂದಲೇ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಭಿನ್ನ ಶೈಲಿಯ ಶೂಟ್ಸ್, ಶರ್ಟ್, ಸ್ಕರ್ಟ್ಸ್ ಸೇರಿದಂತೆ ಇನ್ನಿತರ ಬಟ್ಟೆಗಳು ಸರಬರಾಜು ಆಗುತ್ತದೆ. ನೆರೆಯ ತಮಿಳು ನಾಡು, ಆಂಧ್ರಪ್ರದೇಶ, ಹೈದ್ರಾಬಾದ್, ಕೇರಳದಿಂದ ಹೋಲ್‌ಸೇಲ್ ಡೀಲರ್‌ಗಳು ಬಟ್ಟೆಗಳ ಖರೀದಿಗಾಗಿ ಚಿಕ್ಕಪೇಟೆಗೆ ಬರುತ್ತಾರೆ. ಶೇ.50 ರಷ್ಟು ಬಟ್ಟೆ ಉತ್ಪನ್ನಗಳು ಚಿಕ್ಕಪೇಟೆಯಿಂದ ದಕ್ಷಿಣ ಭಾರದ ಎಲ್ಲ ರಾಜ್ಯಗಳಿಗೂ ರವಾನೆ ಆಗುತ್ತವೆ ಎಂದು ಡೀಲರ್‌ಗಳು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಚಿಕ್ಕಪೇಟೆಯಿಂದಲೇ ಬಟ್ಟೆಗಳು ರವಾನೆ ಆಗುತ್ತವೆ. ಕೋಟ್ಯಂತರ ರೂ.ವಹಿವಾಟು ಪ್ರತಿದಿನ ನಡೆಯುತ್ತದೆ ಎಂದರು.
25 ಸಾವಿರಕ್ಕೂ ಹೆಚ್ಚು ಉದ್ಯೋಗಗಳು: ಚಿಕ್ಕಪೇಟೆಯ ಟೆಕ್ಸ್‌ಟೆಲ್ಸ್ ಉದ್ಯಮದಲ್ಲಿ 25 ಸಾವಿರಕ್ಕೂ ಅಧಿಕ ಜನರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಡೀಲರ್‌ಗಳು ಬಟ್ಟೆ ಅಂಗಡಿ ಸೇರಿದಂತೆ ಹಲವು ವೈಹಿವಾಟುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ವ್ಯಾಪಾರ ಇಲ್ಲದ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಸಂಬಳ ನೀಡುವುದು ಹೇಗೆ ಎಂಬ ದುಗಡ ಮಾಲೀಕರದ್ದು. ಪ್ರತಿ ವರ್ಷ ಯುಗಾದಿ ವೇಳೆ ಎಲ್ಲಾ ಬಟ್ಟೆ ಅಂಗಡಿ ಗಳು ಜನರಿಂದ ತುಂಬಿರುತ್ತಿದ್ದವು. ಆದರೆ, ಈ ವರ್ಷ ಆ ಪರಿಸ್ಥಿತಿಯಿಲ್ಲ. ಈಗಲೇ ಭವಿಷ್ಯತ್ತಿನ ಬಗ್ಗೆ ಚಿಂತೆ ಕಾಡಲಾರಂಭಿಸಿದೆ ಎಂದು ಚಿಕ್ಕಪೇಟೆ ಬಟ್ಟೆ ವ್ಯಾಪಾರಿ ರಾಮ್‌ಸೇಠ್ ಹೇಳಿದರು.
ಇಂದಿನಿಂದ ಸ್ಥಗಿತ: ಕೋವಿಡ್ 19 ವೈರಸ್ ಭೀತಿಯ ಹಿನ್ನೆಲೆಯಲ್ಲಿ ದಿ ಬೆಂಗಳೂರು ಹೋಲ್‌ಸೇಲ್ ಕ್ಲಾಥ್ ಮರ್ಚೆಂಟ್ ಅಸೋಸಿಯೇಷನ್ ಮಾ.22-25ರ ವರೆಗೆ ವ್ಯಾಪಾರವನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗ್ರಾಹಕರು ಮತ್ತು ವ್ಯಾಪಾರಿಗಳು ರೈಲ್ ಮತ್ತು ಬಸ್‌ನಲ್ಲಿ ಬರುತ್ತಾರೆ.ಆ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಾ.25 ನಂತರ ವ್ಯಾಪಾರವನ್ನು ಆರಂಭಿಸಬೇಕೆ-ಬೇಡವೆ ನಿರ್ಧರಿಸಲಾಗುವುದು ಎಂದು ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಮಾಹಿತಿ ನೀಡಿದ್ದಾರೆ.
ಕೋವಿಡ್ 19 ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮಾ.22- 25ರ ವರೆಗೆ ವ್ಯಾಪರವನ್ನು ಬಂದ್ ಮಾಡಲು ತೀರ್ಮಾನಿಸಲಾಗಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.
– ಯೋಗೇಶ್ ವಿ.ಸೇಠ್, ದಿ ಬೆಂಗಳೂರು ಹೋಲ್ಸ್‌ಸೇಲ್ ಕ್ಲಾಥ್ ಮರ್ಚೆಂಟ್ ಅಸೋಸಿಯೇಷನ್ ಕಾರ್ಯದರ್ಶಿ
–ದೇವೇಶ ಸೂರಗುಪ್ಪ